ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಮಹೋತ್ಸವ ನಿಮಿತ್ತ ರವಿವಾರ ಸಂಜೆ ಸಪ್ತರಾ ತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಮಠದ ಮುಂಭಾಗದ ಆವರಣದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಅದಕ್ಕೂ ಮುನ್ನ ಪ್ರಾರ್ಥನೋತ್ಸವ, ಪ್ರಭ ಉತ್ಸವ, ಗೋಪೂಜೆ, ಅಶ್ವಪೂಜೆ ನೆರವೇರಿಸಿದರು. ಈ ಬಾರಿ ಸಪ್ತರಾತ್ರೋತ್ಸವದ ಮೊದಲನೇ ದಿನವೇ ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀನಿವಾಸ ದೇವರ ಪ್ರಸಾದ ರೂಪದ ಶೇಷವಸ್ತ್ರ ತರಲಾಯಿತು.
ಟಿಟಿಡಿಯ ಇಒ ಜೆ.ಶಾಮಲರಾವ್ ನೇತೃತ್ವದಲ್ಲಿ ತರಲಾದ ಶೇಷವಸ್ತ್ರವನ್ನು ಶ್ರೀಮಠದ ಸಿಬ್ಬಂದಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಶ್ರೀ ಸುಬುಧೇಂದ್ರ ತೀರ್ಥರು ಶೇಷವಸ್ತ್ರ ತಲೆ ಮೇಲೆ ಹೊತ್ತು ಸಾಗಿದರು. ಈ ವೇಳೆ ಶ್ರೀಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ತಿರುಪತಿ ದೇವಸ್ಥಾನಕ್ಕೆ ಹೇಗೆ ಜಾತಿ-ಮತ-ಭೇದವಿಲ್ಲದೇ ಭಕ್ತರು
ನಡೆದುಕೊಳ್ಳುತ್ತಾರೋ ಅದೇ ರೀತಿ ಮಂತ್ರಾಲಯ ಮಠಕ್ಕೂ ಭಕ್ತರು ನಡೆದುಕೊಳ್ಳುತ್ತಾರೆ.
ಶ್ರೀನಿವಾಸ ದೇವರ ಅನುಗ್ರಹದಿಂದ ಜನಿಸಿದ ರಾಯರಿಗೂ ತಿರುಪತಿ ತಿಮ್ಮಪ್ಪನಿಗೂ ಅವಿನಾಭಾವ ನಂಟಿದೆ. ಹೀಗಾಗಿ ತಿರುಮಲದಿಂದ ಶ್ರೀನಿವಾಸ ದೇವರ ಶೇಷವಸ್ತ್ರಗಳು ಪ್ರಸಾದ ರೂಪದಲ್ಲಿ ಬರುವ ವಾಡಿಕೆ ನಡೆದುಕೊಂಡು ಬಂದಿದೆ ಎಂದರು.
ಪ್ರತಿ ವರ್ಷವೂ ಪೂರ್ವಾರಾಧನೆ ಅಥವಾ ಮಧ್ಯಾರಾಧನೆ ದಿನ ಶೇಷವಸ್ತ್ರಗಳು ಬರುತ್ತಿತ್ತು. ಈ ವರ್ಷ ಸಪ್ತರಾತ್ರೋತ್ಸವದ ಮೊದಲನೇ ದಿನದಂದೇ ಬಂದಿರುವುದು ಬಹಳ ಖುಷಿ ವಿಚಾರ. ಮಧ್ಯಾರಾಧನೆ ದಿನದಂದು ರಾಯರಿಗೆ ಶೇಷವಸ್ತ್ರ ಸಮರ್ಪಿಸಲಾಗುವುದು ಎಂದು ತಿಳಿಸಿದರು. ಟಿಟಿಡಿಯ ಇಒ ಶ್ಯಾಮಲರಾವ್ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು.
ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ. ಶ್ರೀನಿವಾಸರಾವ್, ವೆಂಕಟೇಶ ಜೋಶಿ ಹಾಗೂ ಟಿಟಿಡಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅನೇಕ ಭಕ್ತರು ನೆರೆದಿದ್ದರು.