ಮೊಹಾಲಿ: ಪಂಜಾಬ್‌ನ ಚಂಡೀಗಢದಲ್ಲಿ ಟಿ20 ಕ್ರಿಕೆಟ್ ಕೂಟವೊಂದು ನಡೆದು ಅದು ಆನ್‌ಲೈನ್ ಮೂಲಕ ಶ್ರೀಲಂಕಾದಲ್ಲಿ ನೇರ ಪ್ರಸಾರಗೊಂಡಿದೆ. ಈ ಕೂಟದ ಮೂಲಕ ಬೆಟ್ಟಿಂಗ್ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಬಿಸಿಸಿಐ ಹಾಗೂ ಪಂಜಾಬ್ ಪೊಲೀಸ್ ತನಿಖೆ ಆರಂಭಿಸಿವೆ.
ಜೂ. 29ರಂದು ಚಂಡೀಗಢದಿಂದ 16 ಕಿ.ಮೀ. ದೂರದಲ್ಲಿರುವ ಸವಾರ ಗ್ರಾಮದಲ್ಲಿ ಕೂಟವನ್ನು ಆಯೋಜಿಸಲಾಗಿತ್ತು. ಇದು ಯುವಿಎ ಟಿ20 ಲೀಗ್ ಹೆಸರಲ್ಲಿ ಲಂಕಾದಲ್ಲಿ ಆನ್‌ಲೈನ್‌ನಲ್ಲಿ ನೇರ ಪ್ರಸಾರಗೊಂಡಿದೆ.
ಬೆಟ್ಟಿಂಗ್ ಉದ್ದೇಶಕ್ಕೆ ಕೂಟವನ್ನು ಆಯೋಜಿಸಿರುವ ಸಾಧ್ಯತೆ ಇದೆ ಎಂದು ಪಂಜಾಬ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತನಿಖಾ ತಂಡದ ಮುಖ್ಯಸ್ಥ ಅಜಿತ್ ಸಿಂಗ್ ಪ್ರತಿಕ್ರಿಯಿಸಿ, “ಬಿಸಿಸಿಐ ಅನುಮೋದನೆ ಪಡೆದುಕೊಂಡಿರುವ ಲೀಗ್ ಆಗಿದ್ದರೆ ಅಥವಾ ಇದರಲ್ಲಿ ಬಿಸಿಸಿಐ ವ್ಯಾಪ್ತಿಗೆ ಒಳಪಟ್ಟ ಆಟಗಾರರು ಭಾಗವಹಿಸಿದ್ದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಒಂದು ವೇಳೆ ಇದನ್ನು ಬೆಟ್ಟಿಂಗ್ ಉದ್ದೇಶಕ್ಕಾಗಿಯೇ ನಡೆಸಿದ್ದರೆ ಪೊಲೀಸರೇ ಇದರ ಪೂರ್ಣ ತನಿಖೆಯನ್ನು ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.