ರಾಯರ ಆರಾಧನೆಯಲ್ಲಿ ಮಂಗಳವಾರ ಪೂರ್ವಾರಾಧನೆ ನಡೆದರೆ, ಪ್ರಧಾನವಾದ ಮಧ್ಯಾರಾಧನೆ ಬುಧವಾರ ನಡೆಯಿತು. ಗುರುವಾರ ಉತ್ತರಾರಾಧನೆಯೊಂದಿಗೆ ಕಾರ್ಯಕ್ರಮಗಳಿಗೆ ತೆರೆಬೀಳಲಿದೆ. ಆರಾಧನೆ ಸಲುವಾಗಿ ರಾಯರ ಮಠಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ಹೊರಭಾಗದಲ್ಲಿ ವಿಶೇಷ ದೀಪಾಲಂಕಾರವಿತ್ತು. ರಾಯರ ಕುರಿತಾದ ಭಜನೆ, ಕೀರ್ತನೆ, ಸಂಗೀತ ಕಾರ್ಯಕ್ರಮಗಳು ಉತ್ಸವಕ್ಕೆ ಸಾಂಸ್ಕೃತಿಕ ರಂಗು ತಂದುಕೊಟ್ಟವು. ವಿಶೇಷ ಉಪನ್ಯಾಸಗಳ ಮೂಲಕ ರಾಯರ
ಕುರಿತು ಭಕ್ತರಿಗೆ ಮಾಹಿತಿ ನೀಡಲಾಯಿತು. ಅವರ ಸಾಧನೆ, ಪವಾಡಗಳನ್ನು ವಿವರಿಸಲಾಯಿತು. ಜಯನಗರ 9ನೇ ಬಡಾವಣೆಯ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಕೆಂಗೇರಿ ಉಪನಗರದ ಶ್ರೀರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸೀತಾಪತಿ ಅಗ್ರಹಾರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪ್ರಕಾಶನಗರದ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ, ಹರಿದಾಸನಗರದ ಶ್ರೀ ಅನುಗ್ರಹ ವಿಠಲ ದೇವಸ್ಥಾನ, ಮಲ್ಲೇಶ್ವರ ಈಜುಕೊಳ ಬಡಾವಣೆಯ ಶ್ರೀಗುರುರಾಜ ಭಕ್ತ ಮಂಡಳಿ, ಬಸವನಗುಡಿ ಶ್ರೀ ವ್ಯಾಸರಾಜ ಮಠ, ಸಂಪಿಗೆ ರಸ್ತೆಯ ರಾಘವೇಂದ್ರ ಸ್ವಾಮಿಗಳ ಸನ್ನಿಧಿ, ಜಯನಗರ 5ನೇ ಬಡಾವಣೆ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಶೇಷಾದ್ರಿಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಶಾಕಾಂಬರಿನಗರ ರಾಘವೇಂದ್ರಸ್ವಾಮಿಗಳ ಮಠ, ಸುಬ್ರಮಣ್ಯನಗರ ವ್ಯಾಸರಾಜ ಮಠ ಸೇರಿದಂತೆ ನಗರಾದ್ಯಂತ ಮಧ್ಯಾರಾಧನೆ ಭಕ್ತರ ಮನತಣಿಸಿತು.
Advertisement