Advertisement
2021, ಆ.15ಇದು ಭಾರತೀಯರಿಗೆ ಸ್ವಾತಂತ್ರ್ಯ ದಿನ ತಂದುಕೊಟ್ಟ ದಿನವಾದರೆ, ಆಫ್ಘಾನಿಸ್ತಾನ ಮಂದಿಗೆ ಸ್ವಾತಂತ್ರ್ಯ ಕಿತ್ತುಕೊಂಡ ದಿನ. ಅಂದು ಅದುವರೆಗೆ ಅಧಿಕಾರದಲ್ಲಿದ್ದ ಅಫ್ಘಾನಿಸ್ತಾನ ಸರ್ಕಾರ, ಬಿದ್ದು ಹೋಗಿತ್ತು. ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಿ ಹೋದರು. 2020ರಿಂದಲೂ ಅಮೆರಿಕ ಮತ್ತು ತಾಲಿಬಾನ್ ನಡುವೆ ಮಾತುಕತೆ ನಡೆದು, ಅಮೆರಿಕ ಸರ್ಕಾರವೂ ಅಫ್ಘಾನಿಸ್ತಾನದಿಂದ ತನ್ನ ಸೇನೆ ವಾಪಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಹೀಗಾಗಿ, ಇಡೀ ಆಫ್ಘಾನಿಸ್ತಾನ ತಾಲಿಬಾನ್ ಪಾಲಾಯಿತು. ಅಮೆರಿಕದ ಜತೆ ಮಾನವ ಹಕ್ಕುಗಳ ವಿಚಾರದಲ್ಲಿ ತಾಲಿಬಾನ್ ಕೆಲವೊಂದು ಮಾತು ಕೊಟ್ಟಿತ್ತು. ಆದರೆ, ಮೊದಲ ಒಂದು ವರ್ಷ ಸುಮ್ಮನಿದ್ದ ತಾಲಿಬಾನಿಗಳು ಮರು ವರ್ಷವೇ ತಮ್ಮ ಕಿತಾಪತಿ ಶುರು ಮಾಡಿದರು.
ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಯುದ್ಧ ನಿಂತಿದೆ. 2001ರಿಂದ 2021ರ ವರೆಗೆ ಅಲ್ಲಿ ಯುದ್ಧ ದಿನನಿತ್ಯದ ಸಂಗತಿಯಾಗಿತ್ತು. ಅಮೆರಿಕ ಪಡೆಗಳು ಅಥವಾ ನ್ಯಾಟೋ ಪಡೆಗಳು ದೇಶ ಬಿಟ್ಟು ಹೋದ ಮೇಲೆ ಯುದ್ಧ ಸ್ಥಗಿತವಾಯಿತು. ವಿಚಿತ್ರವೆಂದರೆ, 1990ರ ದಶಕದಲ್ಲಿ ತಾಲಿಬಾನ್ ಆಡಳಿತವಿದ್ದ ಕಾಲದಲ್ಲಿ ಜಾರಿಯಲ್ಲಿದ್ದ ಸಾರ್ವಜನಿಕವಾಗಿ ನೇಣು ಹಾಕುವುದು, ಥಳಿತ ಮಾಡುವುದು ಮತ್ತೆ ವಾಪಸ್ ಬಂದಿವೆ. ಈ ಮೂಲಕ ತಾವು ಹಳೆಯ ತಾಲಿಬಾನ್ ಮನಸ್ಥಿತಿಯಲ್ಲೇ ಇದ್ದೇವೆ ಎಂಬುದನ್ನು ಹೊರಜಗತ್ತಿಗೆ ತೋರಿಸುತ್ತಿದ್ದಾರೆ. ಮಹಿಳೆಯರ ಹಕ್ಕು ದಮನ
ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ಇಸ್ಲಾಮಿಕ್ ಪದ್ಧತಿಯ ಕಾನೂನು ಜಾರಿಗೆ ತರಲು ತಾಲಿಬಾನ್ ಹೊರಟಿದೆ. ಇದರ ಮೊದಲ ರೂಪವೇ ಮಹಿಳೆಯರ ಹಕ್ಕು ದಮನ. ವಿಚಿತ್ರವೆಂದರೆ, ಅಮೆರಿಕದ ಜತೆ ಒಪ್ಪಂದದ ವೇಳೆ ಯಾರ ಹಕ್ಕುಗಳಿಗೂ ತಾವು ಚ್ಯುತಿ ತರುವುದಿಲ್ಲ ಎಂದು ತಾಲಿಬಾನಿಯರು ಮಾತು ಕೊಟ್ಟಿದ್ದರು. ಆದರೆ, ಈಗ ಈ ಬಗ್ಗೆ ಕೇಳುತ್ತಲೇ ಇಲ್ಲ. ಹೀಗಾಗಿ, ಇಸ್ಲಾಮಿಕ್ ಷರಿಯಾ ಕಾನೂನಿನಂತೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಓದುವಂತಿಲ್ಲ, ಹೊರಗೆ ಹೋಗುವಂತಿಲ್ಲ, ಕೆಲಸ ಮಾಡುವಂತಿಲ್ಲ.
Related Articles
ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನ ಬಿಟ್ಟು ಹೋದ ಮೇಲೆ ಇಲ್ಲಿಗೆ ಬರುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯಗಳ ಆರ್ಥಿಕ ನೆರವು ಸ್ಥಗಿತವಾಯಿತು. ಹೀಗಾಗಿ, ಇಲ್ಲಿನ ಆರ್ಥಿಕ ಸ್ಥಿತಿ ಪದಗೆಟ್ಟಿದೆ. ಹಾಗೆಯೇ, ವೈದ್ಯ ಮತ್ತು ನರ್ಶಿಂಗ್ ಸೇರಿ ವಿವಿಧೆಡೆಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರು. ಈಗ ಅವರನ್ನು ನಿರ್ಬಂಧಿಸಲಾಗಿದೆ. ಇದು ಸಾಮಾನ್ಯ ನಾಗರಿಕರ ಪೀಕಲಾಟಕ್ಕೂ ಕಾರಣವಾಗಿದೆ. ಚೀನಾ ಮತ್ತು ಕಜಕಿಸ್ತಾನ ಹೂಡಿಕೆಯ ಭರವಸೆ ನೀಡಿವೆ. ಆದರೆ, ಉಳಿದ ದೇಶಗಳು ಅತ್ತ ಸುಳಿಯುತ್ತಲೂ ಇಲ್ಲ. ಅಲ್ಲಿನ ಮಾನವ ಹಕ್ಕುಗಳ ನಿರ್ಬಂಧದಿಂದಾಗಿ ಪಾಶ್ಚಿಮಾತ್ಯ ದೇಶಗಳು ಹೂಡಿಕೆ ಮಾಡುವುದಿಲ್ಲ ಎಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ತಾಲಿಬಾನ್ ಸರ್ಕಾರವನ್ನು ಗುರುತಿಸಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ, ಎಲ್ಲ ಆರ್ಥಿಕ ಬೆಳವಣಿಗೆಗಳಿಗೆ ಸಮಸ್ಯೆ ಶುರುವಾಗಿದೆ.
Advertisement
2021ರ ಆ.15ರಿಂದ ಇಲ್ಲಿಯ ವರೆಗೆ… 2021ರ ಆ.15- ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶಬಿಟ್ಟು ಪರಾರಿ. ಅಫ್ಘನ್ ಆಡಳಿತ ಸಂಪೂರ್ಣವಾಗಿ ತಾಲಿಬಾನ್ ವಶಕ್ಕೆ.
2022ರ ಮಾ.23 – ಅಮೆರಿಕ ಜತೆಗಿನ ಆಗಿದ್ದ ಒಪ್ಪಂದ ಉಲ್ಲಂಘಿಸಿದ ತಾಲಿಬಾನ್. 6ನೇ ಕ್ಲಾಸ್ ಗಿಂತ ಮೇಲ್ಪಟ್ಟ ಬಾಲಕಿಯರ ಶಾಲಾ ಶಿಕ್ಷಣ ಬಂದ್. ಶಾಲೆ ಆರಂಭವಾದ ಮೊದಲ ದಿನವೇ ಅವರನ್ನು ವಾಪಸ್ ಕಳುಹಿಸಿದ ತಾಲಿಬಾನ್ ಆಡಳಿತ.
2022, ಮೇ 7 – ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಮಹಿಳೆಯರು ಕಣ್ಣು ಬಿಟ್ಟು ಉಳಿದ ಎಲ್ಲಾ ಭಾಗ ಮುಚ್ಚುವಂತೆ ಆದೇಶ. ಕೆಲಸವಿದ್ದರೆ ಮಾತ್ರ ಮನೆಯಿಂದ ಆಚೆ ಬರಬೇಕು. ಇಲ್ಲದಿದ್ದರೆ ಮನೆಯಲ್ಲೇ ಇರಬೇಕು ಎಂಬ ಖಡಕ್ ಸೂಚನೆ.
2022, ನ.10 – ಜಿಮ್‌ಗಳು ಮತ್ತು ಪಾರ್ಕ್ ಬಳಕೆ ಮಾಡದಂತೆ ಮಹಿಳೆಯರಿಗೆ ನಿರ್ಬಂಧ ವಿಧಿಸಿದ ತಾಲಿಬಾನ್ ಆಡಳಿತ. ಜತೆಯಲ್ಲಿ ಹಿಜಾಬ್, ಇಸ್ಲಾಮಿಕ್ ಉಡುಪುಗಳನ್ನು ಸರಿಯಾಗಿ ಬಳಕೆ ಮಾಡುವಂತೆ ಆದೇಶ.
2022ರ ನ.20 – ಸಾರ್ವಜನಿಕವಾಗಿ 19 ಮಂದಿಗೆ ಥಳಿತ. ತಾಲಿಬಾನ್ ಆಡಳಿತ ಬಂದ ನಂತರ ಇದೇ ಮೊದಲ ಬಾರಿಗೆ ಇಂಥ ಕ್ರಮ ಜಾರಿ.
2022ರ ಡಿ.8- ಕೊಲೆ ಅಪರಾಧಿಯೊಬ್ಬನನ್ನು ಸಾರ್ವಜನಿಕವಾಗಿ ನೇಣು ಹಾಕಿದ ತಾಲಿಬಾನ್ ಸರ್ಕಾರ.
2022ರ ಡಿ.21 – ವಿಶ್ವವಿದ್ಯಾನಿಲಯಗಳಿಗೆ ಯುವತಿಯರ ನಿರ್ಬಂಧ. ಇದಕ್ಕೂ ಮುನ್ನ ಹೈಸ್ಕೂಲ್, ಮಿಡಲ್ ಸ್ಕೂಲ್‌ಗಳಿಗೂ ನಿರ್ಬಂಧಿಸಿದ್ದ ಸರ್ಕಾರ.
2022ರ ಡಿ.24 – ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸರ್ಕಾರೇತರ ಎನ್‌ಜಿಓಗಳಲ್ಲಿ ಕೆಲಸ ಮಾಡದಂತೆ ಮಹಿಳೆಯರಿಗೆ ನಿರ್ಬಂಧ.
2023ರ ಮಾ.9 – ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಕೆಟ್ಟ ದೇಶವಾಗಿ ತಾಲಿಬಾನ್. ಹೆಣ್ಣು ಮಕ್ಕಳ ಎಲ್ಲ ಹಕ್ಕು ಕಸಿದುಕೊಂಡಿದೆ ಎಂದು ಘೋಷಣೆ ಮಾಡಿದ ವಿಶ್ವಸಂಸ್ಥೆ.
2023 ಜು.4 – ದೇಶಾದ್ಯಂತ ಎಲ್ಲ ಬ್ಯೂಟಿಸೆಲೂನ್‌ಗಳನ್ನು ಮುಚ್ಚಲು ತಾಲಿಬಾನ್ ಆದೇಶ. ಇದನ್ನು ನಡೆಸುತ್ತಿದ್ದ ?? ಸಾವಿರ ಹೆಣ್ಣು ಮಕ್ಕಳ ಉದ್ಯೋಗಕ್ಕೆ ಕುತ್ತು. ಮನೆಯನ್ನು ಬಿಟ್ಟು ಹೊರಗೆ ಯಾರನ್ನೂ ಭೇಟಿ ಮಾಡುವಂತಿಲ್ಲವೆಂದೂ ಮಹಿಳೆಯರಿಗೆ ನಿರ್ಬಂಧ.
2023 ಜು.19 – ಬ್ಯೂಟಿಸೆಲೂನ್ ಮುಚ್ಚಿದ ತಾಲಿಬಾನ್ ಆಡಳಿತದ ವಿರುದ್ಧ ಮಹಿಳೆಯರ ಪ್ರತಿಭಟನೆ. ಶಾಟ್ ಗನ್ ಬಳಸಿ ಪ್ರತಿಭಟನೆ ಹತ್ತಿಕ್ಕಿದ ತಾಲಿಬಾನ್.