Advertisement

ಆ ಚಿತ್ರದಲ್ಲಿ ಅಡಗಿದೆ ಜೀವನದ ನಿಷ್ಠುರ ಸತ್ಯ

12:30 AM Nov 18, 2018 | |

ಚಿತ್ರಕಾರನು ಇಕಾರಸ್‌ನ ದುರಂತ ಅಂತ್ಯವನ್ನು ಈ ರೀತಿ ಕಡೆಗಣಿಸಿರುವುದು ಒಂದೆಡೆ ಅತ್ಯಂತ ಭಯಹುಟ್ಟಿಸುತ್ತದೆ. ಇಕಾರಸ್‌ನಂಥ ವೀರ ಸಾಯುತ್ತಿದ್ದರೂ ಕೂಡ ಯಾರೂ ಕೇರ್‌ ಮಾಡುತ್ತಿಲ್ಲವಲ್ಲ, ಅವನ ಬದುಕಿನ ಅಂತ್ಯದ ಬಗ್ಗೆ ಯಾರಿಗೂ ತಿಳಿಯುತ್ತಲೇ ಇಲ್ಲವಲ್ಲ.. ಎಂಬ ವಿಷಯ ನೋವುಂಟುಮಾಡುತ್ತದೆ. ಫ್ಲೆಮಿಷ್‌ ಭಾಷೆಯಲ್ಲಿ “ಸಾಯುವ ವ್ಯಕ್ತಿಗಾಗಿ ನೇಗಿಲು ಕಾಯುವುದಿಲ್ಲ’ ಎನ್ನುವ ಗಾದೆಯಿದೆ. ಈ ಗಾದೆ ಈ ಚಿತ್ರದಿಂದಲೇ ಹುಟ್ಟಿಕೊಂಡಿರಬಹುದು ಎಂದೂ ಇತಿಹಾಸಕಾರರು ಹೇಳುತ್ತಾರೆ. 

Advertisement

ಇತ್ತೀಚೆಗೆ ನಾನು ಬೆಲ್ಜಿಯಂನ ಅತಿದೊಡ್ಡ ಮ್ಯೂಸಿಯಂ ಎನಿಸಿಕೊಂಡಿರುವ ಲೊನ್‌ ಮ್ಯೂಸಿಯಂ ಆಫ್ ಫೈನ್‌ ಆರ್ಟ್ಸ್ಗೆ ಹೋಗಿದ್ದೆ. ಕಣ್ಮನ ಸೆಳೆಯುವ ನೂರಾರು ಜಗತಸಿದ್ಧ ಪೇಟಿಂಗ್‌ಗಳು ಆ ಕಲಾ ಮ್ಯೂಸಿಯಂನಲ್ಲಿವೆ. ಎಲ್ಲದರಲ್ಲೂ ನನ್ನ ಗಮನ ಸೆಳೆದ, ಅಚ್ಚರಿ ಮೂಡಿಸಿದ ಚಿತ್ರವೆಂದರೆ ಡಚ್‌ ಕಲಾವಿದ “ಪೀಟರ್‌ ಬ್ರೂಗಲ್‌ ದಿ ಎಲ್ಡರ್‌’ 1560ರಲ್ಲಿ ರಚಿಸಿರುವ “ಫಾಲ್‌ ಆಫ್ ಇಕರಸ್‌’ನ ಬೃಹತ್‌ ಪೇಟಿಂಗ್‌. ಮೂಲ ಚಿತ್ರ ಈಗ ಇಲ್ಲ. ಈ ಮ್ಯೂಸಿಯಂನಲ್ಲಿರುವುದು ಅದರ ನಕಲು ಚಿತ್ರ.

