Advertisement

ಕನ್ನಡ ಸಾಹಿತ್ಯಕ್ಕೆ ಲೇಖಕಿಯರ ಕೊಡುಗೆ ಅಪಾರ

01:07 PM May 15, 2017 | |

ಚನ್ನಗಿರಿ: 21ನೇ ಶತಮಾನ ಭಿನ್ನವಾಗಿದ್ದು, ಸ್ತ್ರೀ ಚಳವಳಿಗಿಲ್ಲದ ಕಾಲವಾಗಿದೆ. ಮುಕ್ತವಾಗಿ ಬರೆಯಲು ಸಾಧ್ಯವಾದರೂ ಸೃಜನಶೀಲ ಸಾಹಿತ್ಯ ಯಾವುದರ ಮೇಲೂ ಬಿಂಬಿತವಾಗುತ್ತಿಲ್ಲ. ಇವುಗಳೆಲ್ಲದರ ನಡುವೆಯೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಲೇಖಕಿಯರ ಪಾತ್ರ-ಕೊಡುಗೆ ಅಪಾರ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಯು ಚನ್ನಬಸಪ್ಪ ಹೇಳಿದರು. 

Advertisement

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದ ಕುವೆಂಪು, ಕಾರಂತ, ಬೇಂದ್ರೆ ಮುಂತಾದವರು ಬರೆದ ಕಾಲಕ್ಕೂ ಇಂದಿನ ಯುವ ಬರಹಗಾರರು ಬರೆಯುತ್ತಿರುವ ಕಾಲಕ್ಕೂ ಇರುವ ವ್ಯತ್ಯಾಸವೇ ಇಂದಿನ ಸಾಹಿತ್ಯ ಸ್ವರೂಪವನ್ನು ನಿರ್ಧರಿಸುವಂತಾಗಿದೆ ಎಂದರು. 

ಹೊಸ ಲೇಖಕಿಯರಿಂದು ಕನ್ನಡ ಸಾಹಿತ್ಯಕ್ಕೆ ತಮ್ಮ ಶಕ್ತಿತುಂಬವ ಕೆಲಸವನ್ನು ಮಾಡುತ್ತಿದ್ದಾರೆ. ಸ್ತ್ರೀವಾದ ತುರ್ಯಾವಸ್ಥೆಗೆ ತಲುಪಿ ಉತ್ತರದಾಯಿತ್ವ ಇರಬೇಕಿಲ್ಲ ಎಂಬ ಸ್ಥಿತಿ ಮುಟ್ಟಿದೆ. ಆದರೆ, ಸಾಹಿತ್ಯದಲ್ಲಿ ಎಷ್ಟೇ ಸ್ತ್ರೀವಾದಿ ಚಿಂತನೆ ಮಾಡಿದರೂ ವಾಸ್ತವ ಪ್ರಪಂಚ ಬೇರೆಯೇ ಆಗಿದೆ. ಮಾಧ್ಯಮಗಳ ದುಷ್ಪರಿಣಾಮ ಮತ್ತು ವಿದ್ಯಾಭ್ಯಾಸದ ಕೊರತೆಯಿಂದ ಸಂಭವಿಸುತ್ತಿರುವ ಸ್ತ್ರೀಯರ ಮೇಲಿನ ದೌರ್ಜನ್ಯ ದಿನೇದಿನೇ ಜಾಸ್ತಿಯಾಗುತ್ತಿರುವುದು ಅತಂಕಕಾರಿ ಬೆಳವಣಿಗೆ.

ಇತ್ತಿಚ್ಚಿನ ದಿನಗಳಲ್ಲಿ ಲಿಂಗ ತಾರತಮ್ಯಗಳನ್ನು ಹೋಗಲಾಡಿಸಿದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಎಂದರು. ಕಾಲಚಕ್ರ ಬದಲಾದಂತೆ ಬರವಣಿಗೆಗಳಲ್ಲೂ ಬದಲಾವಣೆ ಕಂಡುಬರುತ್ತಿದೆ. ಇಂಟರ್‌ನೆಟ್‌ ಪತ್ರಿಕೆಗಳು ವರ್ತಮಾನ ಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲೂ ಬ್ಲಾಗ್‌ಗಳಲ್ಲೂ, ಫೇಸ್‌ಬುಕ್‌ನಲ್ಲೂ ಒಂದು ಬಗೆಯ ಸಾಹಿತ್ಯ ಸೃಷ್ಠಿಯಾಗುತ್ತಿದೆ. 

ಅಲ್ಪಕಾಲದಲ್ಲಿ ಅತಿ ಹೆಚ್ಚು ಜನರಿಗೆ ತಲುಪುವ ಸಾಹಿತ್ಯ ಪ್ರಕ್ರಿಯೆ ನಮ್ಮ ಮುಂದೆ ಕಂಡುಬರುತ್ತಿದ್ದು, ಇದರಿಂದ ಒಳಿತು-ಕೆಡುಕಿನ ನಡುವಿನ ಅಂತರವೇ ಅಳಿಸಿ ಹೋಗಬಹುದಾದ ಅಪಾಯವೂ ಇದೆ. ಈ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕಾಗಿದೆ ಎಂದರು. 

Advertisement

ಪ್ರಸ್ತುತ ರಾಜ್ಯದಲ್ಲಿನ ರೈತರ ಆತ್ಮಹತ್ಯೆಯ ಸರಣಿಯ ಬಗ್ಗೆ ಯೋಚಿಸಿದಾಗಲೆಲ್ಲಾ ರೈತರ ಬದುಕಿನ ಹಾಗೂ ಆತಂಕದ ಬಗ್ಗೆ ಹಿಂದೆ  ಕುವೆಂಪು ಅವರು ತಮ್ಮ ಕಥೆ ಧನ್ವಂತರಿ ಚಿಕಿತ್ಸೆ ಹಾಗೂ ನೇಗಿಲ ಯೋಗಿ ಕವಿತೆ, ಬೇಂದ್ರೆಯವರು ಅನ್ನಾವತಾರ ಕವಿತೆಗಳಲ್ಲಿ ಆ ದಿನಗಳಲ್ಲೇ ಚಿತ್ರಿಸಿದ್ದರು. ಆದರಿಂದು ರೈತನ ಬದುಕು ಆತಂಕದ ಕ್ಷಣಗಳನ್ನು ತಲುಪುವಂತಾಗಿದೆ ಎಂದು ಅತಂಕ ವ್ಯಕ್ತಪಡಿಸಿದರು.

ಸಾಹಿತಿ ಸರೋಜಾ ನಾಗರಾಜ್‌ ಅವರಿಗೆ ಈ ವೇಳೆ 2016-17ನೇ ಸಾಲಿನ ಗ್ರಾಮೀಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಸರೋಜಾ ನಾಗರಾಜ್‌ ಉದ್ಘಾಟಿಸಿದರು. ಎಚ್‌. ಎಂ. ಕಾಂತರಾಜ್‌ ಉಪನ್ಯಾಸ ನೀಡಿದರು, ತಾಲೂಕು ಕಸಾಪ ಗೌರವಾಧ್ಯಕ್ಷ ಎಂ.ಬಿ. ನಾಗರಾಜ್‌, ಮಹಾಲಿಂಗಪ್ಪ ಇತತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next