ಸಂಬಂಧಿಕರೆಲ್ಲರ ಸಹಿ ಬಿದ್ದುಬಿಟ್ಟರೆ ಸಲೀಸಾಗಿ ಆಸ್ತಿಯನ್ನು ಮಾರಬಹುದು, ಅದರಲ್ಲೊಂದು ಪಾಲು ತೆಗೆದುಕೊಂಡು ಲೈಫಲ್ಲಿ ಸೆಟ್ಲ ಆಗಬಹುದು ಎಂದು ರಾಜ್-ವಿಷ್ಣು ಕನಸು ಕಂಡಿರುತ್ತಾನೆ. ಅದಕ್ಕಾಗಿ ಗಟ್ಟಿಮುಟ್ಟಾಗಿರುವ ತಾತನಿಗೂ ಸಾಯುವಂತೆ ನಾಟಕ ಮಾಡುವುದಕ್ಕೆ ಹೇಳಿರುತ್ತಾನೆ. ತಾತ ಸತ್ತರೆಂದೂ ವಿದೇಶದಲ್ಲಿರುವ ಚಿಕ್ಕಪ್ಪಂದಿರನ್ನು ಕರೆಸಿರುತ್ತಾನೆ. ಅವರೆಲ್ಲಾ ಎದ್ದುಬಿದ್ದು ಓಡಿಬರುತ್ತಿದ್ದಂತೆ ಅವರಿಗೆ ನಿಜವಾದ ಸಂಗತಿ ಹೇಳಬೇಕು ಎನ್ನುವಷ್ಟರಲ್ಲೇ, ಅದೆಲ್ಲಿಂದಲೋ ಇನ್ನೊಬ್ಬ ಪ್ರತ್ಯಕ್ಷನಾಗಿಬಿಡುತ್ತಾನೆ.
ತಾನು ಸಹ ಆ ತಾತನ ಇನ್ನೊಬ್ಬ ಮೊಮ್ಮಗ, ತನಗೂ ಒಂದು ದೊಡ್ಡ ಪಾಲು ಸಿಗಬೃಕು ಎಂದು ವಾದ ಮಾಡುತ್ತಾನೆ. ಹಾಗಾದರೆ, ರಾಜ್-ವಿಷ್ಣು ಕನಸು ನುಚ್ಚುನೂರಾಗಿ ಬಿಡುತ್ತದಾ? ರಾಮು ನಿರ್ಮಿಸುತ್ತಿರುವ 37ನೇ ಚಿತ್ರ ಇದು. ಈ ಚಿತ್ರ ನಿರ್ಮಿಸುತ್ತಿರುವುದಕ್ಕೆ ಮುಖ್ಯ ಕಾರಣ “ಅಧ್ಯಕ್ಷ’ ಚಿತ್ರದ ಯಶಸ್ಸು ಎಂದು ಅವರೇ ಹೇಳಿಕೊಂಡಿದ್ದಾರೆ. ಆ ಚಿತ್ರದ ಕಲೆಕ್ಷನ್ ನೋಡಿ ಅವರಿಗೆ ಆಶ್ಚರ್ಯವಾಗುವುದರ ಜೊತೆಗೆ, ಶರಣ್ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್‌ಗೆ ಜನ ಚಪ್ಪಾಳೆ ತಟ್ಟಿದ್ದು ನೋಡಿ, ರಾಮು ತಲೆಯಲ್ಲಿ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆ ಬಂದಿತಂತೆ.
ಅದಕ್ಕೆ ಸರಿಯಾಗಿ, ತಮಿಳಿನಲ್ಲಿ “ರಜನಿ ಮುರುಗನ್’ ಎಂಬ ಚಿತ್ರ ಬಂದಿದೆ. ಆ ಚಿತ್ರ ಶರಣ್ ಮತ್ತು ಚಿಕ್ಕಣ್ಣಗೆ ಹೇಳಿ ಮಾಡಿಸಿದಂತಿದೆ ಎಂದು ಅವರು ಕನ್ನಡಕ್ಕೆ ತಂದಿದ್ದಾರೆ. ಹಾಗೆ ನೋಡಿದರೆ, “ರಜನಿ ಮುರುಗನ್’ ಅದ್ಭುತ ಚಿತ್ರವೂ ಅಲ್ಲ, ದೊಡ್ಡ ಯಶಸ್ಸೂ ಗಳಿಸಲಿಲ್ಲ. ಅದ್ಯಾಕೆ ಈ ಚಿತ್ರವನ್ನು ಕನ್ನಡಕ್ಕೆ ತರಬೇಕು ಎಂದು ರಾಮುಗೆ ಅನಿಸಿತೋ ಗೊತ್ತಿಲ್ಲ. “ರಾಜ್-ವಿಷ್ಣು’ ಚಿತ್ರದಲ್ಲಿ ಶರಣ್ ಮತ್ತೂಮ್ಮೆ ಓತ್ಲಾ ಗಿರಾಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು “ಅಧ್ಯಕ್ಷ’ ಮುಂತಾದ ಚಿತ್ರಗಳಲ್ಲಿ ಇದೇ ತರಹದ ಪಾತ್ರಗಳನ್ನು ಮಾಡಿದ್ದಾರೆ.
