ರಾಣಿಬೆನ್ನೂರು: ಉತ್ತರ ಕರ್ನಾಟದ ಪ್ರತಿ ಹಬ್ಬಕ್ಕೂ ವಿಶೇಷ ಹಿನ್ನೆಲೆಗಳಿವೆ. ಕೆಲವು ಹಬ್ಬಗಳು ಮನರಂಜನೆ ಉದ್ದೇಶ ಹೊಂದಿದರೆ, ಇನ್ನು ಹಲವು ಹಬ್ಬಗಳು ಸಮಾಜದಲ್ಲಿ ಬೇರು ಬಿಟ್ಟಿರುವ ದುಗುಡು ದುಮ್ಮಾನ ದೂರ ಮಾಡುವಂತ ದೇವರ ಆರಾಧನೆ ಹೊಂದಿರುತ್ತವೆ. ಇಂತಹ ಸಾಲಿಗೆ ಸೇರುವ ಜೋಕುಮಾರ ಸ್ವಾಮಿಯ ಆರಾಧನೆ ಇದೀಗ ವಿಶೇಷವಾಗಿ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿದೆ.
ಆಧುನಿಕತೆಯ ಭರಾಟೆಯಲ್ಲಿ ಹಬ್ಬ ಹರಿದಿನಗಳ ಆಚರಣೆಯ ಶ್ರದ್ಧೆ ಮಾಯವಾಗುತ್ತಿದ್ದರೂ ಜೋಕುಮಾರ ಸ್ವಾಮಿ ಹಬ್ಬದ ವಿಶಿಷ್ಠ ಆಚರಣೆಯು ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಸಂಸ್ಕೃತಿ ಜೀವಂತವಾಗಿರುದು ಸಾಕ್ಷಿಯಾಗಿದೆ. ಜೋಕುಮಾರ ಕೃಷಿಕರ ಅಚ್ಚು ಮೆಚ್ಚಿನ ದೇವರು, ಮಳೆ ಬೆಳೆ ತರಿಸುವ ಮೂಲಕ ಜನತೆಯ ಬಾಧೆ ದೂರ ಮಾಡುವ ಆರಾಧನೆಯಾಗಿದೆ. ಭಾದ್ರಪದ ಮಾಸದಲ್ಲಿ ಜನಿಸುವ ಜೋಕುಮಾರನ ಚರಿತ್ರೆ ಜನಪದ ಸಾಹಿತ್ಯದಲ್ಲಿ ಬಹಳಷ್ಟು ವರ್ಣಿಯವಾಗಿದೆ. ಕೃಷಿಕರು ಹಾಗೂ ಜನರಿಗೆ ಬೇಡಿದ ವರ ನೀಡುವ ಕರುಣಾಮಯಿ ಆಗಿದ್ದಾನೆ ಈ ಜೋಕುಮಾರ ಸ್ವಾಮಿ ಎಂಬುದು ಜನರ ನಂಬಿಕೆಯಾಗಿದೆ.
ಜೋಕುಮಾರನಮೂರ್ತಿ ಬಲು ವಿಚಿತ್ರ, ಅಗಲವಾದ ಮುಖ, ದಿಟ್ಟ ಕಣ್ಣುಗಳು, ಎತ್ತರದ ತಿಲಕ, ಚೂಪಾದ ಮೀಸೆ, ತೆರದ ಬಾಯಿ, ಹಣೆಯ ತುಂಬ ವಿಭೂತಿ, ಕುಂಕುಮ ಇಷ್ಟೆಲ್ಲ ಶೋಭಾಮಯವಾಗಿ ಬೇವಿನ ತೊಪ್ಪಲಿರುವ ಬುಟ್ಟಿಯೊಳಗೆ ಏಳು ದಿನ ಕುಳ್ಳಿರಿಸಿಕೊಂಡು ವಿವಿಧ ಊರು ಕೇರಿಗಳಲ್ಲಿ ತಿರುಗಿಸುವ ಮಹಿಳೆಯರು ಗಂಗಾಮತ, ಅಂಬಿಗರು, ಸುಣಗಾರ, ಕಬ್ಬಲಿಗ, ಗಂಗೆಯ ಮಕ್ಕಳು ಜೋಕುಮಾರನ ವರ್ಣನೆಯ ಜನಪದ ಗೀತೆಗಳ ಮೂಲಕ ಲಯಬದ್ಧವಾಗಿ ಹಾಡು ಹೇಳುತ್ತಾ ಅವನನ್ನು ವರ್ಣಿಸುತ್ತಾರೆ.