ಮೇಲ್ನೋಟಕ್ಕೆ ಅಲ್ಲಿದ್ದ ಬಹುತೇಕ ಚಿತ್ರಗಳಂತೆಯೇ ಇದೂ ಕೂಡ ಗ್ರಾಮೀಣ ಜನರ ಜೀವನವನ್ನು ಸಾರುವ, ಸುಂದರ ಭೂದೃಶ್ಯವಿರುವ ಚಿತ್ರವೆಂದು ಕಾಣಿಸಿತು. ಆದರೆ ಗಮನವಿಟ್ಟು ನೋಡಿದಾಗ ನಿಜಕ್ಕೂ ಮಾನವ ಜೀವನದ ಅತಿ ನಿಷ್ಠುರ ಸತ್ಯವೊಂದನ್ನು ಈ ಚಿತ್ರ ಸಾರುತ್ತಿದೆ ಎನ್ನುವುದು ಅರ್ಥವಾಯಿತು. ಈ ಚಿತ್ರದಲ್ಲೇನಿದೆಯೋ ಗಮನಿಸಿ. ದೂರದಲ್ಲಿ  ಸಮೃದ್ಧಿಯಿಂದ ಲಕಲಕಿಸುತ್ತಿರುವ ನಗರಗಳಿವೆ, ಸಾಗರದಲ್ಲಿ ಹಡಗುಗಳು ಸಂಚರಿಸುತ್ತಿವೆ, ಕುರಿಗಾಹಿ ಮತ್ತು ರೈತ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ, ವ್ಯಕ್ತಿಯೊಬ್ಬ ಮೀನಿಗೆ ಗಾಳ ಹಾಕಿ ಕಾಯುತ್ತಾ ಕುಳಿತಿದ್ದಾನೆ… ಆದರೆ ಇಷ್ಟೇ ಅಲ್ಲ, ಚಿತ್ರದ ಬಲಭಾಗದಲ್ಲಿ ಕೆಳಗಡೆ, ಅಂದರೆ ಹಡಗಿನ ಮುಂದೆ ಏನಾಗುತ್ತಿದೆಯೋ ನೋಡಿ. ಅಲ್ಲೊಂದು ದುರಂತ ಸಂಭವಿಸಿದೆ, ವೀರನೊಬ್ಬನ ದಾರುಣ ಅಂತ್ಯವದು! ಗ್ರೀಕ್‌ ಪುರಾಣದ ಕೆಚ್ಚೆದೆಯ ವೀರರಲ್ಲಿ ಒಬ್ಬನಾದ ಇಕರಸ್‌ ಸಾಗರದಲ್ಲಿ ಮುಳುಗುತ್ತಿದ್ದಾನೆ. ಅವನ ಸಾವಿನ ಪ್ರಜ್ಞೆ ಸುತ್ತಲಿನ ಪರಿಸರಕ್ಕೆ ಇಲ್ಲವೇ ಇಲ್ಲ! ಇಕರಸ್‌ ಖ್ಯಾತ ಕುಶಲಕರ್ಮಿ, ಬಡಗಿ ವೃತ್ತಿಯ ಜನಕನೆಂದು ಖ್ಯಾತಿವೆತ್ತ ಡಿಡಲಸ್‌ನ ಮಗ. ಡಿಡಲಸ್‌ ಮತ್ತು ಇಕರಸ್‌ನನ್ನು ರಾಜನೊಬ್ಬ ಬಂಧಿಸಿಟ್ಟಿರುತ್ತಾನೆ. ಬಂಧನದಿಂದ ತಪ್ಪಿಸಿಕೊಳ್ಳಲು ಅಪ್ಪ ಮಗ ಜೊತೆಯಾಗಿ ಮನುಷ್ಯನು ಹಾರುವಂಥ ರೆಕ್ಕೆಗಳನ್ನು ತಯಾರಿಸುತ್ತಾರೆ. ಪುಕ್ಕಗಳನ್ನು ಮೇಣದಿಂದ ಒಂದಕ್ಕೊಂದು ಅಂಟಿಸಲಾಗಿರುತ್ತದೆ. ರೆಕ್ಕೆಯನ್ನು ತಂದೆ ಮತ್ತು ಮಗ ಕಟ್ಟಿಕೊಂಡು ಹಾರಲು ಸಿದ್ಧರಾ ಗುತ್ತಾರೆ. ಗಗನಕ್ಕೆ ಚಿಮ್ಮುವ ಮುನ್ನ ಡಿಡಲಸ್‌ ತನ್ನ ಮಗನಿಗೆ “ಯಾವುದೇ ಕಾರಣಕ್ಕೂ ಸೂರ್ಯನ ಸನಿಹ ಹೋಗಬೇಡ, ಶಾಖಕ್ಕೆ ಮೇಣವೆಲ್ಲ ಕರಗಿ ಕೆಳಕ್ಕೆ ಬೀಳುವ ಅಪಾಯವಿದೆ’ ಎಂದು ಎಚ್ಚರಿಸುತ್ತಾನೆ. ಆದರೆ ಬಿಸಿರಕ್ತದ ಇಕರಸ್‌ ತಂದೆಯ ಮಾತಿಗೆ ಕಿವಿಗೊಡುವುದಿಲ್ಲ. ಹಾರುವ ಪುಳಕದಲ್ಲಿ ಎತ್ತರೆತ್ತರಕ್ಕೆ ಏರುತ್ತಾ ಹೋಗುತ್ತಾನೆ. ಕೊನೆಗೆ ಅಪ್ಪನ ಮಾತು ನಿಜವಾಗುತ್ತದೆ. ಬಿಸಿಲಿಗೆ ಮೇಣ ಕರಗುತ್ತದೆ. ಇಕರಸ್‌ ಕೆಳಕ್ಕೆ ಬಿದ್ದು ಸಾವನ್ನಪ್ಪುತ್ತಾನೆ ಎನ್ನುವುದು ಒಟ್ಟಾರೆ ಕಥೆ. 