ಯಾವುದೇ ಕೆಲಸ ಮಾಡದ ಒಬ್ಬ ಓತ್ಲಾ ಗಿರಾಕಿ, ತನ್ನ ಸ್ನೇಹಿತನನ್ನು ಜೊತೆಗಿಟ್ಟುಕೊಂಡು ಹುಡುಗಿಗೆ ಕಾಳು ಹಾಕುವ ಚಿತ್ರಗಳನ್ನು ಜನ ಸಾಕಷ್ಟು ನೋಡಿರುವುದರಿಂದ, ಇದು ಅಷ್ಟೇನೂ ವಿಶೇಷ ಎನಿಸದಿರುವ ಸಾಧ್ಯತೆ ಇದೆ. ಮೇಲಾಗಿ, ಚಿತ್ರದಲ್ಲಿ ಪ್ರೇಕ್ಷಕನನ್ನು ಹಿಡಿದಿಡುವ ಸನ್ನಿವೇಶವಾಗಲೀ ಅಥವಾ ಖುಷಿಪಡಿಸುವ ದೃಶ್ಯವಾಗಲೀ ಇಲ್ಲ. ಕೆಲವು ಪಾತ್ರಗಳು ಮತ್ತು ಸಂಭಾಷಣೆಗಳನ್ನು ಜನ ಎಂಜಾಯ್ ಮಾಡುತ್ತಾರೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ವಿಶೇಷವೇನೂ ಇಲ್ಲ ಎನಿಸಬಹುದು.
ನಿರ್ದೇಶಕ ಮಾದೇಶ್ ಹೇಳಿಕೇಳಿ ಆ್ಯಕ್ಷನ್ ಮತ್ತು ವೇಗದ ಚಿತ್ರಗಳಿಗೆ ಹೆಸರು ಮಾಡಿದವರು. ಅದ್ಯಾಕೋ ಅವರಿಗೆ ಈ ಚಿತ್ರದ ಹಿಡಿತ ಸಿಕ್ಕಿಲ್ಲ ಎಂದು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಅನಿಸದೇ ಇರಬಹುದು. ಶರಣ್ ಮತ್ತು ಚಿಕ್ಕಣ್ಣ ಇಬ್ಬರಿಗೂ ಈ ಪಾತ್ರ ಹೊಸದಲ್ಲವಾದ್ದರಿಂದ, ಇಬ್ಬರೂ ಲವಲವಿಕೆಯಿಂದ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ ನಟನೆ ಬಗ್ಗೆ ಏನು ಹೇಳುವುದೂ ಕಷ್ಟವೇ. ಆದರೆ, ಬಹಳ ಮುದ್ದಾಗಿ ಕಾಣಿಸುತ್ತಾರೆ. ಶ್ರೀನಿವಾಸಮೂರ್ತಿಗಳು ಎಂದಿನಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಒಳ್ಳೆಯ ಅಭಿನಯದ ಜೊತೆಗೆ, ಅವರು ಹೊಡೆದಾಡುವುದನ್ನೂ ನೋಡಬಹುದು. ಅದೇ ರೀತಿ ಸುಚೇಂದ್ರ ಪ್ರಸಾದ್ ಸಹ ವಿಭಿನ್ನ ಪಾತ್ರದಿಂದ ಖುಷಿಕೊಡುತ್ತಾರೆ. ಮೂರ್ಮೂರು ಪಾತ್ರಗಳನ್ನು ನಿಭಾಯಿಸಿರುವ ಸಾಧು, ರೌಡಿಯಾಗಿ ಕಾಣಿಸಿಕೊಂಡಿರುವ ಲೋಕಿ ಅಭಿನಯ ಚೆನ್ನಾಗಿದೆ. ಇದು ತಮಗೆ ವಿಭಿನ್ನ ಪ್ರಯತ್ನವಾದರೂ, ಚಿತ್ರ ಅದ್ಧೂರಿಯಾಗಿರುವಂತೆ ರಾಮು ನೋಡಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಮತ್ತು ರಾಜೇಶ್ ಕಟ್ಟ ಛಾಯಾಗ್ರಹಣ ಚೆನ್ನಾಗಿದೆ.
ವಿ.ಸೂ: ಇಲ್ಲಿ ನಾಯಕನ ಹೆಸರು ಬಿಟ್ಟರೆ, ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರಿಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಚಿತ್ರ: ರಾಜ್-ವಿಷ್ಣು
ನಿರ್ಮಾಣ: ರಾಮು
ನಿರ್ದೇಶನ: ಮಾದೇಶ್
ತಾರಾಗಣ: ಶರಣ್, ಚಿಕ್ಕಣ್ಣ, ವೈಭವಿ ಶಾಂಡಿಲ್ಯ, ಶ್ರೀನಿವಾಸಮೂರ್ತಿ, ಲೋಕಿ, ಮುರಳಿ ಮುಂತಾದವರು
* ಚೇತನ್ ನಾಡಿಗೇರ್