Advertisement

ಕಡಮೆ ಕಂಡಂತೆ…ಸುನಂದಾ ಭಾವ ಪ್ರಪಂಚ

06:00 AM Nov 21, 2018 | |

ಸುನಂದಾ ಪ್ರಕಾಶ ಕಡಮೆ, ಸೂಕ್ಷ್ಮ ಸಂವೇದನೆಯ ಕತೆಗಳಿಂದಲೇ ಪರಿಚಿತರು. “ಪುಟ್ಟ ಪಾದದ ಗುರುತು’, “ಗಾಂಧಿ ಚಿತ್ರದ ನೋಟು’, “ಕಂಬಗಳ ಮರೆಯಲ್ಲಿ’- ಕಥಾ ಸಂಕಲನಗಳ ಮೂಲಕ ಕನ್ನಡದ ಭಾವ ಜಗತ್ತಿಗೆ ವಿಶಿಷ್ಟ ಕಾಣೆR ನೀಡಿದ ಕಡಮೆ, ಸಾಲು ಸಾಲಾಗಿ ದೀಪಾವಳಿ ವಿಶೇಷಾಂಕಗಳ ಕಥಾ ಸ್ಪರ್ಧೆಗಳನ್ನೂ ಗೆದ್ದವರು ಕೂಡ. “ಪ್ರಚಾರದ ತೊಟ್ಟಿಲು’ ಬೆಂಗಳೂರಿನಿಂದ ದೂರವೇ ಉಳಿದು, ಹುಬ್ಬಳ್ಳಿಯಲ್ಲಿ ನೆಲೆನಿಂತು, ಅಕ್ಷರ ಧ್ಯಾನಿಯಾಗಿ ತೋರುವ ಇವರ ಸಂಸಾರಕ್ಕೂ ಸಾಹಿತ್ಯದ್ದೇ ಧ್ಯಾನ. ಗಂಡ, ಇಬ್ಬರು ಮಕ್ಕಳು ಅಷ್ಟೇ ಇವರ ಬದುಕೂ ಅಲ್ಲ; ಸುನಂದಾ ಅವರ ಜತೆ ನೂರಾರು ಕಥಾಪಾತ್ರಗಳೂ ಜೀವಿಸುತ್ತಿರುತ್ತವೆ. ಅವರ ಬದುಕು- ಭಾವ ಪ್ರಪಂಚದ ಒಳಗೆ ಸುತ್ತಾಡುವುದಾದರೆ…  

Advertisement

– ನಿಮ್ಮ ಬಾಲ್ಯ ಹೇಗಿತ್ತು. ಸಾಹಿತ್ಯದ ಗೀಳು ಶುರುವಾಗಿದ್ದು ಎಲ್ಲಿ?
 ನಾನು ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಗ್ರಾಮದವಳು. 10ನೇ ಇಯತ್ತೆವರೆಗೂ ನಮ್ಮ ಹಳ್ಳಿಯಲ್ಲಿಯೇ ಓದಿದೆ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ. ವ್ಯಾಸಂಗ ಮಾಡಿದೆ. ಬಳಿಕ ಕನ್ನಡದಲ್ಲಿ ಎಂಎ ಮಾಡಿದೆ. ನನಗೆ ಐವರು ಅಣ್ಣಂದಿರು. ಅವರೆಲ್ಲರಿಗೂ ನಾನೊಬ್ಬಳೇ ಪುಟ್ಟ ತಂಗಿ. ನಮ್ಮದು ಕೃಷಿ ಕುಟುಂಬ. ಆದರೂ ಓದು, ಸಾಹಿತ್ಯಾಸಕ್ತಿಗೆ ಯಾವ ಕೊರತೆಯೂ ಇರಲಿಲ್ಲ. ಅಪ್ಪ ತುಂಬಾ ಓದುತ್ತಿದ್ದರು. ಆ ಹವ್ಯಾಸ ಅವರಿಂದ ನನಗೂ ಬಳುವಳಿಯಾಗಿ ಬಂತು. ಅಪ್ಪ, ಲೈಬ್ರರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದರು. ನಾನು ಮತ್ತು ಅಣ್ಣಂದಿರು ಅವರು ಓದಿಟ್ಟ ಪುಸ್ತಕಗಳನ್ನು ಕದ್ದು ಓದುತ್ತಿದ್ದೆವು. ನಾವು ಪುಸ್ತಕ ಓದುವುದಕ್ಕೆ ಅಪ್ಪನಿಗೆ ಆಕ್ಷೇಪಗಳೇನೂ ಇರಲಿಲ್ಲ. ಆದರೆ, ಇದನ್ನೆಲ್ಲಾ ಓದುತ್ತಾ ಶಾಲೆಯ ಓದು ಬರಹವನ್ನು ಕಡೆಗಣಿಸುತ್ತಾರೆ ಎಂಬುದಷ್ಟೇ ಅವರ ಕಳಕಳಿಯಾಗಿತ್ತು.

