Advertisement

ರಾಜ್ಯಕ್ಕೆ ಮತ್ತೆ ಕಾವೇರಿ ಬರೆ

03:45 AM Jan 05, 2017 | |

ಉದಯವಾಣಿ ದೆಹಲಿ ಪ್ರತಿನಿಧಿ: ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯಲ್ಲಿ ಮಹದಾಯಿಯಿಂದ 7 ಟಿಎಂಸಿ ನೀರು ಪಡೆಯುವ ಕರ್ನಾಟಕದ ಕನಸಿಗೆ ಮೊನ್ನೆ ತಾನೆ ತಣ್ಣೀರೆರಚಿದ್ದ ಸುಪ್ರೀಂ ಕೋರ್ಟ್‌, ಇದೀಗ ಆ ಗಾಯದ ಮೇಲೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬರೆ ಎಳೆದಿದೆ. ಪ್ರತಿದಿನ ಕಾವೇರಿ ನದಿಯಿಂದ ತಮಿಳುನಾಡಿಗೆ 2,000 ಕ್ಯೂಸೆಕ್‌ ನೀರು ಬಿಡಬೇಕೆಂಬ ತನ್ನ ಮಧ್ಯಂತರ ಆದೇಶವನ್ನು ಫೆ.7ರವರೆಗೂ ಮುಂದುವರಿಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದು, ಬರ ವರ್ಷದಲ್ಲಿ ಸಾಮಾನ್ಯ ಮಳೆ ವರ್ಷಕ್ಕಿಂತ ಹೆಚ್ಚು ನೀರು ಹರಿಸಬೇಕಾದ ಸಂಕಷ್ಟ ಎದುರಾಗಿದೆ.

Advertisement

ಬುಧವಾರ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ಮೂಲ ಅರ್ಜಿ ಹಾಗೂ 2016ರ ಅ.18ರ ತೀರ್ಪಿನ ಮಾರ್ಪಾಟು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ| ದೀಪಕ್‌ ಮಿಶ್ರಾ ನೇತ್ರತ್ವದ ನ್ಯಾ| ಅಮಿತಾವ್‌ ರಾಯ್‌ ಮತ್ತು ನ್ಯಾ| ಎ.ಎಂ.ಖನ್ವೀಳ್ಕರ್‌ ಅವರನ್ನು ಒಳಗೊಂಡ ನ್ಯಾಯಪೀಠ, ಫೆ.7ಕ್ಕೆ ಮುಂದಿನ ವಿಚಾರಣೆ ನಡೆಸಲಾಗುವುದು. ಅಲ್ಲಿಯವರೆಗೆ 2016ರ ಅ.18ರಂದು ನೀಡಿದ್ದ ಮಧ್ಯಂತರ ಆದೇಶವನ್ನೇ ಕರ್ನಾಟಕ ಪಾಲಿಸಬೇಕೆಂದು ಸೂಚಿಸಿತು.

ನಿರಂತರ ವಿಚಾರಣೆ:
“2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿರುವ ಅಂತಿಮ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು 2017ರ ಫೆ.7ರಿಂದ ಪ್ರತಿದಿನ ವಿಚಾರಣೆ ನಡೆಸುತ್ತೇವೆ. ಪ್ರತಿನಿತ್ಯ ಮಧ್ಯಾಹ್ನ 2 ಗಂಟೆಯಿಂದ ವಿಚಾರಣೆ ಆರಂಭಗೊಳ್ಳಲಿದ್ದು, ಕಾವೇರಿ ಕೊಳ್ಳದ ರಾಜ್ಯಗಳು ತಮ್ಮ ವಾದದ ಪ್ರಾಥಮಿಕ ಅಂಶಗಳನ್ನು ಫೆ.7ರೊಳಗೆ ನ್ಯಾಯಾಲಯಕ್ಕೆ ನೀಡಬೇಕು. ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲಾ ಅಂಶಗಳನ್ನು ಮತ್ತೆ ವಾಪಸ್‌ ಕಳುಹಿಸಿದೆ ನಾವೇ ಪರಿಶೀಲನೆ ಮಾಡುತ್ತೇವೆ. ಒಂದು ರಾಜ್ಯಕ್ಕೆ ನೀರು ನೀಡಿದ ಬಳಿಕ ಅದರ ಬಳಕೆ ಕುರಿತ ತಕರಾರುಗಳಲ್ಲಿ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸುವುದಿಲ್ಲ’ ಎಂದು ನ್ಯಾ| ಮಿಶ್ರಾ ಸ್ಪಷ್ಟಪಡಿಸಿದರು.

