Advertisement
ಪೆರಾಜೆ ರಾಜ್ಯ ಹೆದ್ದಾರಿಯಿಂದ ಪೆರಾಜೆ – ಅಮಚೂರು, ಚಾಂಬಾಡು – ತೊಡಿಕಾನ ಸಂಪರ್ಕ ರಸ್ತೆ ಆರಂಭಗೊಳ್ಳುತ್ತದೆ. ಪೆರಾಜೆ ರಾಷ್ಟ್ರೀಯ ಹೆದ್ದಾರಿಂದ ತೊಡಿಕಾನ ಕೂಡು ರಸ್ತೆಗೆ 7 ಕಿ.ಮೀ. ದೂರ ಇದೆ. ಪೆರಾಜೆಯಿಂದ 5 ಕಿ.ಮೀ. ರಸ್ತೆ ಕೊಡಗು ಜಿಲ್ಲಾಡಳಿತಕ್ಕೆ ಒಳಪಡುತ್ತದೆ. ಉಳಿದ 2 ಕಿ.ಮೀ. ರಸ್ತೆ ದ.ಕ. ಜಿಲ್ಲೆಯ ಆಡಳಿತದ ವ್ಯಾಪ್ತಿಗೆ ಒಳಪಡುತ್ತದೆ. ಇದು ಅಲ್ಲಲ್ಲಿ ಕಿರಿದಾಗಿದೆ. ರಸ್ತೆಯ ಮಧ್ಯೆ ಅನೇಕ ತಿರುವುಗಳಿವೆ. ಹಲವು ಕಡೆಗಳಲ್ಲಿ ಡಾಮರು ಕಿತ್ತು ಹೋಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಇಲ್ಲಿನ ರಸ್ತೆಯಲ್ಲಿ ಕೆಂಪು ಕಲ್ಲು ಸಾಗಾಟದ ವಾಹನ ಸಂಚರಿಸುತ್ತಿರುವುದರಿಂದ ರಸ್ತೆಯ ಬಾಳಿಕೆ ಇನ್ನಷ್ಟು ಕಡಿಮೆಯಾಗಿದೆ. ಕಲ್ಲುಕೋರೆ ಮಾಲಕರು ಈ ರಸ್ತೆಯ ಒಂದಷ್ಟು ಭಾಗವನ್ನು ಅಭಿವೃದ್ಧಿ ಮಾಡಿಕೊಡುತ್ತೇವೆ ಎಂದು ಹೇಳಿ ಜಲ್ಲಿ ಕಲ್ಲುಗಳನ್ನು ರಸ್ತೆಗೆ ಹಾಕಿದ್ದಾರೆ. ಈ ಎಲ್ಲ ಸಮಸ್ಯೆಯನ್ನು ಅರಿತುಕೊಂಡಿರುವ ಜನರು ರಸ್ತೆಯನ್ನು ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದ್ದಾರೆ. ತೊಡಿಕಾನ ಅಮಚೂರು ಸಮೀಪದ ಹೊಳೆಗೆ 35 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯ ಬದಿಯ ಕೆಲವು ಭಾಗಗಳು ಕುಸಿತಗೊಂಡಿದ್ದು, ಅಪಾಯ ಎದುರಾಗಿದೆ. ಕಾವೇರಿ ರಸ್ತೆ ಅಭಿವೃದ್ಧಿಗೊಳ್ಳಲಿ
ಇತಿಹಾಸ ಪ್ರಸಿದ್ಧ ಪೆರಾಜೆ – ತೊಡಿಕಾನ – ಪಟ್ಟಿ ರಸ್ತೆ (ಕಾವೇರಿ ರಸ್ತೆ) ಅಭಿವೃದ್ಧಿಗೊಳ್ಳಬೇಕೆಂದು ಹಲವು ವರ್ಷಗಳಿಂದ ಪೆರಾಜೆ ಭಾಗದ ಜನರು ಒತ್ತಾಯಿಸುತ್ತಿದ್ದಾರೆ. ಪೆರಾಜೆ ಶಾಸ್ತವು ದೇವಾಲಯ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಕೊಡಗಿನ ತಲಕಾವೇರಿ, ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಪುರಾತನ ಕಾಲದಿಂದಲೂ ಧಾರ್ಮಿಕ ಐತಿಹಾಸಿಕ ನೇರ ಸಂಬಂಧಗಳಿವೆ. ಪೆರಾಜೆ – ತೊಡಿಕಾನ – ಪಟ್ಟಿ – ಭಾಗಮಂಡಲ ರಸ್ತೆ ಮೂಲಕ ಈ ಭಾಗದ ಜನರು ಕೊಡಗಿನ ಭಾಗಮಂಡಲಕ್ಕೆ ಹಾಗೂ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಪೆರಾಜೆ ಶಾಸ್ತವು ದೇವಾಲಯದ ಪಕ್ಕ ಈಗಲೂ ಕಾವೇರಿ ಗದ್ದೆ ಇದ್ದು, ಇದರಲ್ಲಿ ಬೆಳೆದ ಕದಿರನ್ನು ತೆಗೆದು ಚೌತಿಯ ಸಂದರ್ಭ ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿಗೆ ಈ ರಸ್ತೆಯ ಮೂಲಕ ಸಾಗಿ ಕಟ್ಟುತ್ತಿದ್ದರು. ಬ್ರಿಟಿಷ್ ಸರಕಾರದ ದಾಖಲೆಯಲ್ಲಿ ಇದು “ಕಾವೇರಿ ರಸ್ತೆ’ ಎಂದೇ ನಮೂದಿಸಲಾಗಿದೆ. ಅಲ್ಲದೆ ಬ್ರಿಟಿಷ್ ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳ ಪಟ್ಟಿ ಮಾಡುತ್ತಿದ್ದ ಜಾಗವೇ “ಪಟ್ಟಿ’ ಎಂಬ ಹೆಸರು ಪಡೆದಿದೆ ಎಂದು ಹಿರಿಯರು ಹೇಳುತ್ತಾರೆ.
Related Articles
Advertisement
ಅಭಿವೃದ್ಧಿಯ ಪ್ರಯತ್ನ ಸಾಗುತ್ತಿದೆಪೆರಾಜೆ – ಅಮಚೂರು – ಚಾಂಬಾಡು ರಸ್ತೆ ಪೆರಾಜೆಯಿಂದ 5 ಕಿ.ಮೀ. ಕೊಡಗು ಜಿಲ್ಲಾಡಳಿತಕ್ಕೆ ಒಳಪಟ್ಟಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಲದ ವಿಪರೀತ ಮಳೆಯಿಂದ ಕೆಲವೆಡೆ ಹದಗೆಟ್ಟಿದೆ. ಇದನ್ನು ಮಳೆ ಹಾನಿ ಅನುದಾನದಲ್ಲಿ ದುರಸ್ತಿಪಡಿಸಲಾಗುತ್ತದೆ. ಪೆರಾಜೆ ದೇವಾಲಯ ಕೊಡಗಿನ ತಲಕಾವೇರಿ ಭಾಗಮಂಡಲದ ಭಗಂಡೇಶ್ವರ ದೇವಾಲಯೊಂದಿಗೆ ಧಾರ್ಮಿಕ ಐತಿಹಾಸಿಕ ಸಂಬಂಧ ಹೊಂದಿದ್ದು, ಇದನ್ನು ಸಂಪರ್ಕಿಸಿ ಪೆರಾಜೆ-ತೊಡಿಕಾನ-ಪಟ್ಟಿ ರಸ್ತೆ ಅಭಿವೃದ್ಧಿಯ ಬಗ್ಗೆ ದೊಡ್ಡ ಪ್ರಯತ್ನ ನಡೆಯುತ್ತಿದೆ.
- ನಾಗೇಶ್ ಕುಂದಲ್ಪಾಡಿ, ತಾ.ಪಂ. ಸದಸ್ಯ, ಮಡಿಕೇರಿ ದುರಸ್ತಿ ಅಗತ್ಯವಾಗಿ ಆಗಬೇಕಿದೆ
ಪೆರಾಜೆ – ಅಮಚೂರು – ತೊಡಿಕಾನ ರಸ್ತೆ ಅಲ್ಲಲ್ಲಿ ಹೊಂಡ – ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವುದಂತೂ ತ್ರಾಸದಾಯಕ. ಈ ರಸ್ತೆಯನ್ನು ದುರಸ್ತಿ ಮಾಡುವ ಅಗತ್ಯ ಇದೆ.
- ಗೋವರ್ಧನ ಬೊಳ್ಳೂರು, ಸ್ಥಳೀಯ ನಿವಾಸಿ – ತೇಜೇಶ್ವರ್ ಕುಂದಲ್ಪಾಡಿ