– ಮೊದಲು ಬರೆದಿದ್ದು ಯಾವಾಗ ಎಂದು ನೆನಪಿದೆಯಾ? 
ನನಗೆ ನೆನಪಿರುವಂತೆ, ನಾನು ಮೊದಲಿಗೆ ಬರೆದಿದ್ದು 8ನೇ ತರಗತಿಯಲ್ಲಿದ್ದಾಗ. ನಾನು ಹೈಸ್ಕೂಲಿಗೆ ಸೇರಿದಾಗ ಅಪ್ಪ ನನ್ನನ್ನು ಕರೆದು, “ಇನ್ನು ನೀನು ಚಿಕ್ಕವಳಲ್ಲ. ಗಂಭೀರವಾಗಿ ವರ್ತಿಸುವುದನ್ನು ಕಲಿಯಬೇಕು. ಮೊದಲಿನಂತೆ ಜೋರಾಗಿ ನಗುವುದು, ಮಾತಾಡುವುದೆಲ್ಲ ಇನ್ನು ಮುಂದೆ ನಡೆಯಲ್ಲ. ಶಾಲೆಯಲ್ಲಿ ಮೇಷ್ಟ್ರ ಜೊತೆ ಸಲುಗೆಯಿಂದ ಮಾತಾಡಬಾರದು’ ಎಂದೆಲ್ಲಾ ಹೇಳಿದ್ದರು. ಅದು ನನ್ನ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟುಮಾಡಿತ್ತು. ಆ ಬೇಸರಕ್ಕೆ, ನನ್ನ ನೋಟ್‌ಬುಕ್‌ನ ಕಡೇ ಪುಟದಲ್ಲಿ ಅಕ್ಷರ ರೂಪ ಕೊಟ್ಟಿದ್ದೆ. ಅದನ್ನು ಬರೆದ ಬಳಿಕ, ನನ್ನ ನೋವು ಸಾಕಷ್ಟು ಕಡಿಮೆಯಾದದ್ದು ನನ್ನ ಅನುಭವಕ್ಕೆ ಬಂದಿತು. ಅದೇನೂ ದೊಡ್ಡ ಬರಹವಲ್ಲ. ಆದರೆ, ಆ ಪ್ರಯತ್ನದಿಂದ ಬೇಸರ ಹೊರಹಾಕಲು ಬರಹವೇ ಶಕ್ತ ಮಾಧ್ಯಮ ಎಂಬ ಅರಿವು ನನಗಾಯಿತು. ಅದಾದ ಬಳಿಕ, ಪಿಯುಸಿಯಲ್ಲಿ ಕಾಲೇಜಿನ ಮ್ಯಾಗಜಿನ್‌ಗೆ ಕಥೆ ಮತ್ತು ಕವಿತೆ ಬರೆದಿದ್ದೆ. ಅಲ್ಲಿಂದ ತುಸು ಗಂಭೀರ ಬರವಣಿಗೆ ಆರಂಭವಾಯಿತು. 

