Advertisement

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

03:48 PM Sep 05, 2024 | Team Udayavani |

ಹುಬ್ಬಳ್ಳಿ: ನಾಲ್ಕು ದಶಕಗಳಿಂದ ಹೋರಾಟ ಮಾಡಿದರೂ ಹನಿ ನೀರು ಸಿಗದೆ ರಾಜಕೀಯ ಗಾಳಕ್ಕೆ ಸಿಲುಕಿ ಒದ್ದಾಡುತ್ತಿರುವ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಯ ಗೊಡವೆಯೇ ಬೇಡವೆಂದು, ಪರ್ಯಾಯವಾಗಿ ಮಲಪ್ರಭಾ ಬಚಾವೋ ಆಂದೋಲನಕ್ಕೆ ಗಂಭೀರ ಯತ್ನಗಳು ನಡೆದಿವೆ. ಎಲ್ಲವೂ ಅಂದುಕೊಂಡಂತಾದರೆ ಅಕ್ಟೋಬರ್‌ 2 ಗಾಂಧಿ ಜಯಂತಿ ದಿನದಂದು ಆಂದೋಲನ ಘೋಷಣೆ ಸಾಧ್ಯತೆ ಇದೆ.

Advertisement

ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಲಪ್ರಭಾ ಬಚಾವೋ ಆಂದೋಲನ ಮೊಳಗಿಸಲು ರೈತರು ನಿರ್ಧರಿಸಿದ್ದಾರೆ.

ಕಳಸಾ-ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಗೆ ಹೋರಾಟ ಮಾಡಿದ್ದು ರೈತರೇ ವಿನಃ ಅದರ ಫಲಾನಭವಿಗಳಲ್ಲ. ಇದರ ಬದಲು ಮಲಪ್ರಭಾ ನೀರು ನೀರಾವರಿಗೆ ಹೆಚ್ಚು ಬಳಕೆಗೆ ಹೋರಾಟ ಮಾಡೋಣ ಎನ್ನುವುದು ಹಲವು ರೈತರ ಅನಿಸಿಕೆಯಾಗಿದೆ.

ರಾಜಕೀಯ ಗಾಳಕ್ಕೆ ಸಿಲುಕಿದ ಮಹದಾಯಿ: ಮಹದಾಯಿ ಕುರಿತಾಗಿ 1976ರಿಂದಲೇ ಧ್ವನಿ ಮೊಳಗಿದ್ದರೆ, ಕಳಸಾ-ಬಂಡೂರಿ ನಾಲಾ ಯೋಜನೆ 2000 ಇಸ್ವಿಯಿಂದ ಇಂದು-ನಾಳೆ ಜಾರಿ ಎನ್ನುತ್ತಲೇ ಸಾಗಿದೆ. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಗೋವಾದ ನಿಲುವುಗಳೇ ಜಾರಿ-ಯಶಸ್ವಿಯಾಗುತ್ತಿವೆ. ಇಬ್ಬರು ಸಂಸದರು ಮೇಲುಗೈ ಸಾಧಿಸುತ್ತಿದ್ದರೆ, 28 ಸಂಸದರಿರುವ ರಾಜ್ಯ ಅನ್ಯಾಯ ಅನುಭವಿಸುತ್ತಿದೆ ಎಂಬ ಅಸಮಾಧಾನ, ಆಕ್ರೋಶ ರೈತರದ್ದಾಗಿದೆ.

ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿದ್ದು, ಇದರಲ್ಲಿ 8 ಟಿಎಂಸಿ ಅಡಿ ವಿದ್ಯುತ್‌ ಉತ್ಪಾದನೆಯದ್ದಾಗಿದೆ. ಉಳಿದ 5.42 ಟಿಎಂಸಿ ಅಡಿಯಷ್ಟು ನೀರು ಎಂದಿದ್ದರೂ, ವಾಸ್ತವವಾಗಿ ಬಳಕೆಗೆ ಸಿಗುವುದು ಕೇವಲ 3-4 ಟಿಎಂಸಿ ಅಡಿಯಷ್ಟು ಮಾತ್ರ. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ವಿವಿಧ ಕಡೆಗೆ ಕುಡಿಯುವ ನೀರಿನ ಉದ್ದೇಶದ ಹೆಸರಲ್ಲಿಯೇ 2000 ಇಸ್ವಿಯಲ್ಲಿ ಆರಂಭಗೊಂಡ ಕಳಸಾ-ಬಂಡೂರಿ ನಾಲಾ ಯೋಜನೆ ತ್ರಿಶಂಕು ಸ್ಥಿತಿಗೆ ತಲುಪಿದೆ. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ರೈತರು ಧರಣಿ, ಪಾದಯಾತ್ರೆ, ಉಪವಾಸ, ರಸ್ತೆ -ರೈಲು ತಡೆ ಹೀಗೆ ವಿವಿಧ ಸ್ವರೂಪದ ಹೋರಾಟ ಮೂಲಕ ಲಾಠಿ-ಗುಂಡಿನೇಟು ತಿಂದಿದ್ದಾರೆ. ಜೈಲು ಸೇರಿದ್ದಾರೆ, ಕೇಸ್‌ಗಳಿಗಾಗಿ ಕೋರ್ಟ್‌ಗಳಿಗೆ ಅಲಿಯುತ್ತಿದ್ದಾರೆ, ಇಷ್ಟಾದರೂ ಹನಿ ನೀರು ಮಾತ್ರ ಬಂದಿಲ್ಲ.

