ಅಳ್ನಾವರ: ತಾಲೂಕಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಗಳು ತುಂಬಿಕೊಂಡಿವೆ. ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಡೌಗಿ ಹಳ್ಳದ ಬ್ಯಾರೇಜ್ ತುಂಬಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ.
ಪಕ್ಕದ ಖಾನಾಪುರ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ನೀರು ಹರಿದು ಬರುತ್ತಿದ್ದು ಬ್ಯಾರೇಜ್ ಭರ್ತಿಯಾಗಿದೆ. ಜನರ ನೀರಿನ ಬವಣೆ ನೀಗಿಸಲು ವರುಣ ಕೃಪೆ ತೋರಿದ್ದಾನೆ.
ಪಟ್ಟಣದಲ್ಲಿ ಸುಮಾರು 18 ಸಾವಿರ ಜನಸಂಖ್ಯೆ ಇದ್ದು, ಡೌಗಿ ಹಳ್ಳದ ನೀರನ್ನು ವರ್ಷದ ಏಳೆಂಟು ತಿಂಗಳು ಉಪಯೋಗಿಸುತ್ತಾರೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬ್ಯಾರೇಜ್ ಬತ್ತುತ್ತಿದ್ದು, ನಂತರದ ದಿನಗಳಲ್ಲಿ ಟ್ಯಾಂಕರ ನೀರೇ ಗತಿಯಾಗುತ್ತಿದೆ. ಕಳೆದ ಮಾರ್ಚ್ ತಿಂಗಳಿನಿಂದ ಟ್ಯಾಂಕರ್ ನೀರನ್ನು ಅಳ್ನಾವರ ಜನರಿಗೆ ಪೂರೈಸುತ್ತಿರುವ ಪಪಂ ಅಧಿಕಾರಿಗಳಿಗೆ ಹಳ್ಳ ತುಂಬಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ ಈ ಬ್ಯಾರೇಜ್ ಕುಡಿಯುವ ನೀರಿನ ಮೂಲವಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಯಂತ್ರಗಳ ಮೂಲಕ ಮೇಲೆತ್ತಿ ಶುದ್ಧೀಕರಿಸಿ ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ.
ಬೆಳೆ ಹಾನಿ: ಮುಂಗಾರು ಮಳೆ ವಿಳಂಬವಾಗಿದ್ದರಿಂದ ಒಣ ಬಿತ್ತನೆ ಮಾಡಿದ್ದ ರೈತರಿಗೆ ಈಗ ಮತ್ತೂಂದು ಸಮಸ್ಯೆ ಎದುರಾಗಿದೆ. ಬಿತ್ತನೆ ಮಾಡಿರುವ ಭತ್ತ ಮತ್ತು ಗೋವಿನಜೋಳದಲ್ಲಿ ಬೆಳೆಗಿಂತ ಹುಲ್ಲು ಅಧಿಕವಾಗಿ ಬೆಳೆದಿದ್ದು, ನಿಯಂತ್ರಣ ಮಾಡುವುದು ಅಸಾಧ್ಯವಾಗಿದೆ. ಕಳೆ ನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ರೈತರ ಅಳಲಾಗಿದೆ. ಪ್ರಾರಂಭದಲ್ಲಿ ಇಲ್ಲದ ಮಳೆ ಈಗ ಸತತವಾಗಿ ಸುರಿಯುತ್ತಿರುವುದರಿಂದ ಬೆಳೆಗಳು ಭೂಮಿಯಿಂದ ಮೇಲೇಳದೆ ಕಮರುತ್ತಿವೆ. ಬೀಜ ಮತ್ತು ಗೊಬ್ಬರಕ್ಕಾಗಿ ಖರ್ಚು ಮಾಡಿರುವ ಹಣವೂ ಮರಳದಂತಾಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಬೆಳೆ ವಿಮೆ: ಕಳೆದ ಮುಂಗಾರು ಹಂಗಾಮಿನ ಬೆಳೆ ವಿಮೆ ಇನ್ನುವರೆಗೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಬ್ಯಾಂಕ್‌ನವರು ಅಥವಾ ಕೃಷಿ ಇಲಾಖೆಯವರಿಂದ ಯಾವುದೇ ಮಾಹಿತಿ ದೊರೆಯುತ್ತಿಲ್ಲ. ಸಾಲ ಮಾಡಿ ವಿಮೆ ಕಂತು ಭರಣ ಮಾಡಿದ್ದು, ಬೆಳೆಯೂ ಇಲ್ಲ ಇನ್ನೊಂದೆಡೆ ಪರಿಹಾರವೂ ಇಲ್ಲವೆಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಟ್ಟಣಕ್ಕೆ ನೀರು ಪೂರೈಸುವ ಡೌಗಿ ಹಳ್ಳದ ಬ್ಯಾರೇಜ್ ಭರ್ತಿಯಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ತಾಪತ್ರಯ ದೂರವಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಹಾಗೂ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು.
•ವೈ.ಜಿ. ಗದ್ದಿಗೌಡರ, ಮುಖ್ಯಾಧಿಕಾರಿ, ಪಪಂ ಅಳ್ನಾವರ
•ಎಸ್. ಗೀತಾ