ನನಗೆ ಅಚ್ಚರಿ ಮೂಡಿಸಿದ್ದೆಂದರೆ, ಇಕರಸ್‌ನ ಕಥೆ ಅತ್ಯಂತ ಜನಪ್ರಿಯವಾದರೂ, ಚಿತ್ರಕಾರ “ಫಾಲ್‌ ಆಫ್ ದಿ ಇಕರಸ್‌’ ಪೇಟಿಂಗ್‌ನಲ್ಲಿ ಇಕರಸ್‌ಗಿಂತಲೂ ಅನ್ಯ ಸಂಗತಿಗಳಿಗೇ(ರೈತನಿಗೆ, ಕುರಿಗಾಹಿಗೆ, ಹಡಗುಗಳಿಗೆ, ನಗರಗಳಿಗೇ) ಹೆಚ್ಚು ಮಹತ್ವ ಕೊಟ್ಟಿದ್ದಾನೆ ಎನ್ನುವುದು. ಗಮನವಿಟ್ಟು ನೋಡಿದಾಗ ಮಾತ್ರ ಇಕರಸ್‌ ಮೂಲೆಯಲ್ಲಿ ಮುಳುಗುತ್ತಿರುವುದು ಕಾಣಿಸುತ್ತದೆ, ಗಮನಕೊಡದಿದ್ದರೆ ಅವನು ಕಾಣಿಸುವುದೂ ಇಲ್ಲ. ಉದ್ದೇಶಪೂರ್ವಕವಾಗಿಯೇ ಕಲಾವಿದ ಈ ರೀತಿ ಚಿತ್ರ ರಚಿಸಿದ್ದಾನೆ. 

ಚಿತ್ರಕಾರನು ಇಕರಸ್‌ನ ದುರಂತ ಅಂತ್ಯವನ್ನು ಈ ರೀತಿ ಕಡೆಗಣಿಸಿರುವುದು ಒಂದೆಡೆ ಅತ್ಯಂತ ಭಯಹುಟ್ಟಿಸುತ್ತದೆ. ಅಂಥ ವೀರ ಸಾಯುತ್ತಿದ್ದರೂ ಕೂಡ ಯಾರೂ ಕೇರ್‌ ಮಾಡುತ್ತಿಲ್ಲವಲ್ಲ, ಅವನ ಬದುಕಿನ ಅಂತ್ಯದ ಬಗ್ಗೆ ಯಾರಿಗೂ ತಿಳಿಯುತ್ತಲೇ ಇಲ್ಲವಲ್ಲ.. ಎಂಬ ವಿಷಯ ನೋವುಂಟುಮಾಡುತ್ತದೆ. ಫ್ಲೆಮಿಷ್‌ ಭಾಷೆಯಲ್ಲಿ “ಸಾಯುವ ವ್ಯಕ್ತಿಗಾಗಿ ನೇಗಿಲು ಕಾಯುವುದಿಲ್ಲ’ ಎನ್ನುವ ಗಾದೆಯಿದೆ. ಈ ಗಾದೆ ಈ ಚಿತ್ರದಿಂದಲೇ ಹುಟ್ಟಿಕೊಂಡಿರಬಹುದು ಎಂದೂ ಇತಿಹಾಸಕಾರರು ಹೇಳುತ್ತಾರೆ. ಇದೇನೇ ಇರಲಿ, ಇನ್ನೊಂದು ರೀತಿಯಿಂದ ಈ ಚಿತ್ರದ ಅಂತರಾರ್ಥವನ್ನು ಗಮನಿಸಿದಾಗ ಇಕರಸ್‌ನ ಕುರಿತ ಜಗತ್ತಿನ ಈ ದಿವ್ಯ ನಿರ್ಲಕ್ಷ್ಯವು ನಮ್ಮ ಮನಸ್ಸಿಗೆ ಸಮಾಧಾನ ಕೊಡುವಂತೆಯೂ ಇದೆ! 

