Advertisement
ಶುಕ್ರವಾರ ನಡೆಯುವ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜಯ ಯಾರ ಪರವಾಗಿರಲಿದೆ ಎನ್ನುವುದರ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬ್ಯಾಂಕಿನ 14 ಜನ ನಿರ್ದೇಶಕರ ಪೈಕಿ ಲಕ್ಷ್ಮೀ ಹೆಬ್ಕಾಳ್ಕರ್ ಬಣದಲ್ಲಿ 9 ಜನರು ಜಾರಕಿಹೊಳಿ ಬಣದಲ್ಲಿ 5 ಜನರು ಹಾಗೂ ಸರ್ಕಾರದಿಂದ ಒಬ್ಬರು ನಾಮನಿರ್ದೇಶಿತ ನಿರ್ದೇಶಕರಿದ್ದಾರೆ. ಜಾರಕಿಹೊಳಿ ಪರವಾಗಿದ್ದ ಮೂರು ಜನರನ್ನು ಲಕ್ಷ್ಮೀ ಹೆಬ್ಟಾಳ್ಕರ್ ಕಡೆಯವರು ಅಜ್ಞಾತ ಸ್ಥಳದಲ್ಲಿ ಇರಿಸಿ, ಬ್ಯಾಂಕ್ ಹಿಡಿತ ಸಾಧಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Related Articles
ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್ ಬಣ ಜಯಗಳಿಸಿದರೆ ಜಾರಕಿಹೊಳಿ ಸಹೋದರರು ಸೋಮವಾರದ ಹೊತ್ತಿಗೆ ತಮ್ಮೊಂದಿಗಿರುವ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಅವರಿಗೆ ದೆಹಲಿಯಿಂದ ದೂರವಾಣಿ ಮೂಲಕ ಕರೆ ಮಾಡಿ, ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ. ನಿಮ್ಮ ಸ್ವ ಪ್ರತಿಷ್ಠೆಗೆ ಸಮ್ಮಿಶ್ರ ಸರ್ಕಾರ ಬಲಿಕೊಡಬೇಡಿ. ಕೂಡಲೇ ಸಮಸ್ಯೆ ಬಗೆ ಹರಿಸಿಕೊಳ್ಳುವತ್ತ ಗಮನ ಹರಿಸಿ. ಸರ್ಕಾರಕ್ಕೆ ಸಮಸ್ಯೆಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ರಮೇಶ ಜಾರಕಿಹೊಳಿ ಬಾಂಬ್ಬೆಳಗಾವಿ: ಕಾಂಗ್ರೆಸ್ ವರಿಷ್ಠರು ಕೂಡಲೇ ಮಧ್ಯ ಪ್ರವೇಶಿಸಿ ಹೆಬ್ಟಾಳ್ಕರ್ ಅವರನ್ನು ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ನಾವು ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗುರುವಾರ ಎಚ್ಚರಿಕೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಸತೀಶ ಜಾರಕಿಹೊಳಿಗೆ ಅವಮಾನವಾದರೆ ಅವರು ತೆಗೆದುಕೊಳ್ಳುವ ಯಾವುದೇ ಕಠಿಣ ನಿರ್ಧಾರಕ್ಕೆ ನಾನು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಹಾಕಿದರು. ಬ್ಯಾಂಕಿನ ಚುನಾವಣೆ ವಿಚಾರದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತಹ ಮೂರ್ಖರು ನಾವಲ್ಲ. ಆದರೆ ಹೆಬ್ಟಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿಡಲು ಪಕ್ಷದ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕು. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಒಂಬತ್ತು ಜನ ನಿರ್ದೇಶಕರು ನಮ್ಮ ಜೊತೆ ಇದ್ದರು. ಆದರೆ ಹೆಬ್ಟಾಳ್ಕರ್ ಇದರಲ್ಲಿ ಪ್ರವೇಶ ಮಾಡಿ ಮೂವರನ್ನು ಕುದುರೆ ವ್ಯಾಪಾರ ಮಾಡಿ ಖರೀದಿಸಿದ್ದಾರೆ. ಇದರಲ್ಲಿ ಕೆಟ್ಟ ರಾಜಕಾರಣ ಮಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಅಘಾತ ತಂದಿದೆ:
ನಮಗೆ 90 ಕೋಟಿ ಕೊಡಲಾಗಿದೆ ಎಂದು ಶಾಸಕಿ ಹೆಬ್ಟಾಳ್ಕರ್ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರಿಂದ ಅಚ್ಚರಿ ಹಾಗೂ ಆಘಾತ ಉಂಟಾಗಿದೆ. ಶಾಸಕರು ಈ ರೀತಿ ಮಾತನಾಡುವುದು ಸರಿಯಲ್ಲ. ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಊಹೆ ಮಾಡಿರಲಿಲ್ಲ. ಅವರು ಜಾರಕಿಹೊಳಿ ಕುಟುಂಬದವರಿಗೆ ಅಷ್ಟೊಂದು ಸಾಲ ಕೊಡುತ್ತಾರೆಯೇ? ಆಕೆ ನಮ್ಮ ಕುಟುಂಬಕ್ಕೆ ಹಣ ನೀಡುವ ಅವಶ್ಯಕತೆಯೂ ಇಲ್ಲ ಎಂದು ಕಿಡಿ ಕಾರಿದರು. ಜಾರಕಿಹೊಳಿ ಕುಟುಂಬದ್ದೇ ಆಶ್ರಯ: ಹೆಬ್ಟಾಳ್ಕರ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದವರು ಸತೀಶ ಜಾರಕಿಹೊಳಿ. ಆಗ ನಾನು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದು ಅವರಿಗೆ ನೆನಪಿರಲಿಕ್ಕಿಲ್ಲ. ಅವರು ಜಾರಕಿಹೊಳಿ ಕುಟುಂಬದ ಅಶ್ರಯದಿಂದಲೇ ರಾಜಕೀಯವಾಗಿ ಬೆಳೆದಿದ್ದಾರೆ. ಇದೀಗ ನಮ್ಮ ವಿರುದ್ಧವೇ ಜಾತಿ ಮುಂದಿಟ್ಟುಕೊಂಡು ಟೀಕೆ ಮಾಡುತ್ತಿರುವದು ಸರಿಯಲ್ಲ. ಹೈಕಮಾಂಡ್ ಇದಕ್ಕೆ ಕಡಿವಾಣ ಹಾಕದೇ ಇದ್ದರೆ ನಾವು ಉಗ್ರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು. ಸಹಾಯ ಮಾಡಿದ್ದೇನೆ: 2007-08 ರಲ್ಲಿ ಯಾರು ಗಾಡ್‌ಫಾದರ್ ಇದ್ದರೋ ಗೊತ್ತಿಲ್ಲ. ಅವರ ತಂದೆಗೆ ಆರೋಗ್ಯ ಸರಿ ಇಲ್ಲದಿದ್ದಾಗ ಹಣಕಾಸು ಸಹಾಯ ಮಾಡಿದ್ದೇನೆ. ಅವರ ಸಹೋದರ ಹಾಗೂ ಮಗನಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆದರೆ ನಮ್ಮ ಮೇಲೆ ಈಗ ದ್ವೇಷದ ರಾಜಕಾರಣ ಮಾಡುತ್ತಿರುವುದು ಒಳ್ಳೆಯದಲ್ಲ. ಅವರಿಗೆ ಕಾನೂನಿನ ಅರಿವಿಲ್ಲ. ಉಪಕಾರ ಮಾಡಿದ್ದನ್ನು ಯಾರ ಮುಂದೆಯೂ ಹೇಳಬಾರದು. ಆದರೆ ಅನಿವಾರ್ಯವಾಗಿ ನಾನು ಸಹಾಯ ಮಾಡಿದ್ದನ್ನು ಹೇಳಬೇಕಾಗಿದೆ ಎಂದರು. ಕೀಳು ರಾಜಕಾರಣ: ಲಕ್ಷ್ಮೀ ಹೆಬ್ಟಾಳ್ಕರ್ ಹಠಕ್ಕೆ ಬಿದ್ದು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಸುತ್ತಿದ್ದಾರೆ. ಈ ವಿಚಾರವನ್ನು ಇಷ್ಟೊಂದು ದೊಡ್ಡದಾಗಿ ಮಾಡುತ್ತಾಳೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಇಂತಹ ದರ್ಪದ ರಾಜಕಾರಣವನ್ನು ಜಿಲ್ಲೆಯಲ್ಲಿ ಇದುವರೆಗೆ ಯಾರೂ ಮಾಡಿರಲಿಲ್ಲ. ಆದರೆ ಹೆಬ್ಟಾಳ್ಕರ್ ಅವರು ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ದೆಹಲಿ ತೋರಿಸಿದ್ದು ನಾನು. ನನ್ನನ್ನು ಸಚಿವರನ್ನಾಗಿ ಯಾರು ಮಾಡಿದ್ದಾರೆ ಎಂಬುದು ಖಾನಾಪುರ ಶಾಸಕರಿಗೆ ಗೊತ್ತಿದೆ ಕೇಳಿ. ಡಿ.ಕೆ. ಶಿವಕುಮಾರ ನನ್ನ ಸ್ನೇಹಿತ. ಅವರು ಮಂತ್ರಿಯಾಗಲು ನಾನೇ ಸಹಾಯ ಮಾಡಿದ್ದೆ ಎಂದು ರಮೇಶ ಜಾರಕಿಹೊಳಿ ಹೇಳಿದರು. ರಾಜಕೀಯದಲ್ಲಿ ಏಳು-ಬೀಳು ಸಹಜ. ಇವೆಲ್ಲವನ್ನೂ ಮೆಟ್ಟಿ ನಿಂತಾಗಲೇ ನಾಯಕನಾಗಲು ಸಾಧ್ಯ.
– ಲಕ್ಷ್ಮೀ ಹೆಬ್ಟಾಳ್ಕರ್, ಶಾಸಕಿ