– ಪತ್ರಿಕೆಗಳಿಗೆ ಬರೆಯುವುದನ್ನು ಆರಂಭಿಸಿದ್ದು ಹೇಗೆ? ನಿಮ್ಮ ಬರಹಕ್ಕೆ ಸ್ಫೂರ್ತಿ ಯಾರು?
ಸಾಹಿತ್ಯ ಕೃಷಿಗೆ ಬಲವಾದ ನೆಲೆ ಸಿಕ್ಕಿದ್ದು ಮದುವೆಯಾದ ಬಳಿಕವೇ. 1997ರಲ್ಲಿ ದೈನಂದಿನ ಜೀವನದಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳನ್ನು ಕಲೆ ಹಾಕಿ “ಬ್ಲೇಡಾಯಣ’ ಎಂಬ ಲೇಖನವನ್ನು ಪತ್ರಿಕೆಯೊಂದಕ್ಕೆ ಬರೆದಿದ್ದೆ. ಅದನ್ನು ಬಹಳ ಜನ ಓದಿ, ಮೆಚ್ಚಿಕೊಂಡಿದ್ದರು. ಅದಾದ ಬಳಿಕ ಕೆಲವು ಕಥೆಗಳನ್ನು ಬರೆದೆ. ಗೌರೀಶ್‌ ಕಾಯ್ಕಿಣಿಯವರ ಪತ್ನಿ ಶಾಂತಾ ಕಾಯ್ಕಿಣಿ ಅವನ್ನು ಓದಿ ಮೆಚ್ಚಿಕೊಂಡು ಪತ್ರ ಬರೆದಿದ್ದರು. ಆ ಗುರುತಿನ ಮೇಲೆ, ಒಮ್ಮೆ ನಾನವರ ಮನೆಗೂ ಹೋದೆ. ಆಗ ಅವರು ಜಯಂತ ಕಾಯ್ಕಿಣಿ ಅವರ ಕಥಾ ಸಂಕಲನ “ಅಮೃತಬಳ್ಳಿ ಕಷಾಯ’ವನ್ನು ನನಗೆ ಕೊಟ್ಟರು. ಕಥೆಗಳನ್ನು ಬರೆಯಲು ನನಗೆ ಅದು ಮಾರ್ಗದರ್ಶಿಯಾಯಿತು. ನಾನು ಚಿತ್ತಾಲರನ್ನು ಓದಿಕೊಂಡು ಬೆಳೆದವಳು. ಕಥೆಗಳನ್ನು ಬರೆಯಲು ಆರಂಭಿಸಿದ ಮೇಲೆ ಇನ್ನಷ್ಟು ಸೂಕ್ಷ್ಮವಾಗಿ ಅವರ ಕಥೆಗಳನ್ನು ಓದಲು ಆರಂಭಿಸಿದೆ. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಹಾಜರಾಗಲು ಆರಂಭಿಸಿದೆ. ಈಗ, ನನ್ನ ಸಮಕಾಲೀನ ಲೇಖಕರಾದ ವಿವೇಕ ಶಾನುಭಾಗ, ವಸುಧೇಂದ್ರ, ಗುರುಪ್ರಸಾದ್‌ ಕಾಗಿನೆಲೆ ಅವರ ಕಥೆಗಳನ್ನು ಸೂಕ್ಷ್ಮವಾಗಿ ಓದುತ್ತೇನೆ. ಅವರೆಲ್ಲರ ಅಭಿಪ್ರಾಯಗಳನ್ನು, ಸಲಹೆಗಳನ್ನು ಪಡೆಯುತ್ತೇನೆ.