Advertisement

ಮನುಷ್ಯ ಜೀವನದ ಅಸಂತೋಷಕ್ಕೆ ಮೂಲ ಕಾರಣ ಯಾವುದು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ, ಬಹುತೇಕ ಸಂದರ್ಭಗಳಲ್ಲಿ “ಸಮಾಜ ನಮ್ಮ ಬಗ್ಗೆ ಏನನ್ನುತ್ತದೋ, ನಮ್ಮ ಗೌರವಕ್ಕೆ ಎಲ್ಲಿ ಕುಂದು ಬರುತ್ತದೋ, ನಾವು ವಿಫ‌ಲವಾದಾಗ ಬೇರೆಯವರು ಏನು ಮಾತನಾಡುತ್ತಾರೋ’ ಎನ್ನುವ ಭಯವೇ “ಅಸಂತೋಷಕ್ಕೆ’ ಮೂಲ ಕಾರಣ ಎನ್ನುವ ಉತ್ತರ ದೊರಕುತ್ತದೆ. ಜನರು ನಮ್ಮ ಬಗ್ಗೆ ಏನು ಭಾವಿಸುತ್ತಾರೋ ಎನ್ನುವ ಸಂಗತಿ ನಮ್ಮ ತಲೆಕೊರೆಯಲಾರಂಭಿಸುತ್ತದೆ. 

ಯಾರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೋ, ಅವರು ನಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೋ ಎನ್ನುವುದನ್ನು ಊಹಿಸಿ ಕೊಂಡು ರಾತ್ರಿ ನಾವು ನಿದ್ದೆಗೆಡುತ್ತೇವೆ. ಅಂದರೆ, ನಮ್ಮ ಸ್ವಾತಂತ್ರ್ಯವನ್ನು ಜನರ “ತೀರ್ಪುಗಳಿಗೆ’ ಸರೆಂಡರ್‌ ಮಾಡಿಸುತ್ತೇವೆ.

ಈ ಕಾರಣಕ್ಕಾಗಿಯೇ ಚಿತ್ರಕಾರ ತನ್ನ ಕುಂಚದ ಮೂಲಕ ಅಮೋಘ ಸಂದೇಶವನ್ನು ನಮಗೆ ಕೊಟ್ಟಿದ್ದಾನೆ. “ನಾವು ನಿಜಕ್ಕೂ ಯಡವಟ್ಟು ಮಾಡಿಕೊಂಡಾಗ, ತಪ್ಪು ಮಾಡಿದಾಗ r ಜನ ನಾವಂದು ಕೊಂಡಷ್ಟು ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನಮ್ಮ ಬಗ್ಗೆ ಕೇರ್‌ ಮಾಡುವುದಿಲ್ಲ’ ಎನ್ನುವ ಸಂದೇಶವದು. ಅತ್ತ ರೈತ ಉಳುಮೆಯಲ್ಲಿ ಮೈಮರೆತಿದ್ದಾನೆ, ಕುರಿಗಾಹಿ ವಾತಾವರಣದ ಬಗ್ಗೆ ಚಿಂತಿಸುತ್ತಿರಬಹುದು, ಇನ್ನೊಬ್ಬ ವ್ಯಕ್ತಿ ತನ್ನ ಗಾಳಕ್ಕೆ ಯಾವ ಮೀನು ಸಿಗಬಹುದೋ ಎಂಬ ಕುತೂಹಲದಲ್ಲಿದ್ದಾನೆ…

ಅಂದರೆ, ನಾವು ಭಾವಿಸಿದ ಪ್ರಮಾಣದಲ್ಲಿ ನಮ್ಮ ವೈಯಕ್ತಿಕ ದುರಂತಗಳ ಬಗ್ಗೆ ಸಮಾಜ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದಾಯಿತು. ಕೆಲವೊಬ್ಬರು ನಮ್ಮತ್ತ ನೋಡಬಹುದು, ನಮ್ಮ ಮೂರ್ಖತನದ ಬಗ್ಗೆ ಬೇಸರಪಟ್ಟುಕೊಳ್ಳಬಹುದು, ಕುಹಕ ವಾಡಬಹುದು. ಆದರೆ ಕೆಲವೇ ಸಮಯದಲ್ಲಿ ಅವರು ತಮ್ಮ ಕಾಯಕದಲ್ಲಿ, ತಮ್ಮ ಜೀವನದಲ್ಲಿ ಬ್ಯುಸಿ ಆಗಿಬಿಡುತ್ತಾರೆ. ನಾವು ಚರ್ಚೆಯ ಕೇಂದ್ರಬಿಂದುವಾಗುವುದು ನಮ್ಮ ತಲೆಯಲ್ಲಿ ಮಾತ್ರ! 

