ಹರಿಹರ: ಗ್ರಾಮದೇವತೆ ಜಾತ್ರೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ
ಭಾನುವಾರ ಜರುಗಿದ ಪುರುಷ ಹಾಗೂ ಮಹಿಳಾ ಪಟುಗಳ ಕುಸ್ತಿಗಳು ಮೈ ನವಿರೇಳಿಸುವಂತಿದ್ದವು.
ರಾಜ್ಯ-ಹೊರರಾಜ್ಯಗಳಿಂದ ಬಂದಿರುವ ಪೈಲ್ವಾನ್‌ರ ಪಟ್ಟುಗಳನ್ನು ಜನರು ಉಸಿರು ಬಿಗಿ ಹಿಡಿದುಕೊಂಡು ನೋಡಿದರು. ಕುಸ್ತಿ ಪಟುಗಳು ಹಾಕುವ ಪ್ರತಿ ಪಟ್ಟಿಗೂ ಜನರು ಸಿಳ್ಳೆ ಹಾಕಿ, ಕುಣಿದು ಕುಪ್ಪಳಿಸಿದರು.
ಮಹಿಳಾ ಪಟುಗಳ ಜನಾಕರ್ಷಣೆ: ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಂದಾಜು 45 ಮಹಿಳಾ ಕುಸ್ತಿ ಪಟುಗಳು
ಆಗಮಿಸಿರುವುದು ಜನಾಕರ್ಷಣೆಗೆ ಕಾರಣವಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಆಳ್ವಾಸ್ ಸಂಸ್ಥೆಯ ರಾಷ್ಟ್ರೀಯ ಕ್ರೀಡಾಪಟುಗಳು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ.
ಆಳ್ವಾಸ್‌ನ ಅಸ್ನಾ ಸರೀನ್ ಮತ್ತು ಮಂಗಳೂರಿನ ಸಹನಾ ನಡುವೆ ನಡೆದ ಆಕರ್ಷಕ ಕುಸ್ತಿ ಸೆಣಸಾಟ ನೆರೆದಿದ್ದ ಜನಸಮೂಹಕ್ಕೆ ಸಿಳ್ಳೆ, ಚಪ್ಪಾಳೆಗಳಿಗೆ ಪ್ರೇರಣೆ ನೀಡಿತು. ಬೆಂಗಳೂರಿನ ಡಾಲಿ ವರ್ಗೀಸ್ ಮತ್ತು ಆಳ್ವಾಸ್‌ನ ಅರ್ಷಿತ ಮಧ್ಯೆ ನಡೆದ ರೋಚಕ ಪಂದ್ಯವನ್ನು ಜನರು ತುದಿಗಾಲ ಮೇಲೆ ನಿಂತು ನೋಡಿದರು.
ಮಹರಾಷ್ಟ್ರಾದ ನಾಮದೇವ, ಹರಿಯಾಣದ ಅಜೆಯ್, ವಿಜಯ್, ಸೇರಿದಂತೆ ಉತ್ತರ ಪ್ರದೇಶ, ಕೊಲ್ಲಾಪುರ ಮತ್ತು ಬೆಳಗಾವಿ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಭಾನುವಾರ ತಡರಾತ್ರಿ ಫಲಿತಾಂಶಗಳು ಘೋಷಣೆಯಾಗಲಿವೆ. ಕಾಗಿನೆಲೆ ಗುರುಪೀಠದ ನಿರಂಜನಾನಂದ ಶ್ರೀ, ಶಾಸಕ ಎಸ್.ರಾಮಪ್ಪ ಮತ್ತಿತರೆ ಗಣ್ಯರು ಸೇರಿದಂತೆ ಸಾವಿರಾರು ಜನರು ಕುಸ್ತಿ
ಪಂದ್ಯಾವಳಿ ವೀಕ್ಷಿಸಿದರು.
ಪಂದ್ಯಾವಳಿಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಕ್ರಮವಾಗಿ ಒಂದೂ ಕಾಲು ಕೆ.ಜಿ., ಮುಕ್ಕಾಲು ಕೆ.ಜಿ., ಅರ್ಧ ಕೆ.ಜಿ. ಬೆಳ್ಳಿ ಗದೆಗಳು ಹಾಗೂ ನಗದು ಹಣ ಹಾಗೂ ಪಾರಿತೋಷಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.