– ಈಗಿನ ಲೇಖಕಿಯರು ಸ್ತ್ರೀಸಂವೇದನೆಗಳನ್ನು ಎಷ್ಟರಮಟ್ಟಿಗೆ ಪ್ರಕಟಿಸುತ್ತಿದ್ದಾರೆ?
ಈಗಿನ ಶೇ.90 ಲೇಖಕಿಯರು ಸ್ತ್ರೀ ಸಂವೇದನೆಯನ್ನು ಇರಿಸಿಕೊಂಡು ಬರವಣಿಗೆ ಮಾಡುತ್ತಿದ್ದಾರೆ. ಎಲ್ಲೋ ಒಂದು ಶೇ.10 ಲೇಖಕಿಯರು ಮುಕ್ತ ಚಿಂತನೆ ಮೈಗೂಡಿಸಿಕೊಳ್ಳದೇ ಈಗಲೂ ಸಂಪ್ರದಾಯ, ಕಟ್ಟುಪಾಡುಗಳ ಚೌಕಟ್ಟಿನ ಒಳಗೇ ಮಹಿಳೆಯರನ್ನು ಇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೇಖಕಿಯರಿಗೆ, ಸಮಾಜವನ್ನು ಗ್ರಹಿಸಲು ಸೂಕ್ಷ್ಮ ಅವಲೋಕನ ಇರಬೇಕು. ಸಮಾಜದ ವೈರುಧ್ಯಗಳಿಗೆ ಅವರು ಸ್ಪಂದಿಸಬೇಕು. ನಾನು ಏನು ಬರೆಯುತ್ತೇನೋ ಅದರಲ್ಲಿ ನನ್ನ ಬಾಲ್ಯ, ನನ್ನ ಅನುಭವ, ಸಂವೇದನೆಗಳೇ ಹೆಚ್ಚಾಗಿ ಇರುತ್ತವೆ. ಹೆಣ್ಣಾಗಿ ನಾನು ಅನುಭವಿಸಿದ ಕಷ್ಟ, ನೋವುಗಳು ಮತ್ತೂಬ್ಬ ಹೆಣ್ಣಿನದ್ದೂ ಆಗಿರುತ್ತದೆ. ಮತ್ತೂಬ್ಬರು ಅನುಭವಿಸಿದ ಕಷ್ಟಗಳನ್ನು ನಾನು ಅನುಭವಿಸಿಲ್ಲದಿದ್ದರೂ ಒಬ್ಬ ಹೆಣ್ಣಾಗಿ ಬೇರೆ ಹೆಣ್ಣಿನ ನೋವಿಗೆ ಸಂವೇದನೆ ಕೊಡಲು ನನಗೆ ಸಾಧ್ಯ. ನನ್ನ ಬರಹಗಳ ಮೂಲದ್ರವ್ಯವೂ ಇಂಥ ಸಂವೇದನೆಗಳೇ. 
 
