ಹಗರಿಬೊಮ್ಮನಹಳ್ಳಿ: ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ದದ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕುಸ್ತಿ ಪಂದ್ಯಾವಳಿಯಲ್ಲಿ ಹರಪನಹಳ್ಳಿ ಸುರೇಶ್ ಮತ್ತು ಮರಿಯಮ್ಮನಹಳ್ಳಿ ಸೈಫುಲ್ಲಾ ಪರಸ್ಪರ ಮದಗಜಗಳಂತೆ ಸೆಣೆಸಾಡಿದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿದವು.
15 ನಿಮಿಷಗಳ ಕಾಲ ಜಗಜಟ್ಟಿಗಳಂತೆ ಪಟ್ಟುಗಳನ್ನು ಪ್ರದರ್ಶಿಸುತ್ತಾ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕೊನೆಗೂ ಇಬ್ಬರೂ ಸಮಬಲದ ಪೈಪೋಟಿ ನಡೆಸಿ ಕಲ್ಲರ್‌ಜಿಂಗ್, ಏಕಲಾಂಗ್, ಸವಾರಿ, ಹೊರಕಾಲು ಸೇರಿದಂತೆ
ಅನೇಕ ಕುಸ್ತಿ ಪಟ್ಟುಗಳನು ಪ್ರದರ್ಶಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕುಸ್ತಿ ಪೈಲ್ವಾನ್‌ಗಳ ಕಾದಾಟ ನೋಡುಗರನ್ನು ರೋಮಾಂಚನಗೊಳಿಸಿತ್ತು. ಹೊಸಪೇಟೆ, ದಾವಣಗೆರೆ, ಹರಪನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ
ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿ ಪಟುಗಳು ತಮ್ಮ ಚಾಕಚಕ್ಯತೆ ಪ್ರದರ್ಶಿಸಿ ನೆರೆದಿದ್ದ ನೂರಾರು ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.
ದಾವಣಗೆರೆಯ ಹನುಮಂತ, ಅಣ್ಣಪ್ಪ, ಹಾಲೇಶ್, ನಾಗರಾಜ್ ಅಡಿವಿಹಳ್ಳಿಯ ಪ್ರತಾಪ್, ಕೂಡ್ಲಿಗಿಯ ಆದಿಲ್, ಉಂಬಳಗಟ್ಟಿಯ ಯಾಸೀನ್ ಪ್ರದರ್ಶಿಸಿದ ಕುಸ್ತಿ ಪಂದ್ಯಾಟಗಳು ಪ್ರೇಕ್ಷಕರನ್ನು ತುದಿಗಾಲಲ್ಲೇ ನಿಲ್ಲಿಸಿದ್ದವು.
ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನ ಪೈಲ್ವಾನ್ ಕೆಂಚಪ್ಪ ಅವರೊಂದಿಗೆ ಸೆಣೆಸಾಡಲು ಯಾರೂ ಮುಂದೆ ಬರಲಿಲ್ಲ. ಗ್ರಾಮದ ಮೈಲಾರಿ ಮತ್ತು ಅರ್ಜುನ್ ಹಲಗೆ ವಾದನದ ಮೂಲಕ ಪಟುಗಳನ್ನು ಹುರಿದುಂಬಿಸುತ್ತಿದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಕುಸ್ತಿ ಪ್ರೇಮಿಗಳು ಶಾಲೆ ಕಟ್ಟಡದ ಮೇಲೆ ಕುಳಿತು ಪಂದ್ಯ ವೀಕ್ಷಿಸಿದರು. ಪಂದ್ಯಾವಳಿಯಲ್ಲಿ ವಿಜೇತರು ನಗದು ಬಹುಮಾನ ಸ್ವೀಕರಿಸಿದರು. ಯುವ ಮುಖಂಡ ಅಶೋಕ್ ಭೀಮಾನಾಯ್ಕ ಅಂತಿಮ ಪರ್ಸಿ ಪೈಕಿ ಕುಸ್ತಿ ಪಂದ್ಯವಾಳಿಗೆ ಚಾಲನೆ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಬಾಬುವಲಿ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪವಾಡಿ ಪೃಥ್ವಿರಾಜ್, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಕೆ.ಜಹಾಂಗೀರ್ ಸಾಹೇಬ್, ಎಚ್.ಎ.ಕೊಟ್ರೇಶ್, ಬಾಲಕೃಷ್ಣಬಾಬು, ಎಸ್.ಚಂದ್ರಪ್ಪ, ಮೈಲಾರಪ್ಪ, ಗ್ರಾಮದ ಕುಸ್ತಿ ಆಯೋಜನೆ ಸಮಿತಿಯ ಡಾ| ಕಾಸೀಂ ಸಾಹೇಬ್, ಎನ್.ಕೆ.ಬಾಬಣ್ಣ, ಪ್ರಶಾಂತ್, ಶ್ಯಾನುಭೋಗರ ನಾಗರಾಜ, ಕೆ.ನಾಗರಾಜ ಇದ್ದರು. ಹುಳ್ಳಿ ಪ್ರಕಾಶ್, ನಾರಾಯಣದೇವರಕೆರೆಯ ಫಾಜಿಲ್ ಸಾಹೇಬ್, ಕರೀಂ ಸಾಹೇಬ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.