ಯಲಹಂಕ: ಸಮೀಪದ ಕಾಕೋಳು ಗ್ರಾಮದ ಸುತ್ತಮುತ್ತ ಚಿರತೆಯೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟ ಸಮೀಪದ ಬ್ಯಾತ, ಸೊಣ್ಣೇನಹಳ್ಳಿ ಹೆಸರಘಟ್ಟ ಸೀಡ್ಸ್ ಫಾರಂ, ಡ್ಯಾನೀಷ್ ಫಾರಂ, ಹೆಸರಘಟ್ಟ ಕೆರೆ ಸುತ್ತಮುತ್ತ ಚಿರತೆ ಸಂಚರಿಸುತ್ತಿದ್ದು, 2 ಮೇಕೆ, ಮೂರು ಹಸುಗಳನ್ನು ಕೊಂದು ತಿಂದಿದೆ.
ಚಿರತೆ ಕಾಣಿಸಿಕೊಂಡ ಬಗ್ಗೆ 20 ದಿನಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಸೊಣ್ಣೇನಹಳ್ಳಿ ಗ್ರಾ.ಪಂಗೆ ದೂರು ನೀಡಿದ್ದರೂ ಚಿರತೆ ಹಿಡಿಯಲು ಕ್ರಮ ಕೈಗೊಂಡಿಲ್ಲ. ಪರಿಣಾಮ ಗ್ರಾಮದ ಕೃಷ್ಣಪ್ಪಮತ್ತು ರತ್ನಮ್ಮ ಎಂಬುವವರ ತಲಾ ಒಂದು ಹಸು ಮತ್ತು ಮದ್ದೂರಮ್ಮ ಎಂಬುವವರ ಮೇಕೆಗಳು ಚಿರತೆಗೆ ಆಹಾರವಾಗಿವೆ.
ಮನುಷ್ಯನನ್ನೇ ತಿನ್ಬೇಕು: “ವಾರದ ಹಿಂದೆ ದನಗಳನ್ನು ಮೇಯಿಸಲು ಹೋದಾಗ ರಾಸುಗಳು ಇದ್ದಕ್ಕಿದ್ದಂತೆ ಬೆದರಿ ಓಡತೊಡಗಿದವು. ಅಂದು ದನಗಳೆಲ್ಲ ಹೆದರಿ ಮಧ್ಯಾಹ್ನ ಮೂರು ಗಂಟೆಗೇ ಮನೆಗೆ ಬಂದವು. ಅಂದೇ ನಮಗೆ ಅನುಮಾನ ಬಂದಿತ್ತು. ಮೂರು ದಿನಗಳ ಹಿಂದೆ ಚಿರತೆ ನಮ್ಮ ಹಸುವಿನ ಮೇಲೆ ದಾಳಿ ಮಾಡಿ, ಅದರ ಕುತ್ತಿಗೆಗೆ ಬಾಯಿ ಹಾಕಿತ್ತು. ಅಷ್ಟರಲ್ಲೇ ಹಸು ತಪ್ಪಿಸಿಕೊಂಡು ಬಂದಿದೆ.
ಅದರ ಕತ್ತಿನಿಂದ ರಕ್ತ ಸುರಿಯುತ್ತಿದ್ದರಿಂದ ಕೂಡಲೆ ಚಿಕಿತ್ಸೆ ಕೊಡಿಸಿದ್ದೇವೆ. ಕಳೆದ ವರ್ಷ ಕಾಣಿಸಿಕೊಂಡಿದ್ದ ಚಿರತೆ ಎರಡು ಹಸುಗಳನ್ನು ತಿಂದಿತ್ತು. ಈ ಬಾರಿ ದೂರು ನೀಡಿದರೂ ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಂಡಿಲ್ಲ. ಚಿರತೆ ಮನುಷ್ಯರನ್ನು ಕೊಂದ ನಂತರವೇ ಅವರು ಕ್ರಮಕ್ಕೆ ಮುಂದಾಗುತ್ತಾರೇನೋ ಕಾದುಬೋಡಬೇಕು,’ ಎಂದು ಗ್ರಾಮದ ನಿವಾಸಿ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“15ದಿನಗಳ ಹಿಂದೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದೇವೆ,’ ಎಂದು ಅರಣ್ಯ ರಕ್ಷಕರಾದ ಚಂದ್ರಪ್ಪತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ರಕ್ಷಕ ಚಿದಾನಂದ್, “ಹೆಸರಘಟ್ಟ ವ್ಯಾಪ್ತಿಯ ಡ್ಯಾನೀಶ್ ಫಾರಂ ಬಳಿ ಚಿರತೆ ಕಾಣಿಸಿಕೊಂಡಿತ್ತು ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಅಲ್ಲದೆ ಮೊಬೈಲ್‌ನಲ್ಲಿ ತೆಗೆದ ಚಿತ್ರವನ್ನೂ ಕಳಿಸಿದ್ದಾರೆ.
ಶುಕ್ರವಾರ ಆಯ್ದ ಸ್ಥಗಳಲ್ಲಿ ಚಿರತೆ ಹಿಡಿಯುವ ಬೋನು ಇರಿಸಲಾಗುವುದು. ಚಿರತೆ ಹಿಡಿಯಲು ಅರಣ್ಯ ಇಲಾಖೆಯ ವನ್ಯ ಜೀವಿ ಸಂರಕ್ಷಣಾ ವಿಭಾಗದ ಅನುಮತಿ ಕೋರಿ ಪತ್ರ ಬರೆದಿದ್ದು, ಒಪ್ಪಿಗೆ ದೊರೆತ ತಕ್ಷಣ ಚಿರತೆ ಹಿಡಿಯುವುದಾಗಿ ಮಾಹಿತಿ ನೀಡಿದ್ದಾರೆ.