ಚನ್ನರಾಯಪಟ್ಟಣ/ಬಾಗೂರು: ಮದ್ಯ ಸೇವಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿ ಕೊಂಡಾಗ ಬುದ್ಧಿವಾದ ಹೇಳಿದ್ದಕ್ಕೆ ಕುಪಿತಗೊಂಡ ಯುವಕನೋರ್ವ ಸಿನಿಮೀಯ ರೀತಿಯಲ್ಲಿ ಗುಂಪಿನ ಮೇಲೆ ಕಾರು ಚಲಾಯಿಸಿದ್ದರಿಂದ ಓರ್ವ ಸಾವನ್ನಪ್ಪಿದರೆ, 6 ಮಂದಿ ಗಾಯಗೊಂಡಿದ್ದಾರೆ.
ತಾಲೂಕಿನ ಬಾಗೂರು ಹೋಬಳಿ ಎಂ.ಶಿವರ ಗ್ರಾಮದ ಮುಂಭಾಗ ಯುವಕರು ವ್ಯಾಜ್ಯ ಮಾಡಿಕೊಂಡಿದ್ದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಗ್ರಾಮದ ಹಿರಿಯರು ಯುವಕರಿಗೆ ಬುದ್ಧಿ ಹೇಳಿ ಕಳುಹಿಸಿದ್ದರು. ಈ ವೇಳೆ ಕೋಪಗೊಂಡ ಯುವಕ ಏಕಾಏಕಿ ಕಾರು ಹತ್ತಿಸಿ ಓರ್ವನ ಬಲಿ ಪಡೆದಿದ್ದಲ್ಲದೆ 6 ಮಂದಿಗೆ ಗಾಯ ಮಾಡಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ:ಎಂ.ಶಿವರ ಗ್ರಾಮದ ನಂದೀಶ್(48) ಮೃತ ವ್ಯಕ್ತಿ.
ಇದೇ ಗ್ರಾಮದ ಗಿರೀಶ್ ಎಂಬವರ ಕಾಲು ಮುರಿದಿದೆ. ಇನ್ನು ಶರತ್, ಶಿವರಾಜ್, ಬಸವರಾಜ್, ಚೇತನ್ ಹಾಗೂ ಸೋಮನಹಳ್ಳಿ ಹರೀಶ್‌ಗೆ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ನವೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಘಟನೆ ವೇಳೆ ಗುಂಪಿನಲ್ಲಿದ್ದ ನಂದೀಶ್ ಹಾಗೂ ಗಿರೀಶ್‌ಗೆ ತೀವ್ರವಾಗಿ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ನಂದೀಶ್ ದಾರಿ ಮಧ್ಯೆ ಮೃತರಾದರೆ, ಗಿರೀಶ್ ಕಾಲು ಮುರಿದಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಪಿ ನಲ್ಲಿದ್ದ ಶರತ್, ಶಿವರಾಜ್, ಬಸವರಾಜ್, ಚೇತನ್ ಹಾಗೂ ಸೋಮನಹಳ್ಳಿ ಹರೀಶ್‌ಗೆ ಸಣ್ಣ ಪುಟ್ಟ ಗಾಯವಾಗಿದೆ. ವೇಗವಾಗಿ ಕಾರು ಬರುವಾಗ ಅಲ್ಲಿದ್ದ ಅನೇಕ ಮಂದಿ ದೂರ ಓಡಿ ಹೋಗಿದ್ದಾರೆ. ಇಲ್ಲದಿದ್ದರೆ ಇನ್ನೂ 2-3 ಮಂದಿ ಮೃತಪಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಾರೇಹಳ್ಳಿ ಉಪ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆ ಮೇರೆಗೆ ಕಾರು ಚಾಲಕ ನವೀನ್ ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ಮುಂದುವರಿಸಲಾಗಿದೆ.
ಸಿನಿಮೀಯ ರೀತಿಯಲ್ಲಿ ಕಾರನ್ನು ಹತ್ತಿಸಿದ ಆರೋಪಿ-
ಬಾಗೂರು ಹೋಬಳಿ ಎಂ.ಶಿವರ ಗ್ರಾಮ ವೃತ್ತದ ಎಂಎಸ್‌ಐಎಲ್ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ ಅಲ್ಲೇ ಸೇವನೆ ಮಾಡಿದ ಯುವಕರು, ಮದ್ಯ ಸೇವನೆ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಗ್ರಾಮದ ಹಿರಿಯರಾದ ನಂದೀಶ್, ಗಿರೀಶ್ ಹಾಗೂ ಇತರರು ಯುವಕರ ಜಗಳ ನಿಲ್ಲಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಹೊಂಗೇಹಳ್ಳಿ ರಂಗೇಗೌಡರ ಪುತ್ರ ನವೀನ್ ತನ್ನ ಕಾರಿನ ಮೂಲಕ ಸುಮಾರು 300 ಮೀಟರ್‌ವರೆಗೆ ಹೋಗಿ ಅಲ್ಲಿಂದ ಕಾರು ತಿರುಗಿಸಿಕೊಂಡು ಬಂದು ಬುದ್ಧಿ ಹೇಳಿದವರು ನಿಂತಿದ್ದ ಗುಂಪಿನ ಮೇಲೆ ಸಿನಿಮೀಯ ಮಾದರಿಯಲ್ಲಿ ಕಾರನ್ನು ಹರಿಸಿದ್ದಾನೆ.