ಶಿಡ್ಲಘಟ್ಟ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲೇ, ಗೌರಿ ಗಣೇಶ ಹಬ್ಬವು ಸಮೀಪಿಸುತ್ತಿದೆ. ಈ ಬಾರಿ ರೋಗ ನಿರೋಧಕ ಶಕ್ತಿ ಇರುವ ಅರಿಶಿಣದಿಂದ ಗಣೇಶನನ್ನು ಮನೆಯಲ್ಲೇ ತಯಾರಿಸಿ, ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿಸಿ ಪರಿಸರ ಮಾಲಿನ್ಯ ನಿಯಂತ್ರಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಸಕ್ತ ವರ್ಷದಲ್ಲಿ ರೋಗ ನಿರೋಧಕ ಗುಣ ವುಳ್ಳ ಅರಿಶಿಣ ಗಣೇಶನನ್ನು ಪುಟ್ಟದಾಗಿ ಮನೆಯಲ್ಲೇ ತಯಾರಿಸಿ ಆಚರಿಸಬೇಕೆಂದು ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ‘ಪರಿಸರ ಸ್ನೇಹಿ ಜೊತೆಗೆ ಆರೋಗ್ಯ ಸ್ನೇಹಿ’ ಗಣೇಶೋತ್ಸವಕ್ಕೆ ಸಜ್ಜಾಗಬೇಕು. ಹಾಗಾಗಿ, ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿಣದಿಂದ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿಸಬೇಕು ಎಂದು ಸಲಹೆ ನೀಡಿದರು.
ಕೆರೆ ಕುಂಟೆಗಳಲ್ಲಿ ವಿಸರ್ಜನೆ ಇಲ್ಲ: ಪರಿಸರದ ಮೇಲೆ ಭಾರಿ ಪರಿಣಾಮ ಬೀರುವಂತಹ ಪಿಒಪಿ ಗಣೇಶ ಹಾಗೂ ರಾಸಾಯನಿಕ ಬಣ್ಣಗಳನ್ನೊಳಗೊಂಡ ಗಣೇಶನ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೌರಿ- ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಅವಕಾಶ ಇರುವುದಿಲ್ಲ ಹಾಗೂ ಗಣೇಶ ಮೂರ್ತಿ ಮೆರವಣಿಗೆಗೆ ನಿರ್ಬಂಧ ಹೇರಲಾಗಿದ್ದು, ಮೂರ್ತಿಯನ್ನು ಕೆರೆ ಕುಂಟೆಗಳಲ್ಲಿ ವಿಸರ್ಜನೆಗೆ ನಿಷೇಧ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತದ ಜೊತೆ ಸಹಕರಿಸಿ: ಕೋವಿಡ್ ವೈರಸ್ ಎಲ್ಲೆಡೆ ಆಕ್ರಮಿಸಿರುವ ಹಿನ್ನೆಲೆಯಲ್ಲಿ ಅರಿಶಿಣ ಗಣೇಶ ಪರಿಸರ ಹಾಗೂ ಆರೋಗ್ಯ ಸ್ನೇಹಿ ಗಣೇಶ ಹಬ್ಬವನ್ನು ಕೋವಿಡ್ ನಿರೋಧಕ ಪ್ರತಿಮೆಗಳನ್ನು ತಯಾರಿಸುವ ಮೂಲಕ ರೋಗ ನಿರೋಧಕ ಶಕ್ತಿಯುಳ್ಳ ಸಗಣಿ, ಅರಿಶಿಣ ಬಳಕೆಯಿಂದ ಮಾಡಿದ ಅಥವಾ ಗೋಧಿ ಅಥವಾ ರಾಗಿ ಹಿಟ್ಟಿಗೆ ಅರಿಶಿಣ ಸೇರಿಸಿ ಸಣ್ಣ ಸಣ್ಣ ಗಣೇಶನ ಪ್ರತಿಮೆಗಳನ್ನು ಮನೆಯಲ್ಲಿಯೇ ತಯಾರಿಸಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಹಬ್ಬದ ಸಂಭ್ರಮದಲ್ಲಿ ಜನದಟ್ಟಣೆ ಸೇರದೆ, ಮಾಸ್ಕ್ ಧರಿಸುವುದರ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಜಾಗೃತರಾಗಿ ಕೋವಿಡ್ ಮಹಾಮಾರಿಯನ್ನು ಹರಡದಂತೆ ತಡೆಗಟ್ಟಲು ಸಹಕರಿಸಿ ಎಂದು ಅವರು ಮನವಿ ಮಾಡಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿಗಳಾದ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.