ಆಗ ಮಹಿಳೆಯರು ಜೋಕುಮಾರನ ಮೂರ್ತಿಗೆ ಪೂಜೆ ಸಲ್ಲಿಸಿ, ದವಸ ಧಾನ್ಯ ನೀಡಿ ಹರಕೆ ಸಲ್ಲಿಸುತ್ತಾರೆ. ಅವರಿಗೆ ಬೇವಿನ ತೊಪ್ಪಲು ಮತ್ತು ನುಚ್ಚನ್ನು ಪ್ರಸಾದ ರೂಪದಲ್ಲಿ ಕೊಟ್ಟು ಮುಂದಿನ ಓಣಿಗೆ ತೆರಳುತ್ತಾರೆ. ಆಗ ಗ್ರಾಮಸ್ಥರು ಪ್ರಸಾದ ರೂಪವಾಗಿ ನೀಡಿದ ಬೇವಿನ ತೊಪ್ಪಲು ಮತ್ತು ನುಚ್ಚನ್ನು ತಮ್ಮ ದವಸ ಧಾನ್ಯಗಳಲ್ಲಿ ಹಾಕಿದರೆ ಅವು ಕ್ಷೀಣಿಸುವುದಿಲ್ಲ ಎಂಬ ನಂಬಿಕೆ ಇಂದೂ ಇದೆ.
ಜೋಕುಮಾರನಿಗೆ ಬೆಣ್ಣೆಯ ನೈವೇಧ್ಯೆ ಮಾಡಲೇಬೇಕೆಂಬುದು ವಾಡಿಕೆ, ಈ ಹಿನ್ನೆಲೆಯಲ್ಲಿ ಬೆಣ್ಣೆಯನ್ನು ಆತನ ತೆರದ ಬಾಯಿಯಲ್ಲಿ ಹಾಕುವ ಮೂಲಕ ಮಕ್ಕಾಳಗದವರಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಬೇವಿನ ಎಲೆಯನ್ನು ದನದ ಕೊಟ್ಟಗಿಯಲ್ಲಿ ಸುಟ್ಟು ಹೊಗೆ ಹರಡಿಸಿದರೆ ಜನ ಮತ್ತು ಜಾನುವಾರುಗಳಿಗೆ ಯಾವುದೇ ಖಾಯಿಲೆ ಬರದು ಎಂಬ ನಂಬಿಕೆ ಇದೆ. ನಂತರ ಏಳು ದಿನಗಳ ಬಳಿಕ ನದಿಯಲ್ಲಿ ವಿಸರ್ಜಿಸಿ ತಮ್ಮ ತಮ್ಮ ಗ್ರಾಮಕ್ಕೆ ತೆರಳುತ್ತಾರೆ. ಆಗ ಮಡಿವಾಳರು ನದಿಯಲ್ಲಿ ಬಟ್ಟೆಗಳನ್ನು ಮಡಿಮಾಡುವುದರಿಂದ ಜೋಕುಮಾರನ ಪುಣ್ಯ ತಿಥಿಯನ್ನು ಆಚರಿಸುವ ಮೂಲಕ ಪೂಜೆ ಸಲ್ಲಿಸುತ್ತಾರೆ. ದೇಶಿಯ ಹಬ್ಬಗಳ ಆಚರಣೆಗಳು ಒಂದಕ್ಕೊಂದು ನಂಟುಗಳಿವೆ ಅಲ್ಲವೇ.