ನೀರು ಬಿಟ್ಟಿಲ್ಲವೆಂದು ತಕರಾರು:
ಬುಧವಾರ ವಾದ ಮಂಡಿಸಿದ ತಮಿಳುನಾಡಿನ ಪರ ಹಿರಿಯ ವಕೀಲ ಶೇಖರ್‌ ನಾಪ್ಡೆ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಪ್ರತಿದಿನ 2,000 ಕ್ಯೂಸೆಕ್‌ ನೀರನ್ನು ಕರ್ನಾಟಕ ಹರಿಸಬೇಕಿತ್ತು. ಆದರೆ ಇನ್ನೂ ಸುಮಾರು 4.8 ಟಿಎಂಸಿ ನೀರು ಬಾಕಿಯಿದ್ದು, ಕರ್ನಾಟಕ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂದು ತಕರಾರು ತೆಗೆದರು. ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಶೀಘ್ರವೇ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಪೀಠ, ಈ ಅರ್ಜಿಗಳ ವಿಚಾರಣೆ ಇನ್ನೂ ಬಾಕಿಯಿದೆ ಎಂದು ತಿಳಿಸಿತು.

ತಮಿಳುನಾಡಿನ ವಾದವನ್ನು ಅಲ್ಲಗಳೆದ ರಾಜ್ಯದ ಪರ ವಕೀಲ ಮೋಹನ್‌ ಕಾತರಕಿ, ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಿದ್ದೇವೆ. ಸುಮಾರು 1 ಟಿಎಂಸಿ ನೀರು ಕೊಡಲು ಬಾಕಿ ಇರಬಹುದು. ಆ ಬಾಕಿಯನ್ನು ಜಲ ವರ್ಷದ ಅಂತ್ಯದೊಳಗೆ ಪೂರ್ತಿಗೊಳಿಸುತ್ತೇವೆ ಎಂದರು.

Advertisement

ಸಾಮಾನ್ಯ ವರ್ಷಕ್ಕಿಂತಲೂ
ಹೆಚ್ಚು ನೀರು ಹರಿಸಬೇಕು!

ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿದ್ದ ಅಂತಿಮ ಐ ತೀರ್ಪಿನಂತೆ ಸಾಮಾನ್ಯ ಮಳೆಯಾದ ವರ್ಷ ಜನವರಿಯಲ್ಲಿ 3 ಟಿಎಂಸಿ(34,722 ಕ್ಯೂಸೆಕ್‌) ನೀರನ್ನು ತಮಿಳುನಾಡಿಗೆ ನೀಡಬೇಕು. ಆದರೆ ಈ ಸಲ ಬರವಿದ್ದರೂ ಕೂಡ ಸುಪ್ರೀಂ ಕೋರ್ಟ್‌ ಆದೇಶದಂತೆ ಜನವರಿಯಲ್ಲಿ 5.5 ಟಿಎಂಸಿ (62,000 ಕ್ಯೂಸೆಕ್‌) ನೀರನ್ನು ತಮಿಳುನಾಡಿಗೆ ಹರಿಸುವುದು ಅನಿವಾರ್ಯವಾಗಿದೆ. ಈ ಆದೇಶದೊಂದಿಗೆ ಬರದಿಂದ ಕಂಗೆಟ್ಟಿರುವ ಕರ್ನಾಟಕ ಸಾಮಾನ್ಯ ಜಲ ವರ್ಷವಿರುವ ಜನವರಿ ಅವಧಿಗಿಂತ 28,722 ಕ್ಯೂಸೆಕ್‌ ನೀರನ್ನು ಹೆಚ್ಚುವರಿಯಾಗಿ ತಮಿಳುನಾಡಿಗೆ ನೀಡಬೇಕಾಗಿದೆ. ಮಧ್ಯಂತರ ಆದೇಶವನ್ನು ಮುಂದುವರಿಸುವುದರಲ್ಲಿ ಅಡಗಿದ್ದ ಈ ಆತಂಕವನ್ನು ನ್ಯಾಯಾಲಯದ ಮುಂದೆ ತರುವಲ್ಲಿ ರಾಜ್ಯ ಪರ ವಕೀಲರೂ ವಿಫ‌ಲರಾದರು. ನೀರು ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ರಾಜ್ಯದ ನಿಲುವು ತಿಳಿಸುವ ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ನಾಯಕ್‌ ಮತ್ತು ಇತರ ವಕೀಲರು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರೂ ಕೂಡ ಮಧ್ಯಂತರ ಆದೇಶದ ಮುಂದುವರಿಕೆಯಲ್ಲಿನ ಹಾನಿಯ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಿಲ್ಲ.

