ಬಳ್ಳಾರಿ: ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಯಶಸ್ವಿಯಾಗಬೇಕಾದರೆ ಅದಕ್ಕೆ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ರಾಮಯ್ಯ ಕಾಲೋನಿಯ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಮತ್ತು ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮನೆಮನೆ ಭೇಟಿ ಮೂಲಕ 8.43 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳು ಹಾಗೂ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಒಟ್ಟು 3.16ಲಕ್ಷ ಮಕ್ಕಳಿಗೆ ಒಆರ್‌ಎಸ್ ಪೊಟ್ಟಣಗಳನ್ನುವಿತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮವು ಸೆ.7ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ. 2067 ಆಶಾಗಳು ಹಾಗೂ 2723 ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಜಂತುಹುಳು ನಿವಾರಣ ಆಲ್ಬಂಡೋಜೋಲ್ ಮಾತ್ರೆಗಳು ಮತ್ತು ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಓಆರ್‌ಎಸ್ ಪೊಟ್ಟಣಗಳನ್ನು ವಿತರಿಸಲಿದ್ದಾರೆ. ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕ್ಕೊಂಡು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಜಂತುಹುಳು ನಿವಾರಣಾ ಮಾತ್ರೆ ಆಲ್ಬಂಡೋಜೋಲ್ ನ್ನು 1ರಿಂದ 19 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಅವರ ಮನೆಗಳಲ್ಲಿಯೇ ನೀಡಲಿದ್ದಾರೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಎಲ್. ಜನಾರ್ಧನ್ ಮಾತನಾಡಿ, ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳು ಅತಿಸಾರ ಭೇದಿಗೆ ತುತ್ತಾದಾಗ ಮರಣ ಹೊಂದುವ ಸಾಧ್ಯತೆಗಳು ಹೆಚ್ಚು. ಅದಕ್ಕಾಗಿ ಈ ಸಂದರ್ಭದಲ್ಲಿ ತೀವ್ರತರ ಅತಿಸಾರ ಬೇ ಧಿ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಅತಿಸಾರ ಬೇಧಿ ಯಿಂದ 5 ವರ್ಷದ ಮಕ್ಕಳ ಮರಣವನ್ನು ತಡೆಗಟ್ಟಲು ಒಆರ್‌ಎಸ್ ಪೊಟ್ಟಣ ವಿತರಿಸಲಾಗುತ್ತಿದೆ. ಅತಿಸಾರ ಬೇಧಿ ನಿಯಂತ್ರಣಕ್ಕಾಗಿ ಜಿಂಕ್ ಮತ್ತು ಒಆರ್‌ಎಸ್ ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದ್ದು ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ಮಗುವಿಗೆ ವೈದ್ಯರ ನಿರ್ದೇಶನದ ಮೇರೆಗೆ ನೀಡುವುದರಿಂದ ಅತಿಸಾರಭೇದಿಯ ತೊಂದರೆಗಳಿಂದ ಮಗುವನ್ನು ರಕ್ಷಿಸಲು ಸಹಕಾರಿಯಾಗಲಿದೆ. ಯಾವುದೇ ವೈದ್ಯಕೀಯ ಸಹಾಯಕ್ಕಾಗಿ 104ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಆರ್.ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಈಶ್ವರ್.ಎಚ್ ದಾಸಪ್ಪನವರ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ಡಾ| ಎನ್.ಬಸರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗುರುನಾಥ್ ಚವ್ಹಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ| ರಾಜಶೇಖರರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ| ಆರ್ ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣ
ಅಧಿಕಾರಿ ಡಾ| ಇಂದ್ರಾಣಿ, ಡಾ| ರಾಜಶೇಖರ್, ಸಿಡಿಪಿಒ ಜಲಾಲಪ್ಪ, ಡಿಎನ್‌ಒ ಸರೋಜ, ಸೇರಿದಂತೆ ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ ಹಾಗೂ ತಾಯಂದಿರು ಇದ್ದರು.