-ಮದುವೆಯ ಕಥೆ ಹೇಳಿ? 
ಪ್ರಕಾಶ್‌ ಮತ್ತೆ ನಾನು, ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದು. ಆದರೆ, ಇಬ್ಬರಲ್ಲಿ ಯಾರೂ ಯಾರಿಗೂ ಪ್ರಪೋಸ್‌ ಅಂತ ಮಾಡಲಿಲ್ಲ. ಪ್ರಕಾಶ್‌, ನನ್ನ ಅಣ್ಣನ ಸ್ನೇಹಿತ. ಆಗಾಗ ಮನೆಗೆ ಬರುತ್ತಿದ್ದರು. ನಾನು ಬಿ.ಕಾಂ. ಓದುವಾಗ ಅವರ ಮೊದಲ ಕವನ ಸಂಕಲನ “ಗಾಣದೆತ್ತು ಮತ್ತು ತೆಂಗಿನಮರ’ ಬಿಡುಗಡೆಯಾಗಿತ್ತು. ಅದಕ್ಕೆ ನಾನು ಪ್ರತಿಕ್ರಿಯೆ ಬರೆದು ಕಳಿಸಿದ್ದೆ. ಆಗಲೇ ಅವರು ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು. ಆದರೆ ಅವರಿಗೆ ಗಟ್ಟಿ ಸರ್ಕಾರಿ ಕೆಲಸ ಇರಲಿಲ್ಲ. ಒಂದು ಅರೆಕಾಲಿಕ ವೃತ್ತಿಯಲ್ಲಿದ್ದರು. ನಾನು ಅವರನ್ನೇ ಮದುವೆಯಾಗೋದು ಅಂತ ಹೇಳಿದಾಗ, ಅವರಿಗೆ ಸರಿಯಾದ ಉದ್ಯೋಗ ಇಲ್ಲವೆಂದು, ಮನೆಯಲ್ಲಿ ಬೇಡ ಎಂದಿದ್ದರು. ಆಗ ನಾನು, ಅವರು ತುಂಬಾ ಚೆನ್ನಾಗಿ ಕವಿತೆ ಬರೆಯುತ್ತಾರೆ ಎಂದಿದ್ದೆ. ಅದಕ್ಕೆ, ಕವಿತೆಯೇನು ಹೊಟ್ಟೆ ತುಂಬಿಸುತ್ತಾ? ಎಂದು ಕೇಳಿ ಬಾಯಿ ಮುಚ್ಚಿಸಿದ್ದರು. ಕಡೆಗೂ ಮನೆಯಲ್ಲಿ ಒಪ್ಪಿಸಿದೆ. 1988ರಲ್ಲಿ ನಾನು ಬಿ.ಕಾಂ.ನ ಕೊನೆಯ ವರ್ಷದಲ್ಲಿದ್ದಾಗ ನಮ್ಮ ಮದುವೆಯಾಯಿತು. ನಂತರ 3 ತಿಂಗಳಿಗೇ ಅವರಿಗೆ ಸರ್ಕಾರಿ ನೌಕರಿಯೂ ಸಿಕ್ಕಿತು!

