Advertisement
ಈ ಘಟನೆ ನಿನ್ನೆ ಭಾನುವಾರ ಇಲ್ಲಿ ನಡೆದಿದೆ. ಆರೋಪಿಯು ಹರಿತವಾದ ಆಯುಧದೊಂದಿಗೆ ತನ್ನ ತಂದೆಯ ಮನೆಯನ್ನು ಪ್ರವೇಶಿಸಿ ಆತನನ್ನು ಹಲವು ಬಾರಿ ಇರಿದಿದ್ದಾನೆ. ಆರೋಪಿಯನ್ನು ರಾಹುಲ್ ಮಟ್ಟಾ ಎಂದು ಗುರುತಿಸಲಾಗಿದೆ. ಈತನಿಗೆ ಮನೋ ಖನ್ನತೆಯಿದ್ದು ಕ್ರಿಮಿನಲ್ ಇತಿಹಾಸವನ್ನೂ ಹೊಂದಿದ್ದಾನೆ. ಕಳೆದ ವರ್ಷ ಪೂರ್ವ ದಿಲ್ಲಿಯಲ್ಲಿ ಆತ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ದಿಲ್ಲಿ ಪೊಲೀಸರಿಂದ ಬಂಧಿತನಾಗಿದ್ದ.
Related Articles
Advertisement
ನಿನ್ನೆ ಭಾನುವಾರ ರಾಹುಲ್, ತನ್ನ ತಂದೆ ವಾಸವಾಗಿರುವ ಫ್ಲಾಟ್‌ನ ಕಟ್ಟಡವನ್ನು ಪ್ರವೇಶಿಸಿದ್ದ. ಸೆಕ್ಯುರಿಟಿ ಗಾರ್ಡ್‌ಗಳು ಆತನನ್ನು ತಡೆದಿದ್ದರು. ಮಾತಿನ ಜಗಳದ ನಡುವೆ ಫ್ಲಾಟ್ ಕಟ್ಟಡದ ಕಾರ್ಯದರ್ಶಿ ಬಂದು ರಾಹುಲ್‌ನನ್ನು ಹೊರಗೆ ಕಳುಹಿಸಲು ಯತ್ನಿಸಿದ್ದರು. ಸಿಟ್ಟಿಗೆದ್ದ ರಾಹುಲ್ ತನ್ನಲ್ಲಿನ ಚೂರಿಯಿಂದ ಗಾರ್ಡ್ ಹಾಗೂ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದ. ಒಡನೆಯೇ ಆರ್ ಪಿ ಮಟ್ಟಾ ಅವರನ್ನು ಕರೆಸಿಕೊಳ್ಳಲಾಯಿತು.
ಮಟ್ಟಾ ಬಂದೊಡನೆಯೇ ರಾಹುಲ್ ಅವರೊಂದಿಗೆ ಜಗಳಕ್ಕಿಳಿದು ಗಾರ್ಡ್ ಕೋಣೆಯಲ್ಲೇ ಅವರನ್ನು ಹಲವು ಬಾರಿ ಇರಿದ. ತತ್‌ಕ್ಷಣವೇ ಪೊಲೀಸರನ್ನು ಕರೆಸಲಾಯಿತು. ಪೊಲೀಸರನ್ನು ಕಾಣುತ್ತಲೇ ರಾಹುಲ್ ಇದೇ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ಗೆಳೆಯ ಶರ್ಮಾ ಅವರ ಮನೆಯೊಳಗೆ ನುಗ್ಗಿ ಅವಿತುಕೊಂಡ.
ಅಲ್ಲಿಗೂ ಪೊಲೀಸರು ಬಂದಾಗ ರಾಹುಲ್ ಅಡುಗೆ ಕೋಣೆಯೊಳಗೆ ಹೋಗಿ ಬೋಲ್ಟ್ ಹಾಕಿಕೊಂಡು ಗ್ಯಾಸ್ ಉರಿಸಿದ. ಸಿಲಿಂಡರ್ ಸ್ಫೋಟಗೊಳ್ಳುವಂತೆ ಮಾಡಿದ. ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದರು. ಸಿಲಿಂಡರ್ ಸ್ಫೋಟದಿಂದಾಗಿ ರಾಹುಲ್ ಸಹಿತ 11 ಮಂದಿ ಪೊಲೀಸರು ಸುಟ್ಟಗಾಯಗಳಿಗೆ ಗುರಿಯಾದರು. ಒಟ್ಟು 13 ಮಂದಿಗೆ ಸುಟ್ಟ ಗಾಯಗಳಾಗಿವೆ. ಹಾಗಿದ್ದರೂ ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮುನ್ನುಗ್ಗಿ ರಾಹುಲ್‌ನನ್ನು ಸೆರೆ ಹಿಡಿದರು ಎಂದು ದಿಲ್ಲಿ ಪೂರ್ವ ಡಿಸಿಪಿ ಓಂವೀರ್ ಬಿಷ್‌ನೋಯ್ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ನಾಲ್ವರು ಎಸ್‌ಐಗಳಿಗೆ ಶೇ.30ರಿಂದ ಶೇ.40ರಷ್ಟು ಸುಟ್ಟಗಾಯಗಳಾಗಿವೆ. ಒಬ್ಬ ಎಎಸ್‌ಐಗೆ ಶೇ.25ರಷ್ಟು ಗಾಯಗಳಾಗಿವೆ ಎಂದವರು ತಿಳಿಸಿದರು.
ರಾಹುಲ್ ಕುಟುಂಬದಲ್ಲಿ ಕಳೆದ 9 ತಿಂಗಳಿಂದಲೂ ಗಲಾಟೆ ನಡೆಯುತ್ತಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.