ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಶರದ್ ಪವಾರ್ ಮತ್ತೆ ತನ್ನ ಛಾಪನ್ನು ಮೂಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡಾ ಪವಾರ್ ನೇತೃತ್ವದ ಎನ್ ಸಿಪಿ ವಿರುದ್ಧವೇ ಅಖಾಡಕ್ಕಿಳಿದಿತ್ತು. ವಿರೋಧ ಪಕ್ಷದ ಸ್ಥಾನವೂ ಕೂಡಾ ದಕ್ಕದೆ ಕುಳಿತಿದ್ದ ಪವಾರ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಯೊಂದಿಗೆ ಭರ್ಜರಿ 90 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಎನ್ ಸಿಪಿ ಮೈತ್ರಿ ದೊಡ್ಡ ಸಾಧನೆ ಮಾಡದಿರಬಹುದು. ಆದರೆ ಎಲ್ಲರ ನಿರೀಕ್ಷೆಯನ್ನು ಮೀರಿ ಎರಡೂ ಪಕ್ಷಗಳು ಈ ಬಾರಿ ಹೆಚ್ಚು ಸ್ಥಾನ ಗಳಿಸಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಉತ್ತಮವಾಗಿ ಎನ್ ಸಿಪಿ ಸ್ಥಾನ ಹಂಚಿಕೆಯಲ್ಲಿ ಜಾಣ್ಮೆ ತೋರಿರುವುದು ಸಾಬೀತಾಗಿದೆ. ಅಷ್ಟೇ ಅಲ್ಲ ಶರದ್ ಪವಾರ್ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹಕ್ಕು ಮಂಡಿಸಬಹುದಾಗಿದೆ.
2004ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿಗಾಗಿ ಒಪ್ಪಂದ ಮಾಡಿಕೊಂಡಿತ್ತು. ಅಂದು ಚುನಾವಣೆಯಲ್ಲಿ ಎನ್ ಸಿಪಿ 71 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್ 69 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆದರೂ ಕಾಂಗ್ರೆಸ್ ಪಕ್ಷದ ವಿಲಾಸ್ ರಾವ್ ದೇಶ್ ಮುಖ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. 2004ರಲ್ಲಿ ಎನ್ ಸಿಪಿ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೊಟ್ಟಿತ್ತು. 42 ಮಂದಿ ಸಚಿವ ಸಂಪುಟದಲ್ಲಿ 24 ಸಚಿವ ಸ್ಥಾನವನ್ನು ಎನ್ ಸಿಪಿಗೆ ಕಾಂಗ್ರೆಸ್ ನೀಡಿತ್ತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎನ್ ಸಿಪಿ 50 ಸ್ಥಾನಗಳಲ್ಲಿ ಜಯ ಗಳಿಸುವ ನಿರೀಕ್ಷೆ ಹೊಂದಿದೆ. ಕಾಂಗ್ರೆಸ್ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಶರದ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ ದೂರು ದಾಖಲಿಸಿತ್ತು. ಪವಾರ್ ಆಪ್ತ ಪ್ರಫುಲ್ ಪಟೇಲ್ ವಿರುದ್ಧ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಾಗ್ದಾಳಿ ನಡೆಸಿದ್ದರು.
ಸತಾರಾ ಲೋಕಸಭಾ ಉಪಚುನಾವಣೆಯ ಪ್ರಚಾರ ಭಾಷಣದಲ್ಲಿಯೂ ಪ್ರಧಾನಿ ಮೋದಿ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಸತಾರಾದಲ್ಲಿ ಬಿಜೆಪಿ ಅಭ್ಯರ್ಥಿ, ಶಿವಾಜಿ ವಂಶಸ್ಥ ಉದಯನ್ ರಾಜೆ ಭೋಸ್ಲೆ ಎನ್ ಸಿಪಿಯ ಅಭ್ಯರ್ಥಿ ಶ್ರೀನಿವಾಸ್ ಪಟೇಲ್ 80 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಪವಾರ್ ಶಕ್ತಿ ಪ್ರದರ್ಶನ ಇನ್ನೂ ಕುಗ್ಗಿಲ್ಲ ಎಂಬುದು ಸಾಬೀತಾಗಿದೆ.