ಬೀಜಿಂಗ್: ಡೋಕ್ಲಾಂ ವಿವಾದದ ಹಿನ್ನೆಲೆಯಲ್ಲಿ ಭಾರತ ವಿರುದ್ಧ ‘ಹೇಳಿಕೆಗಳ ಸಮರ’ವನ್ನು ಚೀನಾ ಮುಂದುವರಿಸಿದ್ದು, ಒಂದು ವೇಳೆ ನಾವೇನಾದರೂ ಭಾರತದೊಳಕ್ಕೆ ಪ್ರವೇಶಿಸಿದ್ದೇ ಆದಲ್ಲಿ ಅಲ್ಲಿ ಸಂಪೂರ್ಣ ಗೊಂದಲ, ಅರಾಜಕತೆ ಆಗಬಹುದು ಎಂದು ಎಚ್ಚರಿಸಿದೆ. ಈ ಮೂಲಕ ಮತ್ತೆ ಮತ್ತೆ ಭಾರತವನ್ನು ಕೆಣಕುವ ಕೆಲಸ ಮಾಡಿದೆ. ಅಲ್ಲದೇ ಡೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಾಣದಿಂದ ಭಾರತಕ್ಕೆ ಅಪಾಯ ಎಂಬ ಆ ದೇಶದ ನಿಲುವು ಅನೈತಿಕ ಮತ್ತು ಹಾಸ್ಯಾಸ್ಪದವಾದದ್ದು ಎಂದು ಟೀಕಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಾಂಗ್, ‘ಚೀನಾದ ಸಾರ್ವಭೌಮತೆ ಉಲ್ಲಂಘಿಸಲು ಬೇರಾವುದೇ ದೇಶಕ್ಕೆ ಅವಕಾಶ ಮಾಡಿಕೊಡಲ್ಲ. ಭಾರತದ ಸೇನೆ ಅಕ್ರಮವಾಗಿ ಗಡಿಯೊಳಕ್ಕೆ ಪ್ರವೇಶಿಸಿದ್ದು, ಇದೀಗ ಅನೈತಿಕ, ಹಾಸ್ಯಾಸ್ಪದ ಕಾರಣಗಳನ್ನು ನೀಡುತ್ತಿದೆ’ ಎಂದು ಹೇಳಿದ್ದಾರೆ. ಜೊತೆಗೆ “ಒಂದು ವೇಳೆ ಗಡಿಯಲ್ಲಿ ಭಾರತವೂ ದೊಡ್ಡ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಸುತ್ತಿದ್ದು, ಇದು ಚೀನಾಕ್ಕೆ ಬೆದರಿಕೆ ಎಂದು ನಾವೇನಾದರೂ ಆ ದೇಶದ ಗಡಿಯೊಳಕ್ಕೆ ನುಗ್ಗಿದರೆ ಏನಾಗಬಹುದು?’ ಎಂದು ಪ್ರಶ್ನಿಸಿದ್ದಾರೆ.
ರಾಜನಾಥ್ ಹೇಳಿಕೆಗೆ ತಿರಸ್ಕಾರ
ಡೋಕ್ಲಾಂ ವಿಚಾರದಲ್ಲಿ ಚೀನಾ ಶೀಘ್ರ ಧನಾತ್ಮಕವಾಗಿ ನಡೆದುಕೊಳ್ಳುತ್ತದೆ ಎಂಬ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಚೀನಾ ತಿರಸ್ಕರಿಸಿದೆ. ಈ ಕೂಡಲೇ ಭಾರತ ಬೇಷರತ್ತಾಗಿ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಅದು ಪುನರುಚ್ಚರಿಸಿದೆ. ಜೊತೆಗೆ ಅಕ್ರಮವಾಗಿ ಭಾರತೀಯ ಸೇನೆ ಗಡಿ ದಾಟಿದೆ ಎಂದೂ ಆರೋಪಿಸಿದೆ.