Advertisement

ಕೃಷಿಗೆ ವರವಾದ ಮಲಪ್ರಭಾ ನದಿ ಹಾಗೂ ನೀರಾವರಿ ಆದ್ಯತೆಯೊಂದಿಗೆ ನಿರ್ಮಾಣಗೊಂಡ ಮಲಪ್ರಭಾ ಜಲಾಶಯ ನೀರು ಸಂರಕ್ಷಣೆ, ಕೃಷಿ ಬಳಕೆಗೆ ಒತ್ತು ನೀಡುವ ಆಂದೋಲನಕ್ಕೆ ಮುಂದಾಗೋಣ ಎಂಬುದು ರೈತರು ನಿರ್ಧಾರವಾಗಿದೆ

ರೂಪ ಪಡೆಯುತ್ತಿದೆ ಆಂದೋಲನ: ಮಲಪ್ರಭಾ ಜಲಾಶಯದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲು, ಬಳಸಲು ನಮ್ಮ ವಿರೋಧವಿಲ್ಲ. ಆದರೆ ಕುಡಿಯುವ ನೀರಿನ ನೆಪದೊಂದಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಸಂಗ್ರಹ ಹಾಗೂ ನೀರಾವರಿಗೆ ಇಲ್ಲವಾಗಿಸಿ ಉದ್ಯಮಗಳಿಗೆ ನೀರು ನೀಡುವುದಕ್ಕೆ ನಮ್ಮ ವಿರೋಧವಿದೆ. ಮಲಪ್ರಭಾ ಬಚಾವೋ ಆಂದೋಲನ ಈ ವಿಚಾರವನ್ನೇ ಪ್ರಮುಖವಾಗಿಟ್ಟುಕೊಂಡು ಹೋರಾಟಕ್ಕೆ ಮುಂದಾಗುವ ಎಂಬ ಅನಿಸಿಕೆ ರೈತರದ್ದಾಗಿದೆ.

ಮಲಪ್ರಭಾ ಜಲಾಶಯ ವ್ಯಾಪ್ತಿಯಲ್ಲಿಯೇ ನಾಲ್ಕು ಜಿಲ್ಲೆಗಳ ರೈತರು ನೀರಾವರಿ ಶುಲ್ಕ ಭರಿಸುತ್ತಿದ್ದಾರೆ. ಆದರೆ ಕುಡಿಯುವ ನೀರು ನೆಪದಲ್ಲಿ 14-15 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಿ ನೀರಾವರಿಗೆ ನೀರಿಲ್ಲವೆನ್ನುವುದನ್ನು ರೈತರು ಒಪ್ಪಲು ಸಾಧ್ಯವಿಲ್ಲ. ಮಲಪ್ರಭಾ ಜಲಾಶಯ ಸಂಪೂರ್ಣ ಕುಡಿಯುವ ನೀರಿನ ಉದ್ದೇಶವೆಂದು ಘೋಷಣೆ ಮಾಡಿ ಅದರ ವ್ಯಾಪ್ತಿಯ ಎಲ್ಲ ಕೃಷಿ ಭೂಮಿಯನ್ನು ನೀರಾವರಿ ರಹಿತ ಪ್ರದೇಶವೆಂದು ಘೋಷಿಸಲಿ, ಇಲ್ಲವೆ ನಮಗೆ ಸಮರ್ಪಕ ನೀರು ಕೊಡಲಿ ಎಂಬ ಹಕ್ಕೊತ್ತಾಯ ರೈತರದ್ದಾಗಿದೆ.

ಗಾಂಧಿ ಜಯಂತಿಗೆ ಘೋಷಣೆ ಸಾಧ್ಯತೆ
ನಾಲ್ಕು ಜಿಲ್ಲೆಗಳಲ್ಲಿ ಆಂದೋಲನ ಮೊಳಗಿಸಲು ನಿರ್ಧಾರ
ನೀರಾವರಿಗೆ ಮೀಸಲಿದ್ದ ನೀರಿನ ಬಳಕೆ ಹಕ್ಕು ಮಂಡನೆ

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.