ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಯ ಅರ್ಚಕ ಸ್ಥಾನದಿಂದ ಪದಚ್ಯುತಿಗೊಂಡಿದ್ದ ಮಹಾಂತ ವಿದ್ಯಾದಾಸ ಬಾಬಾ ಅವರು ಮಂಗಳವಾರ ಅಂಜನಾದ್ರಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಕಳೆದ 8 ತಿಂಗಳ ಹಿಂದೆ ಆನೆಗೊಂದಿ ರಾಜವಂಶಸ್ಥರ ನೇತೃತ್ವದ ಟ್ರಸ್ಟ್ ಕಮಿಟಿ ಮಹಾಂತ ವಿದ್ಯಾದಾಸ ಬಾಬಾ ಅವರನ್ನು ಅರ್ಚಕ ಸ್ಥಾನದಿಂದ ಪದಚ್ಯುತಿಗೊಳಿಸಿ ಬೇರೆ ಅರ್ಚಕರನ್ನು ನೇಮಿಸಿದ್ದರು. ಬಾಬಾ ಹಾಗೂ ಟ್ರಸ್ಟ್ ಕಮಿಟಿ ಸಂಘರ್ಷದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಪೊಲೀಸ್ ಇಲಾಖೆ ವರದಿ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯವನ್ನು ಜಿಲ್ಲಾಡಳಿತ ಸರಕಾರದ ವಶಕ್ಕೆ ಪಡೆದಿತ್ತು. ತಹಸೀಲ್ದಾರ್ ನೇತೃತ್ವದಲ್ಲಿ ನೇಮಕಗೊಂಡಿದ್ದ ಅರ್ಚಕರಿಂದ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿದ್ದವು.
ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ ಮಹಾಂತ ವಿದ್ಯಾದಾಸ ಬಾಬಾ ಅವರು ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಡಿ.21ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ಪುನಃ ಪೂಜೆ ಅರ್ಚನೆ ಕಾರ್ಯ ಮಾಡಲು ಅವಕಾಶ ನೀಡುವಂತೆ ಜಿಲ್ಲಾ ಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿತ್ತು.
ಅಂಜನಾದ್ರಿಬೆಟ್ಟದ ಶ್ರೀ ಆಂಜನೇಯಸ್ವಾಮಿ ಪೂಜಾ ಕಾರ್ಯ ಮಾಡಲು ಸರಕಾರದಿಂದ ತಾತ್ಕಾಲಿಕವಾಗಿ ಬೇರೆಯವರನ್ನು ನಿಯೋಜಿಸಲಾಗಿದೆ. ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರು ಅಕ್ರಮವಾಗಿ ದೇವಾಲಯ ಪ್ರವೇಶಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ.
●ವೀರೇಶ ಬಿರಾದಾರ್, ತಹಸೀಲ್ದಾರ್
8 ತಿಂಗಳ ಹಿಂದೆ ತಮ್ಮನ್ನು ಅರ್ಚಕ ಸ್ಥಾನದಿಂದ ಪದಚ್ಯುತಿ ಮಾಡಿದ್ದು ಷಡ್ಯಂತ್ರದಿಂದ ಕೂಡಿದೆ. ಭಕ್ತರು ನೀಡುವ ಹುಂಡಿ ಹಣ ಒಂದು ವರ್ಷದಿಂದ ಎಲ್ಲಿಗೆ ಹೋಗಿದೆ? ಕೋರ್ಟ್ ಮಧ್ಯಂತರ ಆದೇಶ ನೀಡಿದರೂ ಡೀಸಿ, ಎಸ್ಪಿಯವರು ಸ್ಪಂದಿಸಿಲ್ಲ. ಕೋರ್ಟ್‌ನ ಆದೇಶದಂತೆ ಮಂಗಳವಾರ ಅರ್ಚನೆ ಕಾರ್ಯ ಆರಂಭಿಸಿದ್ದೇನೆ.
●ಮಹಾಂತ ವಿದ್ಯಾದಾಸ ಬಾಬಾ