ನಮಗೆ ಏನಾಗುತ್ತಿದೆ ಅಥವಾ ನಾವು ಏನು ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಬಹುತೇಕರು ಕೇರ್‌ ಮಾಡುವುದೇ ಇಲ್ಲ. ಈ ಜಗತ್ತಿನಲ್ಲಿ ನಾವು ಬದುಕಿದ್ದೇವೆ ಎಂಬ ಅರಿವೂ ಇಲ್ಲದ ಕೋಟ್ಯಂತರ ಜನರಿದ್ದಾರೆ. ನಾವು ಬದುಕಿದ್ದೆವು ಎಂದು ಮುಂದೆಯೂ ಅವರಿಗೆ ತಿಳಿಯುವುದಿಲ್ಲ. ಈಗ ನಿಮ್ಮ ಮೇಲೆ ಸಿಟ್ಟಾದವರು ಅಥವಾ ನಿಮ್ಮ ಬಗ್ಗೆ ನಿರಾಶೆಗೊಂಡಿರುವವರು ಕೆಲವೇ ಸಮಯದಲ್ಲಿ ಎಲ್ಲವನ್ನೂ ಮರೆತು ತಮ್ಮ ಜೀವನದಲ್ಲಿ ಮುಂದೆ ಸಾಗಿರುತ್ತಾರೆ. ನಮ್ಮ ನಾಚಿಕೆ‌/ತಪ್ಪುಗಳೂ ಕೂಡ ಕೆಲವೇ ಸಮಯದಲ್ಲಿ ವಿಶ್ವದ ಸಾಮೂಹಿಕ ವಿಸ್ಮತಿಗೆ ಅನುಗುಣವಾಗಿ ಕಳೆದುಹೋಗಿಬಿಡುತ್ತವೆ. ಆ ಅಲೆಗಳಲ್ಲಿ ಮರೆಯಾಗುತ್ತಿರುವವನು ಕೇವಲ ಇಕರಸ್‌ ಅಷ್ಟೇ ಅಲ್ಲ, ಮುಂದೆ ನಾವು, ನಮ್ಮ ಅತಿದೊಡ್ಡ ತಪ್ಪುಗಳು ಮತ್ತು ಮುಜುಗರಗಳಿಗೂ ಇದೇ ಪರಿಸ್ಥಿತಿ. ಅವು ಹೀಗೆಯೇ ಮರೆಯಾಗುತ್ತವೆ.

 (ಅಲೆನ್‌ ಡೆ ಬಾಟನ್‌, ಭಾವನಾತ್ಮಕ ಶಿಕ್ಷಣ ನೀಡುವ “ಸ್ಕೂಲ್‌ ಆಫ್ ಲೈಫ್’ ಎನ್ನುವ ಸಂಸ್ಥೆಯ ಸ್ಥಾಪಕರು. ಭಾರತವೂ ಸೇರಿದಂತೆ ಒಟ್ಟು ಎಂಟು ರಾಷ್ಟ್ರಗಳಲ್ಲಿ ಸ್ಕೂಲ್‌ ಆಫ್ ಲೈಫ್ ಕಾರ್ಯನಿರ್ವಹಿಸುತ್ತಿದೆ. ಅವರ ಎಸ್ಸೇಸ್‌ ಇನ್‌ ಲವ್‌(1993) ಪುಸ್ತಕದ 20 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಹೌ ಪ್ರೋಸ್ಟ್‌ ಕ್ಯಾನ್‌ ಚೇಂಜ್‌ ಯುವರ್‌ ಲೈಫ್(1997), ಸ್ಟೇಟಸ್‌ ಆ್ಯಂಕ್ಸೆ„ಟಿ(2004), ದಿ ಆರ್ಕಿಟೆಕ್ಚರ್‌ ಆಫ್ ಹ್ಯಾಪಿನಸ್‌(2006) ಅವರ ಇತರೆ ಬೆಸ್ಟ್‌ ಸೆಲ್ಲರ್‌ಗಳು. ಯೂಟ್ಯೂಬ್‌ನಲ್ಲಿ ಅಲೆನ್‌ ಡೆ ಬಾಟನ್‌ ಆರಂಭಿಸಿರುವ ಸ್ಕೂಲ್‌ ಆಫ್ ಲೈಫ್ ವಿಡಿಯೋ ಚಾನೆಲ್‌ಗೆ 40 ಲಕ್ಷ ಚಂದಾದಾರರಿದ್ದಾರೆ.) 

ಅಲೆನ್‌ ಡೆ ಬಾಟನ್‌
ಬ್ರಿಟಿಷ್‌ ತತ್ವಜ್ಞಾನಿ ಮತ್ತು ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next