Advertisement

– ಮನೆಯಲ್ಲಿ ನಿಮ್ಮ ಸಾಹಿತ್ಯದ ವಿಮರ್ಶಕರು ಯಾರು?
ಮನೆಯಲ್ಲಿ ನಾವು ನಾಲ್ಕು ಜನ ಇರುವುದು. ಹಿರಿ ಮಗಳು ಕಾವ್ಯಾ ಕಡಮೆ ಲೇಖಕಿ, ಕವಯಿತ್ರಿ. ಕಿರಿಯವಳು ನವ್ಯಾ, ಸಿನಿಮಾಟೋಗ್ರಾಫ‌ರ್‌. ಮನೆಯಲ್ಲಿ ಎಲ್ಲರೂ ಸಾಹಿತ್ಯ ಪ್ರಮಿಗಳೇ. ಪ್ರಕಾಶ್‌ ಮತ್ತು ಕಾವ್ಯಾ ನನ್ನ ಬರಹಗಳ ವಿಮರ್ಶೆ ಮಾಡುತ್ತಾರೆ. ಆದರೆ, ಕಾವ್ಯಾಳೇ ನನ್ನ ಅತಿ ದೊಡ್ಡ ವಿಮರ್ಶಕಿ. ಈಗ ಅಮೆರಿಕದಲ್ಲಿದ್ದಾಳೆ. ಆದರೂ ಪ್ರತಿದಿನ ಕಾಲ್‌ ಮಾಡಿ ನನ್ನ ಜೊತೆ ಏನಾದರೂ ಚರ್ಚೆ ಮಾಡುತ್ತಾಳೆ. ನಾನು ಬರೆದ ಎಲ್ಲಾ ಬರಹಗಳನ್ನು ಅವಳಿಗೇ ಮೊದಲು ಓದಲು ಕೊಡುವುದು. ಅವಳು ಓದಿ, “ಇದು ಅನಾರೋಗ್ಯಕರ ಸಾಲು, ಬದಲಾಯಿಸಲು ಆಗತ್ತಾ ನೋಡು, ಈ ಪದ ವಾಕ್ಯಕ್ಕೆ ಹೊಂದುತ್ತಿಲ್ಲ’ ಎಂದು ತನ್ನ ಅಭಿಪ್ರಾಯ ಹೇಳುತ್ತಾಳೆ. ಅವಳಿಂದ ಅಭಿಪ್ರಾಯ ಪಡೆಯದೇ ಲೇಖನಗಳನ್ನು ನಾನು ಪತ್ರಿಕೆಗಳಿಗೆ ಕಳಿಸುವುದಿಲ್ಲ. ಅವಳೂ ಅಷ್ಟೇ, ಏನೇ ಬರೆದರೂ ಮೊದಲು ನನಗೇ ಕಳಿಸುವುದು. ನಾವಿಬ್ಬರೂ ತಾಯಿ ಮಗಳಾಗಿ ಅಷ್ಟೇ ಅಲ್ಲ ಲೇಖಕಿ, ವಿಮರ್ಶಕಿಯ ಪಾತ್ರಗಳನ್ನೂ ನಿರ್ವಹಿಸುತ್ತೇವೆ. ಬೆಳಗ್ಗೆ ವಾಕಿಂಗ್‌ ಹೋಗುವಾಗ, ನಾನು ಆರಂಭಿಸಿರುವ ಕಥೆಯನ್ನು ಪ್ರಕಾಶ್‌ಗೆ ಹೇಳುತ್ತೇನೆ. ಆಗ, ನಾನು ಕಥೆಯಲ್ಲಿ ಬರೆಯದಿರುವ ಎಷ್ಟೋ ವಿಷಯಗಳು ಅವರಿಗೆ ಕಥೆ ಒಪ್ಪಿಸುವಾಗ ಹೊಳೆಯುತ್ತವೆ. ಮನೆಗೆ ಬಂದು ಅದನ್ನು ಕಥೆಗೆ ಸೇರಿಸುತ್ತೇನೆ. 

