ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ದ ನಡೆದ ಮೊದಲ ಟೆಸ್ಟ್ ಮುಖಾಮುಖಿಯಲ್ಲಿ ಭಾರತ ತಂಡವು ಭಾರಿ ಸೋಲನ್ನು ಅನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸರಣಿಯ ಪ್ರಾರಂಭಿಕ ಪಂದ್ಯವನ್ನೇ ಟೀಂ ಇಂಡಿಯಾ ಎಂಟು ವಿಕೆಟ್ ಅಂತರದಿಂದ ಕಳೆದುಕೊಂಡಿದೆ.
ಸೋಲಿನ ಹೊರತಾಗಿಯೂ ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬೆಂಗಳೂರು ಪಂದ್ಯದ ಸೋಲಿನ ನಂತರ, ಭಾರತವು 74.24 ಅಂಕವನ್ನು ಹೊಂದಿದೆ. ಮತ್ತೊಂದೆಡೆ, ಭಾರತದ ನೆಲದಲ್ಲಿ 36 ವರ್ಷಗಳಲ್ಲಿ ತಮ್ಮ ಮೊದಲ ಟೆಸ್ಟ್ ಜಯವನ್ನು ದಾಖಲಿಸಿದ ನ್ಯೂಜಿಲ್ಯಾಂಡ್ 44.44 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ. ಆಸ್ಟ್ರೇಲಿಯಾ 62.50 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 55.56 ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಪಾಕಿಸ್ತಾನ 25.93 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
36 ವರ್ಷದ ಬಳಿಕ ಟೆಸ್ಟ್ ಗೆಲುವು
ನ್ಯೂಜಿಲ್ಯಾಂಡ್ ತಂಡವು 36 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಗೆಲುವು ಕಂಡಿತು. ಕಿವೀಸ್ ಪಡೆ ಕೊನೆ ಸಲ ಭಾರತದಲ್ಲಿ ಟೆಸ್ಟ್ ಪಂದ್ಯವೊಂದನ್ನು ಜಯಿಸಿದ್ದು 1989 ರಲ್ಲಿ. ಮುಂಬೈ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ವನ್ನು ನ್ಯೂಜಿಲೆಂಡ್ 136 ರನ್ನುಗಳಿಂದ ಗೆದ್ದಿತ್ತು. ಈ ಪಂದ್ಯ ದಲ್ಲಿ ಕಿವೀಸ್‌ನ ರಿಚರ್ಡ್ ಹ್ಯಾಡ್ಲಿ 10 ವಿಕೆಟ್ ಪಡೆದಿದ್ದರು.