ಕೇಂದ್ರ ಸರ್ಕಾರ ಎಲ್ಲ ನದಿ ವಿವಾದಗಳ ಇತ್ಯರ್ಥಕ್ಕೆ ಒಂದೇ ನ್ಯಾಯಾಧಿಕರಣವನ್ನು ರಚಿಸಲು ಮುಂದಾಗಿರುವುದು ಸ್ವಾಗತಾರ್ಹ. ಜೊತೆಗೆ ಕಾವೇರಿ ನ್ಯಾಯಾಧಿಕರಣದ ಅಂತಿಮ ಐ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ನದಿ ನ್ಯಾಯಾಧಿಕರಣಗಳ ಪಾತ್ರ ಮತ್ತು ವ್ಯಾಪ್ತಿಯ ಬಗ್ಗೆಯೂ ನ್ಯಾಯಾಲಯ ಪರಿಶೀಲನೆ ಮಾಡಬೇಕು.
– ಫಾಲಿ ನಾರಿಮನ್‌, ರಾಜ್ಯದ ಪರ ವಕೀಲ

ಮಾರ್ಪಾಟಿಗೆ ಅರ್ಜಿ:
ಅಕ್ಟೋಬರ್‌ 18ರಂದು ನೀಡಿದ್ದ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂದು ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಅಭಾವದಿಂದ ನ್ಯಾಯಾಲಯದ ಆದೇಶದಂತೆ ಪ್ರತಿದಿನ 2,000 ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿಸಲು ಸಾಧ್ಯವಾಗುತ್ತಿಲ್ಲ. ಮುಂಗಾರಿನಲ್ಲಿ ಕಾವೇರಿ ಕಣಿವೆಯಲ್ಲಿನ 6.15 ಲಕ್ಷ ಎಕರೆ ಕೃಷಿ ಭೂಮಿ ನೀರಿನ ಕೊರತೆಯಿಂದ ಹಾನಿಗೀಡಾಗಿದೆ. ಹಿಂಗಾರು ಹಂಗಾಮಿನಲ್ಲಿಯೂ ಈ ಭಾಗದಲ್ಲಿ ಬಿತ್ತನೆ ನಡೆದಿಲ್ಲ. ಮುಂದಿನ ಮೇ ತಿಂಗಳವರೆಗೆ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮುಂತಾದ ಜಿಲ್ಲೆಗಳ ಕುಡಿಯುವ ನೀರನ್ನೂ ಕಾವೇರಿಯಿಂದಲೇ ಪೂರೈಸಬೇಕಿದೆ. ಹೀಗಾಗಿ ತ.ನಾಡಿಗೆ ನೀರು ಹರಿಸುವ ಪ್ರಮಾಣ ತಗ್ಗಿಸಬೇಕೆಂದು ರಾಜ್ಯ ತನ್ನ ಅರ್ಜಿಯಲ್ಲಿ ಕೇಳಿಕೊಂಡಿದೆ.

– ರಾಕೇಶ್‌ ಎನ್‌.ಎಸ್‌.
 

Advertisement

Udayavani is now on Telegram. Click here to join our channel and stay updated with the latest news.

Next