– ಬೆಂಗಳೂರಿನಲ್ಲಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹಲವರು ನಂಬಿದ್ದಾರೆ. ನೀವು ಏನಂತೀರಿ?
ನನಗೂ ಎಷ್ಟೋ ಜನ ಈ ಸಲಹೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿದ್ದರೆ ಅವಕಾಶಗಳು ಹೆಚ್ಚು. ಕಾರ್ಯಕ್ರಮ, ಕಮ್ಮಟಗಳಿಗೆ ಹೋಗುತ್ತಿದ್ದರೆ ಮಾತ್ರ ಹೆಸರು ಮಾಡಬಹುದು ಎಂದು. ಆದರೆ, ಅದನ್ನೆಲ್ಲಾ ನಾನು ಯಾವ ಕ್ಷಣದಲ್ಲೂ ನಂಬಿಲ್ಲ. ನೆಲ ಕಚ್ಚಿ ಕೂತು ಬರೆಯುವ ಛಲ ಒಂದಿದ್ದರೆ ಸಾಕು. ಬರಹಗಾರರು ಎಲ್ಲಿ ನೆಲೆಸಿದ್ದರೂ ಬೆಳೆಯುತ್ತಾರೆ. 2003-06ರ ವರೆಗೆ ನಾನು ನಿರಂತರವಾಗಿ ಕಥಾ ಸ್ಪರ್ಧೆಗಳಲ್ಲಿ ಗೆದ್ದೆ. ಬಳಿಕ ಹಲವಾರು ಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದೇನೆ. ಎಲ್ಲವನ್ನೂ ಪತ್ರಿಕೆಯವರೇ ಕೇಳಿ ಬರೆಸಿಕೊಂಡಿದ್ದೇ ಹೊರತು ನಾನು ಯಾರನ್ನೂ ಕೇಳಿಲ್ಲ. ಯಾವ ಪತ್ರಿಕೆಯವರು ಲೇಖನ ಕೇಳಿದರೂ ನಾನು “ಇಲ್ಲ’ ಎಂದು ಹೇಳಿದ್ದೇ ಇಲ್ಲ. ಬರವಣಿಗೆಯ ವಿಷಯದಲ್ಲಿ ಯಾವ ಕ್ಷಣಕ್ಕೂ ನಾನು ಸೋಮಾರಿಯಾಗಿಲ್ಲ. 2004ರಲ್ಲಿ “ಉದಯವಾಣಿ’ಗೆ ನಾನು “ಪಿಸುಗುಡುವ ಬೆಟ್ಟಸಾಲು’ ಎಂಬ ಅಂಕಣ ಬರೆಯುತ್ತಿದ್ದೆ. ನನ್ನ ಜೊತೆ ಅದೇ ಅಂಕಣವನ್ನು ನೇಮಿಚಂದ್ರ ಬರೆಯುತ್ತಿದ್ದರು. ನನಗಿಂತಲೂ ಮೊದಲು ಅವನ್ನು ಯು.ಆರ್‌. ಅನಂತಮೂರ್ತಿ ಅವರು ಬರೆಯುತ್ತಿದ್ದರು. ನನ್ನ ಸರದಿ ಮುಗಿದ ಬಳಿಕ ಎಚ್‌.ಎಸ್‌. ವೆಂಕಟೇಶ್‌ಮೂರ್ತಿಯವರು ಬರೆದರು. ಈ ಅಂಕಣ ನನಗೆ ನಿರಂತರ ಬರವಣಿಗೆಗೆ ತೊಡಗಲು ತಾಲೀಮು ಕೊಟ್ಟಿತು. ಇದಾದ ಬಳಿಕ ಹಲವಾರು ಪತ್ರಿಕೆಗೆ ವಾರದ ಅಂಕಣ ಬರೆದು ಸೈ ಎನಿಸಿಕೊಂಡೆ. 

– ನಿಮ್ಮ ನೆಚ್ಚಿನ ಲೇಖಕಿಯರು?
ಕವಿ, ವಿಮರ್ಶಕಿ, ಲೇಖಕಿಯಾಗಿ ಸಮಕಾಲೀನ ಲೇಖಕಿ ವಿನಯಾ ಒಕ್ಕುಂದ ತುಂಬಾ ಇಷ್ಟ. ಎಚ್‌. ನಾಗವೇಣಿ, ಎಚ್‌.ಎಸ್‌. ಅನುಪಮಾ, ತಾರಿಣಿ ಶುಭದಾಯಿನಿ, ಬಿ.ಟಿ. ಜಾಹ್ನವಿ ಇಷ್ಟ. ಹಿರಿಯ ಲೇಖಕಿಯರಲ್ಲಿ ವೈದೇಹಿ, ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ್‌, ಬಾನು ಮುಷ್ತಾಕ್‌ ಇಷ್ಟದ ಲೇಖಕಿಯರು. 

