Advertisement

ಹಿರಿಯ ಸಾಹಿತಿ,ರಂಗಕರ್ಮಿ ಡಾ.ಡಿ.ಕೆ.ಚೌಟ ಇನ್ನಿಲ್ಲ

09:44 AM Jun 21, 2019 | Vishnu Das |

ಬೆಂಗಳೂರು: ಹಿರಿಯ ರಂಗಕರ್ಮಿ , ಸಾಹಿತಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ ಅವರು ಬುಧವಾರ ಬೆಳಗ್ಗೆ ನಗರದ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

Advertisement

ಡಿ.ಕೆ.ಚೌಟ ಅವರು ಕನ್ನಡ ಮತ್ತು ತುಳು ಸಾಹಿತ್ಯರಂಗಕ್ಕೆ ತನ್ನದೇ ಆದ ಕೊಡುಗೆ ಸಲ್ಲಿಸಿದ್ದರು. ನಾಟಕಾರರಾಗಿ ಹೆಸರು ಮಾಡಿದ ಅವರ ನಾಟಕಗಳು ಕನ್ನಡ ಮತ್ತು ತುಳು ಭಾಷೆಯಲ್ಲೂ ಪ್ರಕಟಗೊಂಡು ಜನಮೆಚ್ಚುಗೆ ಪಡೆದಿವೆ. ಪಿಲಿಪತ್ತಿ ಗಡಸ್‌, ಮೂಜಿ ಮುಟ್ಟು ಮೂಜಿ ಲೋಕ, ಪಾಟ್‌ ಪಜ್ಜೆಲು ಜನಪ್ರಿಯತೆ ಪಡೆದ ನಾಟಕಗಳು.

ಚೌಟರು ಆನಂದ ಕೃಷ್ಣ ಎಂಬ ಕಾವ್ಯನಾಮದಿಂದ ಜನಪ್ರಿಯರಾಗಿದ್ದರು.

ಕಾದಂಬರಿ, ಆತ್ಮಕಥನಗಳನ್ನೂ ಚೌಟ ಅವರು ಬರೆದಿದ್ದರು. ಮಿತ್ತಬೈಲ್‌ ಯಮುನಕ್ಕೆ ಮತ್ತು ವಜ್ಜೆರೆನ ಕಥೆಕುಲು ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದರು.

ಮುಂಬಯಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ವಿದೇಶಗಳಲ್ಲಿ ದುಡಿದಿದ್ದ ಚೌಟರು, ಘಾನಾ , ನೈಜಿರಿಯಾ ಮತ್ತು ಲಂಡನ್‌ನಲ್ಲಿ ಹಲವು ವರ್ಷಗಳನ್ನು ಕಳೆದಿದ್ದರು. ಬೆಂಗಳೂರಿಗೆ ಮರಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.

Advertisement

ಮಂಗಳೂರು ವಿಶ್ವವಿದ್ಯಾಲಯ ಚೌಟ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತ್ತು.

ಅತ್ಯುತ್ತಮ ಸಂಘಟನಾತ್ಮಕ ಶಕ್ತಿ ಹೊಂದಿದ್ದ ಚೌಟರು ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.

ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಚೌಟ ಅವರು ಭಾಜನರಾಗಿದ್ದರು.

ಮಕ್ಕಳಾದ ಸಂಗೀತಗಾರ ಸಂದೀಪ್‌ ಚೌಟ ಮತ್ತು ಜನಾಂಗ ಶಾಸ್ತ್ರಜ್ಞೆಯಾದ ಪ್ರಜ್ಞಾ ಚೌಟ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next