Advertisement

ಸಾಧನೆಯ ಹಾದಿಯಲಿ ಯುವ ಪ್ರತಿಭೆ ಪೂಜಾ

09:46 PM Oct 23, 2020 | Karthik A |

ಹೆಣ್ಣು ಜೀವ ಚೈತನ್ಯದ ಸಂಕೇತ. ಆಕೆ ದೃಢ ನಿರ್ಧಾರದಿಂದ ಏನನ್ನಾದರೂ ಸಾಧಿಸಬಲ್ಲಳು.

Advertisement

ತಮ್ಮ ಬದುಕಿನ ಎಲ್ಲ ಸವಾಲುಗಳಿಗೆ ಪ್ರತಿಯಾಗಿ ನಿಂತು ಎದುರಿಸಿದ ಅದೆಷ್ಟೋ ಮಹಿಳೆಯರು ಕಾಣಸಿಗುತ್ತಾರೆ.  ಅಂಥವರ ಸಾಲಿನಲ್ಲಿ ಪೂಜಾ ಎಂ. ಪೂಜಾರಿ ಕೂಡ ಓರ್ವರು.

ಪೂಜಾ ಮೂಲತಃ ಉಡುಪಿ ಜಿಲ್ಲೆಯ ಬೈಲೂರಿನವರು. ತಂದೆ ಮೋಹನ್‌ ಪೂಜಾರಿ, ತಾಯಿ ಪ್ರೇಮಾ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದ ಅವರು ಆಫೀಸ್‌ ಮ್ಯಾನೇಜ್‌ಮೆಂಟ್‌ ಪರ್ಸನಲ್‌ ಸೆಕ್ಯುರಿಟಲ್‌ ಕೋರ್ಸ್‌ನ್ನು ಪೂರ್ಣಗೊಳಿಸಿ, ಪ್ರಸ್ತುತ ಸ್ಥಳೀಯ ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆಯಾದ ಇವರು ತಮ್ಮ 18ನೇ ವಯಸ್ಸಿನಲ್ಲೇ ನಾಟಕ ರಂಗಕ್ಕೆ ಪ್ರವೇಶ ಪಡೆದುಕೊಂಡರು. ಸತತ 8 ವರ್ಷಗಳ ಕಾಲ ನಾಟಕರಂಗದಲ್ಲಿ ಛಾಪು ಮೂಡಿಸಿರುವ ಪೂಜಾ ಪ್ರಸುತ್ತ ಮಾಡೆಲಿಂಗ್‌, ಸಿನೆಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ನಟನಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು “ಕಲ್ಪರೆ ಮಸ್ತ್ ಉಂಡು’ ಎಂಬ ನಾಟಕದಲ್ಲಿ ಭಾಗ್ಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಮುಂದೆ 2012ರಲ್ಲಿ ಸನ್ನಿಧಿ ಕಲಾವಿದರು ತಂಡಕ್ಕೆ ಸೇರ್ಪಡೆಗೊಂಡು “ಏನಿನ್ನಿ ಬೇತೆ ಆಯಿನಿ ಬೇತೆ’, ದಾಯ್‌ ಇಂಚ್ಚ ಮಲ್ತಾ ಮೊದಲಾದ 14 ನಾಟಕದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ದಿನೇಶ್‌ ಅತ್ತವಾರ ಗರಡಿಯಲ್ಲಿ ಪಳಗಿರುವ ಕಲಾ ಚತುರೆ ಪೂಜಾ ಮುಂದೆ 2014ರಲ್ಲಿ ಅಭಿನಯ ಕಲಾವಿದರು ನಾಟಕ ತಂಡಕ್ಕೆ ಪಾದಾರ್ಪಣೆಗೈದರು. 2019ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ದ.ಕ., ಉಡುಪಿ, ಕಾಸರಗೋಡು ಜಿಲ್ಲಾಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ “ಉತ್ತಮ ಶ್ರೇಷ್ಠ ನಟಿ’ ಪ್ರಶಸ್ತಿಗೆ ಭಾಜನರಾದರು.

Advertisement

ತುಳುನಾಡಿನಾದ್ಯಂತ ಮನೆಮಾತಾದ ಗೋಲ್ಮಾಲ್‌ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಕೆಲವೊಂದು ಕಿರುಚಿತ್ರ ಹಾಗೂ ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಮೌನ ರಾಗ’ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟಲ್ಲದೇ ಸ್ಥಳೀಯ ಖಾಸಗಿ ಚಾನಲ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ “ಕ್ಲೀನ್‌ ಕೃಷ್ಣಪ್ಪೆ ನೈಸ್‌ ನಾರಾಯಣೆ’ ತುಳು ಧಾರಾವಾಹಿಯಲ್ಲಿ ನಟಿಸಿರುವ ಪ್ರತಿಭೆ ಪೂಜಾ.

ಸದ್ಯ ಸ್ಮಿತೇಶ್‌ ಎಸ್‌. ಬಾಯರ್‌ ನಿರ್ದೇಶನದ “ಕನಸು ಮಾರಾಟಕ್ಕಿದೆ’ ಕನ್ನಡ ಚಲನಚಿತ್ರದಲ್ಲಿ ಉಪನ್ಯಾಸಕಿಯಾಗಿ ಬಣ್ಣ ಹಚ್ಚಿದ್ದಾರೆ. ಸಿನೆಮಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಮೂಡಿಸಿಕೊಂಡ ಪೂಜಾ ಮುಂದೆ ಶ್ವೇತಾ ಸಂತೋಷ್‌ ಅವರ ಪ್ರೋತ್ಸಾಹದಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಧನೆಗೆ ಮುಂದಾದರು. ಇತ್ತೀಚೆಗೆ ಕರ್ನಾಟಕ ಸ್ಟೈಲ್‌ ಐಕಾನ್‌ 2020ನಲ್ಲಿ ಭಾಗವಹಿಸಿದ ಪೂಜಾ ಬೆಸ್ಟ್‌ ಔಟ್‌ಫಿಟ್‌ ಸಬ್‌ ಟೈಟಲ್‌ ಜತೆ “ಮಿಸ್‌ ಪಾಪ್ಯುಲರ್‌ ಕರ್ನಾಟಕ ಸ್ಟೈಲ್‌ ಐಕಾನ್‌ 2020 ಕ್ರೌನ್‌ ವಿನ್ನರ್‌’ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್‌/ಮಿಸ್ಟರ್‌ ಬಿಲ್ಲವ ಬ್ಯೂಟಿ ಪೆಜೆಂಟ್‌ ಮತ್ತು ವಾನ್‌ ಮಿಸ್‌ ಕ್ರಿಯೇಟಿವ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ಪೂಜಾ “ಮಿಸ್‌ ಕ್ರಿಯೇಟಿವ್‌ ಡಿಸೈನ್‌ ಸಬ್‌ ಟೈಟಲ್‌” ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸಾಧಿಸುವ ಛಲ, ಗುರಿಯಿದ್ದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಮ್ಮಲ್ಲಿನ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ನಾವೇ ನಿರ್ಮಿಸಿಕೊಳ್ಳುವುದು ಜೀವನದಲ್ಲಿ ಬಹಳ ಮುಖ್ಯ ಎನ್ನುತ್ತಾರೆ ಪೂಜಾ ಎಂ. ಪೂಜಾರಿ.

 ಸೌಮ್ಯ ಕಾರ್ಕಳ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ 

Advertisement

Udayavani is now on Telegram. Click here to join our channel and stay updated with the latest news.

Next