– ನಿಮ್ಮ ಯಾವ ಬರಹಕ್ಕೆ ಓದುಗರಿಂದ ಬಹಳ ಮೆಚ್ಚುಗೆಗೆ ಪಾತ್ರವಾಯ್ತು?
ಸೀಬರ್ಡ್‌ ನೌಕಾನೆಲೆ ಸ್ಥಾಪನೆಯಾಗುವ ವೇಳೆ ನಮ್ಮ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತು. ಅದರ ಪರಿಹಾರ ಬರುವ ವೇಳೆ ನನ್ನಪ್ಪ ತೀರಿಕೊಂಡರು. ಅಪ್ಪನ ಶ್ರಾದ್ಧದ ದಿನ ನನ್ನ ಅಣ್ಣಂದಿರು ಆ ಹಣವನ್ನು ಹಂಚಿಕೊಂಡರು. ನನ್ನ ಪಾಲನ್ನು ನನಗೆ ಕೊಡಲು ಬಂದರು. ಅಪ್ಪ ಅಷ್ಟು ವರ್ಷ ಉತ್ತಿ, ಬಿತ್ತಿದ್ದ ಭೂಮಿ ಹಣವಾಗಿ ಪರಿವರ್ತನೆಯಾಗಿದ್ದು ಒಂದು ಬೇಸರವಾದರೆ, ಅಪ್ಪನ ಶ್ರಾದ್ಧದ ದಿನವೇ ಅದನ್ನು ಹಂಚಿಕೊಂಡಿದ್ದು ಮತ್ತೂಂದು ಬೇಸರ. ನನ್ನಿಂದ ಆ ಹಣವನ್ನು ಮುಟ್ಟಲಾಗುವುದಿಲ್ಲ, ನನಗೆ ಬೇಡ ಎಂದು ಅಣ್ಣನಿಗೆ ಹೇಳಿದೆ. ಆತ ಎಷ್ಟೋ ದಿನಗಳ ಬಳಿಕ ನನಗೆ ಚೆಕ್‌ ಮೂಲಕ ಆ ಹಣ ಕೊಟ್ಟ. ಅದನ್ನು ಬರೆದಾಗ ನನಗೆ ಸಾಕಷ್ಟು ಜನ ಪತ್ರ ಬರೆದು, ತಮ್ಮ ನೋವು ತೋಡಿಕೊಂಡಿದ್ದರು. ಅವರಲ್ಲಿ ಹಲವರು ಸರ್ಕಾರದ ಯೋಜನೆಗಳಿಗಾಗಿ ತಮ್ಮ ಹೊಲ, ಮನೆ ಕಳೆದುಕೊಂಡವರಾಗಿದ್ದರು. 

– ಕನ್ನಡದ ಬೆಳವಣಿಗೆಗೆ ನಿಮ್ಮ ಸಲಹೆ ಏನು?
ಒಂದಾದ ನಂತರ ಒಂದರಂತೆ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಕನ್ನಡ ಶಾಲೆಯನ್ನೇ ಅಭಿವೃದ್ಧಿಗೊಳಿಸಿ, 1ನೇ ತರಗತಿಯಿಂದಲೇ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಿದರೆ ಪೋಷಕರು ಯಾಕೆ ಖಾಸಗಿ ಶಾಲೆಯನ್ನು ಹುಡುಕಿಕೊಂಡು ಹೋಗುತ್ತಾರೆ? ಜೊತೆಗೆ, ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಪಠ್ಯೇತರ ಕನ್ನಡ ಚಟುವಟಿಕೆಗಳನ್ನು ಇರಿಸಬೇಕು. ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಓದಲು ಉತ್ತೇಜಿಸಬೇಕು. ಅದರ ಆಧಾರದ ಮೇಲೆ ರಸಪ್ರಶ್ನೆ ಸ್ಪರ್ಧೆಗಳನ್ನು ಇರಿಸಬೇಕು. ಆಗ ಅವರಿಗೆ ಭಾಷೆಯ ಮೇಲೆ ಒಲವು, ಓದುವ ಅಭ್ಯಾಸ ಮೈಗೂಡುತ್ತದೆ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡವನ್ನು ದಾಟಿಸುವುದು ತುಂಬಾ ಕಷ್ಟ.

*ಬೇಸರವೇ ಮೊದಲ ಬರಹದ ವಸ್ತುವಾಯ್ತು
*ಬರವಣಿಗೆ ಮೂಲದ್ರವ್ಯ ಸ್ತ್ರೀ ಸಂವೇದನೆ
* ಹಿರಿಯ ಮಗಳೇ ಮೊದಲ ವಿಮರ್ಶಕಿ

Advertisement

Udayavani is now on Telegram. Click here to join our channel and stay updated with the latest news.

Next