ಮಧುಗಿರಿ: ದೇಶದಲ್ಲಿ ಅಹಿಂದ ವರ್ಗಕ್ಕೆ ಅನ್ಯಾಯ ಮಾಡಲು ಹೊರಟಿರುವ ಮೋದಿ ನೇತೃತ್ವದ ಬಿಜೆಪಿಗೆ ಅಧಿಕಾರ ಹಿಡಿಯಲು ಅವಕಾಶ ಕೊಡಬೇಡಿ. ಇದು ನಡೆದರೆ ಸರ್ವಾಧಿಕಾರಿಯಾಗಿ ದೇಶವನ್ನೇ ಹಾಳು ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಮೋದಿಯ ಗೋದ್ರ ಘಟನೆಯನ್ನು ವಾಜಪೇಯಿ ಅಧರ್ಮವೆಂದಿದ್ದರು. ಈಗಲೂ ದೇಶದಲ್ಲಿ ಜಾತ್ಯತೀತ ತತ್ವವನ್ನು ಹಾಗೂ ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ದೈವದ ಮೇಲೆ ನಂಬಿಕೆಯಿಟ್ಟಿದ್ದು, ಇನ್ನು ಯಾವುದೋ ಕಾರ್ಯ ಬಾಕಿಯಿದೆ. ಅದಕ್ಕಾಗಿ ಕೆ.ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ ಹಾಗೂ ಸಿದ್ದರಾಮಯ್ಯ ನನ್ನ ಪರವಾಗಿ ಮತಯಾಚನೆ ಮಾಡುತ್ತಿದ್ದು, ಅವರಿಗೆ ನಾನು ಆಭಾರಿಯೆಂದರು. ಮೋದಿ ಇಂದಿಗೂ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಹುಲ್‌ಗಾಂಧಿ ಕರೆ ನೀಡಿದ ರಫೆಲ್ ಹಗರಣದ ಬಗ್ಗೆ ಸಂಸತ್ತಿಗೆ ಬಾರದೆ ಪಲಾಯನ ಮಾಡಿದ್ದಾರೆ. ನಾನು ಸಿದ್ದರಾಮಯ್ಯ ರಾಜ್ಯವನ್ನು ಸುತ್ತಲಿದ್ದು, ಮೋದಿಯ ಓಟಕ್ಕೆ ಲಗಾಮು ಹಾಕಲಿದ್ದೇವೆ. ಮಾಜಿ ಶಾಸಕ ರಾಜಣ್ಣ, ಹಾಲಿ ಶಾಸಕ ವೀರಭದ್ರಯ್ಯನವರ ಮನವಿ ಮೇರೆಗೆ ಈ ಮಧುಗಿರಿ ಬಗ್ಗೆ ಇಟ್ಟ ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜೈಲಿಗೆ ಹೋಗಿಬಂದವರು ಚೌಕೀದಾರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಹಿಂದ ಮತದಾರರು ರಾಜ್ಯದಲ್ಲಿ ಬಿಜೆಪಿಗೆ ನೀಡಬಾರದು. ಈ ಸಂವಿಧಾನ ಉಳಿಯಲು ಎಲ್ಲರೂ ರೈತನ ಮಗ, ಕನ್ನಡಿಗರ ಸ್ವಾಭಿಮಾನದ ಅಭ್ಯರ್ಥಿಯಾದ ದೇವೇಗೌಡರಿಗೆ ನೀಡಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು. ದೇಶದಲ್ಲಿ ಎಲ್ಲರೂ ಚೌಕೀದಾರ್ ಎಂದಾಗಿದ್ದು, ಜೈಲಿಗೆ ಹೋಗಿಬಂದ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಜನಾರ್ದನರೆಡ್ಡಿ ಚೌಕೀದಾರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮನವಿ: ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಜಿಲ್ಲೆಯಲ್ಲಿ ದೇವೇಗೌಡರ ಸ್ಪರ್ಧೆ ಬಡವರ ಹಾಗೂ ರೈತರ ಕಲ್ಯಾಣಕ್ಕಾಗಿ ಜರುಗಲಿದೆ. ಗೌಡರು ಕ್ಷೇತ್ರದ ಸಮಸ್ಯೆಗಳಾದ ಶಾಶ್ವತ ನೀರಾವರಿಗಾಗಿ ಎತ್ತಿನಹೊಳೆ ಶೀಘ್ರ ಜಾರಿ, ಉದ್ಯೋಗವಾಕಾಶ, ಏಕಶಿಲಾ ಬೆಟ್ಟದ ಅಭಿವೃದ್ಧಿ ಹಾಗೂ ಕ್ಷೇತ್ರವನ್ನು ಜಿಲ್ಲಾ ಕೇಂದ್ರವಾಗಿಸಲು ಮುಂದಾಗುವಂತೆ ಮನವಿ ಮಾಡಿದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಶಾಸಕ ವೀರಭದ್ರಯ್ಯನವರ ಬೇಡಿಕೆಯೇ ನನ್ನ ಬೇಡಿಕೆಯಾಗಿದ್ದು, ಶಾಶ್ವತ ನೀರಾವರಿಯನ್ನು ಕ್ಷೇತ್ರಕ್ಕೆ ನೀಡಿ ಆಧುನಿಕ ಭಗೀರಥರಾಗುತ್ತೀರಿ. ಯಾರೂ ಯಾವುದೇ ಅಪಪ್ರಚಾರಕ್ಕೆ
ಕಿವಿಗೊಡದೆ ಮಾಜಿ ಪ್ರಧಾನಿಗಳ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ನಾಚಿಕೆಗೇಡು ವಿಷಯ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ದಲಿತರ ಮೇಲೆ ನಡೆದ ದೌರ್ಜನ್ಯಕ್ಕೆ ಬಿಜೆಪಿಯೇ ಕಾರಣ. ಸಂವಿಧಾನ ಬದಲಿಸುವ ಬಿಜೆಪಿಯ ಕಾರ್ಯಕ್ಕೆ ನಾವು ಬಿಡುವುದಿಲ್ಲ. ಈ ಬಾರಿ ಮೋದಿಯ ಬಾಣ ನಡೆಯುವುದಿಲ್ಲ. ದೇಶಕ್ಕಾಗಿ ಇಂದು ಮೋದಿ ಏನೂ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ಬಸವರಾಜು ಯಾವ ಕೊಡುಗೆ ನೀಡದೆ ಮೋದಿ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದು ನಾಚಿಕೆಗೇಡು. ಅದಕ್ಕಾಗಿ ಮೈತ್ರಿ ಅಭ್ಯರ್ಥಿ ಕಳಂಕ ರಹಿತ ಆಡಳಿತ ನಡೆಸಿದ ಹೆಮ್ಮೆಯ ಕನ್ನಡಿಗ. ಮಾಜಿ ಪ್ರಧಾನಿಗೆ ಎಲ್ಲರೂ ಹೆಚ್ಚಿನ ಬಹುಮತ ನೀಡುವಂತೆ ಮನವಿ ಮಾಡಿದರು. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಸಚಿವ ಬಂಡೆಪ್ಪ ಕಾಂಶೆಂಪೂರ್, ಮಾಜಿ ಶಾಸಕ ತಿಮ್ಮರಾಯಪ್ಪ, ಸುಧಾಕರ್‌ಲಾಲ್ ಮಾತನಾಡಿದರು. ಈ ವೇಳೆ ತಾಲೂಕಿನ ಎಲ್ಲ ಅಹಿಂದ ವರ್ಗದ ಕಾಂಗ್ರೆಸ್-ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಭಾಗವಹಿಸಿದ್ದು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ದುರಂತ ನಾಯಕ
ಸಂಸದ ಮುದ್ದಹನುಮೇಗೌಡ ಮಾತನಾಡಿ, ನಾನು ದುರಂತ ನಾಯಕ. ಈ ಕ್ಷೇತ್ರದ ದಂಡಿನ ಮಾರಮ್ಮ ದೇವರ ಮುಂದೆ ನಿಂತು ಪ್ರಮಾಣ ಮಾಡುತ್ತಿದ್ದು, ಗೌಡರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಲಿದ್ದು, ಕೆಲ ಮಾಧ್ಯಮದಲ್ಲಿ ಬಿತ್ತರವಾದಂತೆ ಎಲ್ಲಿಯೂ ಕೈಯನ್ನು ಕೆಸರು ಮಾಡಿಕೊಂಡಿಲ್ಲ. ಇಂದಿಗೂ ಶುದ್ಧನಾಗಿಯೇ ಇದ್ದೇನೆ ಎಂದು ಪ್ರಮಾಣ ಮಾಡಿದರು.
ವರಿಷ್ಠರು ಹೇಳಿದ ಮಾತಿನಂತೆ ದೇಶಕ್ಕೆ ಇಂದು ಗೌಡರ ಸೇವೆ ಬೇಕಿದ್ದು, ಅದಕ್ಕಾಗಿ ಕಣದಿಂದ ಹಿಂದೆ ಸರಿದು ಗೌಡರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಘೋಷಿಸಿದರು