ಹೊಸದಿಲ್ಲಿ: ತನ್ನ 5ನೇ ಪಂದ್ಯದಲ್ಲಿ ಆರ್ಸಿಬಿಯನ್ನು 19 ರನ್ನುಗಳಿಂದ ಮಣಿಸುವ ಮೂಲಕ ಗುಜರಾತ್ ಜೈಂಟ್ಸ್ ಗೆಲುವಿನ ಖಾತೆ ತೆರೆದಿದೆ. ಬುಧವಾರದ ವನಿತಾ ಪ್ರೀಮಿ ಯರ್ ಲೀಗ್ ಪಂದ್ಯದಲ್ಲಿ ಗುಜರಾತ್ 5 ವಿಕೆಟಿಗೆ 199 ರನ್ ಗಳಿಸಿದರೆ, ಆರ್ಸಿಬಿ 8 ವಿಕೆಟಿಗೆ 180 ರನ್ ಮಾಡಿತು. ಇದು 6 ಪಂದ್ಯಗಳಲ್ಲಿ ಆರ್ಸಿಬಿಗೆ ಎದುರಾದ 3ನೇ ಸೋಲು
ಶತಕದ ಜತೆಯಾಟ
ಗುಜರಾತ್ ಆರಂಭಿಕರಾದ ಲಾರಾ ವೋಲ್ವಾರ್ಟ್ ಮತ್ತು ನಾಯಕಿ ಬೆತ್ ಮೂನಿ ಸೇರಿ ಕೊಂಡು ಆರ್ಸಿಬಿ ಎಸೆತಗಳನ್ನು ಮುನ್ನುಗ್ಗಿ ಬಾರಿಸ ತೊಡಗಿದರು. ಓವರಿಗೆ ಹತ್ತರಂತೆ ರನ್ ಹರಿದುಬರತೊಡಗಿತು. 9.3 ಓವರ್ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಳಿಸಿದರು. ಮೊದಲ ವಿಕೆಟಿಗೆ 13 ಓವರ್ಗಳಿಂದ 140 ರನ್ ಹರಿದು ಬಂತು.
ಬೆತ್ ಮೂನಿ 51 ಎಸೆತ ಎದುರಿಸಿ ಅಜೇಯ 85 ರನ್ ಬಾರಿಸಿದರು. ಸಿಡಿಸಿದ್ದು 12 ಬೌಂಡರಿ, ಒಂದು ಸಿಕ್ಸರ್. ವೋಲ್ವಾರ್ಟ್ ಕೊಡುಗೆ 76 ರನ್. 45 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಒಳಗೊಂಡಿತ್ತು. ಇವರಿಬ್ಬರನ್ನು ಹೊರತುಪಡಿಸಿ ಎರಡಂಕೆಯ ಸ್ಕೋರ್ ದಾಖಲಿಸಿದ್ದು ಫೋಬ್ ಲಿಚ್ಫೀಲ್ಡ್ ಮಾತ್ರ (18).
ಬೃಹತ್ ಮೊತ್ತದ ಚೇಸಿಂಗ್ ವೇಳೆ ಆರ್ಸಿಬಿ ಬಿರುಸಿನ ಬ್ಯಾಟಿಂಗ್ ನಡೆಸಲು ವಿಫಲವಾಯಿತು. ಜಾರ್ಜಿಯಾ ವೇರ್ಹ್ಯಾಮ್ ಸರ್ವಾಧಿಕ 48, ರಿಚಾ ಘೋಷ್ 30, ಸೋಫಿ ಡಿವೈನ್ 23 ರನ್ ಹೊಡೆದರು.