Advertisement

ಚಿಂತಕರ ಹತ್ಯೆ ನಡುವಿನ ಸಾಮ್ಯತೆಯೇ ಚಿಂತೆ

11:30 AM Jan 05, 2018 | |

ಬೆಂಗಳೂರು: ನಾಲ್ಕು ತಿಂಗಳು ಕಳೆದರೂ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ, ಚಿಂತಕ ಎಂ.ಎಂ.ಕಲಬುರ್ಗಿ, ನರೇಂದ್ರ ದಾಬೋಲ್ಕರ್‌, ಗೋವಿಂದ ಪನ್ಸಾರೆ ಹತ್ಯೆಗಳ ನಡುವೆ ಸಾಮ್ಯತೆಯಿದೆಯೇ ಎಂಬ ಬಗ್ಗೆ ಖಚಿತ ನಿರ್ಧಾರಕ್ಕೆ ಬರಲೂ ವಿಶೇಷ ತನಿಖೆ ತಂಡಕ್ಕೆ (ಎಸ್‌ಐಟಿ) ಸಾಧ್ಯವಾಗುತ್ತಿಲ್ಲ. 

Advertisement

ಗೌರಿ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಹಲವು ಆಯಾಮಗಳಲ್ಲಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪೋನ್‌ ಕರೆಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ. ಆದರೆ ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಬೋಲ್ಕರ್‌, ಗೋವಿಂದ ಪನ್ಸಾರೆ, ಚಿಂತಕ ಎಂ.ಎಂ.ಕಲಬುರಗಿ ಹತ್ಯೆ ಹಾಗೂ ಗೌರಿ ಹತ್ಯೆಗೂ ಸಾಮ್ಯತೆಯಿದೆ ಎಂಬುದನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದಾರೆ.

ಆದರೆ, ಅಹಮದಾಬ್‌ ಹಾಗೂ ಮುಂಬೈನ ಎಫ್ಎಸ್‌ಎಲ್‌ ವರದಿಗಳು ಕೈ ಸೇರದ ಕಾರಣ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ, ತನಿಖೆಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಗೌರಿಲಂಕೇಶ್‌ ಹಾಗೂ ಕಲಬುರ್ಗಿ ಹತ್ಯೆ ಸಂಬಂಧ ಬೆಂಗಳೂರಿನ ಎಫ್ಎಸ್‌ಎಲ್‌ ವರದಿ ನೀಡಿದ್ದು,ಪರಿಶೀಲನೆ  ನಡೆಸಲಾಗಿದೆ.ಗೌರಿ ಹತ್ಯೆಗೆ 7.65 ಎಂಎಂ ನಾಡಪಿಸ್ತೂಲ್‌ ಬಳಕೆಯಾಗಿದೆ ಎಂದು ಖಚಿತಪಟ್ಟಿದೆ.

ಆದರೆ, ಗೌರಿ ಹತ್ಯೆ ಮಾದರಿಯಲ್ಲಿಯೇ ನಡೆದಿದ್ದ ನರೇಂದ್ರ ದಾಬೋಲ್ಕರ್‌ ಹಾಗೂ ಗೋವಿಂದ ಪನ್ಸಾರೆ  ಹತ್ಯೆಗೂ ದುಷ್ಕರ್ಮಿಗಳು ಯಾವ ಪಿಸ್ತೂಲ್‌ ಹಾಗೂ ಗುಂಡುಗಳನ್ನು ಬಳಸಿದ್ದರು ಎಂಬುದರ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಹೀಗಾಗಿ ಮುಂಬೈ ಹಾಗೂ ಅಹಮದಾಬಾದ್‌ನ ಎಫ್ಎಸ್‌ಎಲ್‌ ವರದಿಯನ್ನು ಪರಿಶೀಲಿಸಬೇಕಿದೆ. ಆದರೆ, ವರದಿ ಇನ್ನೂ ಕೈ ಸೇರಿಲ್ಲ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಗೌರಿಲಂಕೇಶ್‌ ತನಿಖೆ ಬಹುತೇಕ ಅಂತಿಮ ಘಟ್ಟ ತಲುಪಿದೆ. ಇತರೆ ಮೂರು ಹತ್ಯೆಗಳ ಕುರಿತ ಎಫ್ಎಸ್‌ಎಲ್‌ ವರದಿ ಸಾಮ್ಯತೆ ಪರಿಶೀಲನೆ ಸೇರಿದಂತೆ ಕೆಲ ತಾಂತ್ರಿಕ ಅಂಶಗಳ ಬಗ್ಗೆ ಸ್ಪಷ್ಟತೆ ದೊರೆಯಬೇಕಿದೆ. ಹಲವು ಆಯಾಮಗಳಲ್ಲಿ ದುಷ್ಕರ್ಮಿಗಳ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. 

Advertisement

ಎರಡೇ ಸೆಕೆಂಡ್‌ನ‌ಲ್ಲಿ ಗುಂಡು ಹಾರಿಸಿದ್ದ ದುಷ್ಕರ್ಮಿ!: ಗೌರಿಲಂಕೇಶ್‌ ಹತ್ಯೆಗೈದಿದ್ದಾರೆ ಎನ್ನಲಾದ ಇಬ್ಬರು ದುಷ್ಕರ್ಮಿಗಳು ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕೇವಲ ಐದು ಸೆಕೆಂಡ್‌ಗಳ ದೃಶ್ಯಗಳಲ್ಲಿ ದುಷ್ಕರ್ಮಿ ಎರಡು ಸೆಕೆಂಡ್‌ನ‌ಲ್ಲಿ ಗೌರಿಗೆ ನಾಲ್ಕು ಗುಂಡುಗಳನ್ನು ಹಾರಿಸುತ್ತಾನೆ. ಇನ್ನೆರೆಡು ಸೆಕೆಂಡ್‌ಗಳಲ್ಲಿ ಎಸ್ಕೇಪ್‌ ಆಗುತ್ತಾನೆ. ಅಲ್ಲದೆ ಸಿಸಿಟಿವಿ ಪೂಟೇಜ್‌ನಲ್ಲಿ ಸೆರೆಯಾಗಿರುವ ಬೈಕ್‌ಗೆ ನಂಬರ್‌ ಪ್ಲೇಟ್‌ ಇರಲಿಲ್ಲ.

ಅದೇ ಮಾದರಿಯ ಬೈಕ್‌ಗಳು ರಾಜ್ಯದಲ್ಲಿ 13 ಸಾವಿರ ಇವೆ. ಈ ಪೈಕಿ 500 ಬೈಕ್‌ಗಳನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನು ಗೌರಿ ಹತ್ಯೆ ತನಿಖೆ ಭಾಗವಾಗಿ ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಸೆಪ್ಟೆಂಬರ್‌ 1ರಿಂದ 5ರವರೆಗಿನ 70ದಶಲಕ್ಷಗಳಷ್ಟು ಫೋನ್‌ ಕರೆಗಳು ವಿನಿಮಯವಾಗಿವೆ. ತನಿಖೆಯ ಸಲುವಾಗಿ 20 ದಶಲಕ್ಷ ಕರೆಗಳನ್ನು ಪರಿಶೀಲಿಸಲಾಗಿದೆ. ಆದರೆ, ದುಷ್ಕರ್ಮಿಗಳ ಖಚಿತತೆ ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next