Advertisement
ಕೆಲವು ದಿನಗಳ ಹಿಂದೆ, ಗೊರೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ ನೀಡಲೆಂದು ಹೋದವನು, ಗೊರೂರು ರಾಮಸ್ವಾಮಿ ಅಯ್ಯಂಗಾರರು ಹುಟ್ಟಿ ಬೆಳೆದ ಮನೆ, ಓಡಾಡಿದ ಬೀದಿ, ಅವರ ಬರಹಗಳಲ್ಲಿ ಕಾಣಿಸಿರುವ ನರಸಿಂಗನ ದೇವಾಲಯ, ಈಜಾಡಿದ ಹೇಮಾವತಿಯ ಮಡು, ಪಕ್ಕದಲ್ಲೇ ನೀರವತೆಯನ್ನು ಅಲ್ಪಸ್ವಲ್ಪ ಉಳಿಸಿಕೊಂಡ ಪುಟ್ಟ ಬನ- ಮುಂತಾದವನ್ನು ಹುಡುಕಿ, ನೋಡಿ ಬಂದೆ. ಗೊರೂರರ ಹೆಸರಿನ ಟ್ರಸ್ಟಿನ ಬೋರ್ಡೊಂದು ಧೂಳು ತಿನ್ನುತ್ತಾ ಕೂತಿತ್ತು. “ಇದರ ಬೀಗ ಯಾವಾಗ ತೆಗೀತಾರೆ?’ ಎಂದು ಪಕ್ಕದ ಮನೆಯವರನ್ನು ಕೇಳಿದರೆ, “ಗೊತ್ತಿಲ್ಲ… ದೇವಸ್ಥಾನದ ಪೂಜಾರರನ್ನು ಕೇಳಿ’ ಎಂದು ನಿರಾಸಕ್ತಿಯ ಉತ್ತರ ನೀಡಿದರು. “ನಮ್ಮ ಊರಿನ ರಸಿಕರು’ ಯಾರೂ ಅಲ್ಲಿ ಕಣ್ಣಿಗೆ ಬೀಳಲೇ ಇಲ್ಲ. ಕಾಲ ಎಷ್ಟೊಂದು ನಿರ್ದಯಿ ಎನ್ನಿಸಿಬಿಟ್ಟಿತು.
Related Articles
Advertisement
ಇವರ “ಬೈಲಹಳ್ಳಿಯ ಸರ್ವೇ’ಯನ್ನು ಮನದಲ್ಲಿಟ್ಟುಕೊಂಡೇ ನಾನೂ ಗೊರೂರಿನ ಸರ್ವೇ ಮಾಡಿದೆನೇನೋ! ಹೇಮಾವತಿ ಒಣಗಿ ಹೋಗಿತ್ತು. ಗೊರೂರರು, ಹಲ್ಲುಜ್ಜಿಕೊಂಡು ಬರಲೂ ನದಿಗೆ ಹೋಗುತ್ತಿದ್ದೆವೆಂದು ಬರೆದ ಮಾತು ನೆನಪಿಗೆ ಬಂತು. “ಹೇಮಾವತಿಗೆ ಸಮನಾದ ನದಿಯು ಪ್ರಪಂಚದಲ್ಲೇ ಇಲ್ಲ’ ಎಂಬುದೂ ಅವರದೇ ಅಭಿಮಾನದ ಮಾತು. ನದಿಯ ಪಕ್ಕದಲ್ಲೇ ಒಕ್ಕಲುತನ ಮುಗಿಸಿ, ಕೈಕಾಲು ತೊಳೆಯುತ್ತಿದ್ದವರೊಬ್ಬರನ್ನು ನೋಡಿದೆ. ಮಾತಾಡಿಸುವ ಹಂಬಲವಾದರೂ ಅವರ ಮುಖದ ಗಾಂಭೀರ್ಯ ಕಂಡು ತೆಪ್ಪಗಾದೆ. ಇದೇ ಥರದ ಬೋರೇಗೌಡರಲ್ಲವೇ “ನಮ್ಮ ಊರಿನ ರಸಿಕರು’ ಕೃತಿಯಲ್ಲಿ ಬ್ರಾಹ್ಮಣರನ್ನು ಟೀಕಿಸಿದ್ದೆಂದು ನೆನಪಿಗೆ ಬಂತು. ಬೀದಿ ಗುಡಿಸುವವರನ್ನು ನೇಮಿಸಿಕೊಳ್ಳಲು ಪಂಚಾಯ್ತಿಯಿಂದ ಹಣ ವಸೂಲಿಗೆ ಬಂದಾಗ, ಆ ಬೋರೆಗೌಡ “ಬೀದಿ ಗುಡಿಸೋ ಆಳು ನಿಮ್ಮ ಬ್ರಾಂಬರಿಗೆ ಬೇಕು. ನಿತ್ಯ ಮನೆ ಮುಂದೆ ಎಂಟØತ್ತು ಎಂಜಲೆಲೆ ಹಾಕ್ತೀರಿ. ಗಾಳಿ ಬಂದರೆ ಪಟ ಹಾರಾಡಿದ ಹಂಗೆ ಊರಲ್ಲೆಲ್ಲಾ ಹಾರಾಡ್ತವೆ. ನಾವು ಗಂಗಳದಲ್ಲಿ ಉಂಡು ತೊಳೆದಿºಡ್ತೀವಿ. ನಮಗೆ ಬೇಡ ಬೀದಿ ಗುಡಿಸೋ ಆಳು. ಬ್ರಾಂಬರಿಗೆ ಕಂದಾಯ ಹಾಕಿಬಿಡಿ. ಅವರೇ ಕೊಟ್ಕೊಂಡು, ಆಳಿಟ್ಟುಕೊಂಡು ಬೀದಿ ಗುಡಿಸಿಕೊಳಿ’ ಎನ್ನುತ್ತಾನೆ. ಬೊರೇಗೌಡನ ಮೂಲಕ ತಮ್ಮ ಬ್ರಾಹ್ಮಣ ಸಮಾಜದ ಲೋಪದೋಷಗಳನ್ನು ಟೀಕೆಗೊಳಪಡಿಸುವ ಗೊರೂರರ ಪ್ರಗತಿಪರ ಧೋರಣೆಗೆ ಇದೊಂದು ಉಜ್ವಲ ನಿದರ್ಶನ.
ಹೀಗೆ ಬರಹದಲ್ಲಿ ಗೋಚರಿಸಿರುವ ಗೊರೂರಿನ ಚಿತ್ರವೂ ಕಣ್ಣಮುಂದಿರುವ ವರ್ತಮಾನದ ಚಿತ್ರವೂ ಎಡೆಬಿಡದೆ ತುಲನಾತ್ಮಕವಾಗಿ ಮನದಲ್ಲಿ ಹಾಯ್ದು ಬರುತ್ತಿದ್ದವು. ಸರ್ಕಾರದ ನೆರವಿನ ಕೈಕಾಯದೆ, ತಮ್ಮೂರನ್ನು, ಊರಿನವರ ಬದುಕನ್ನು ಅತ್ಯಂತ ಸ್ವಾರಸ್ಯಪೂರ್ಣವಾಗಿ ಸಾಹಿತ್ಯದಲ್ಲಿ ದಾಖಲಿಸಿ ಹೋದ ಆ ಪುಣ್ಯಾತ್ಮನ ನೆನಪಿಗೆ ಊರವರಾದರೂ ಏನಾದರೂ ಮಾಡಬೇಡವೆ ಎಂಬ ಪ್ರಶ್ನೆ ಮನದಲ್ಲಿ ಉಳಿದಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರರ ಹಾಸ್ಯ ಮನೋಧರ್ಮದ ಸಮಾಜಶಾಸ್ತ್ರೀಯ ಟಿಪ್ಪಣಿಗೆ ಈಗಿನವರು ಬೆಲೆಕೊಟ್ಟು, ಮುಂದಿನವರಿಗೂ ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆಯಲ್ಲವೇ? “ಸಾಯುವವರಿಗೆ ನಮ್ಮೂರು ಸುಖ’ ಎಂಬ ಮಾರ್ಮಿಕ ಉಕ್ತಿಯನ್ನು ನಗುನಗುತ್ತಲೇ ನುಡಿದ ಗೊರೂರರಿಗೆ, “ಬದುಕಿದ್ದಾಗ ಕಾಣದ ಸುಖ ಸತ್ತ ಮೇಲೆ’ (ಇದು ಅವರದೇ ನುಡಿ) ಎಂಬಂತಾಗಿದೆ- ಅಂದಿನ ಮತ್ತು ಇಂದಿನ ಗೊರೂರಿನ ಸಾಕ್ಷ್ಯಚಿತ್ರ!
– ಡಾ. ಎಚ್.ಎಸ್. ಸತ್ಯನಾರಾಯಣ