ಹುಳಿಯಾರು: ಹುಳಿಯಾರು ಹೋಬಳಿಯ ಕುರಿಹಟ್ಟಿ ಪ್ರದೇಶದಲ್ಲಿ ರಾಗಿ ಪೈರು ತಿನ್ನುವ ಹುಳುಗಳ ಕಾಟ ಆರಂಭವಾಗಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೀಡು ಮಾಡಿದೆ.
ಗಾಯದ ಮೇಲೆ ಬರೆ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು ಕಾಳು ಬಿತ್ತಲಾಗದೆ ನಿರಾಸೆಗೊಳಗಾಗಿದ್ದ ರೈತನಿಗೆ ರಾಗಿ ಬಿತ್ತನೆಗೆ ಒಳ್ಳೆಯ ಮಳೆಯಾಗಿತ್ತು. ಪರಿಣಾಮ ಹುಳಿಯಾರು ಮತ್ತು ಹಂದನಕೆರೆ ಹೋಬಳಿಯ ಬಹುತೇಕ ರೈತರು ರಾಗಿ ಬಿತ್ತಿದ್ದರು. ನಂತರದ ದಿನಗಳಲ್ಲೂ ಆಗಾಗ ಮಳೆ ಬಿದ್ದ ಪರಿಣಾಮ ರಾಗಿ ರೈತನ ಕೈ ಹಿಡಿಯುವ ಭರವಸೆ ಮೂಡಿಸಿತ್ತು. ಸಾಲ ಸೋಲ ಮಾಡಿ ಸರದಿಯಲ್ಲಿ ನಿಂತು ಕಿತ್ತಾಡಿ ಗೊಬ್ಬರ ತಂದು ಉತ್ತಮ ಇಳುವರಿ ಎದುರು ನೋಡುತ್ತಿದ್ದ. ರಾಗಿಯೂ ಉತ್ತಮ ಫಸಲು ಬಂದೇ ಬರುವ ಲಕ್ಷಣದಂತೆ ಎತ್ತ ನೋಡಿದರೂ ಹುಲುಸಾಗಿ ಬೆಳೆದಿತ್ತು. ಈ ಬಾರಿ ರಾಗಿ ರೈತನ ಕೈ ಹಿಡಿಯುತ್ತದೆ ಎನ್ನುವಷ್ಟರಲ್ಲಿ ಹುಳುಗಳ ಕಾಟ ಆರಂಭವಾಗಿ ಗಾಯದ ಮೇಲೆ ಬರೆಹಾಕಿದಂತಾಗಿದೆ.
ರಾಗಿ ಪೈರಿನಲ್ಲಿ ಶಕ್ತಿ ಕುಂಠಿತ: ಗಾಣಧಾಳು ಗ್ರಾಪಂ ವ್ಯಾಪ್ತಿಯ ಕುರಿಹಟ್ಟಿ ಭಾಗದ ರಾಗಿ ಬೆಳೆಗೆ ಹಸಿರು ಹುಳು ಕಾಟ ಹೆಚ್ಚಾಗಿ ಕಂಡು ಬಂದಿದೆ. ರಾಗಿ ಬೆಳೆಯಲ್ಲಿ ಕಾಣಿಸಿದ್ದ ಈ ಹುಳು ಕಾಂಡದಿಂದ ಗರಿ ತಿನ್ನುತ್ತ ಬರುತ್ತಿದೆ. ಪರಿಣಾಮ ಗರಿಗಳು ತುಂಡಾಗಿ ಬಿದ್ದು, ರಾಗಿ ಪೈರಿನಲ್ಲಿ ಶಕ್ತಿ ಕುಂಠಿತವಾಗುತ್ತಿದೆ. ಹೀಗೆ ಹುಲ್ಲಿನ ಪ್ರಮಾಣ ಕಡಿಮೆಯಾಗಿ ತೆನೆ ನಿರೀಕ್ಷಿತ ಪ್ರಮಾಣದಲ್ಲಿ ಕಾಳು ಕಟ್ಟದೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಇಷ್ಟಲ್ಲದೆ ಹೊಲದಿಂದ ಹೊಲಕ್ಕೆ ಇವುಗಳ ಹಾವಳಿ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಬಿತ್ತಿರುವ ನೂರಾರು ಹೆಕ್ಟೇರ್ ಪ್ರದೇಶಕ್ಕೆ ಹರಡುವ ಆತಂಕವೂ ರೈತರಲ್ಲಿದೆ. ಈ ಹುಳುಗಳು ರಾತ್ರಿ ಸಮಯದಲ್ಲಿ ಮಾತ್ರ ರಾಗಿ ಗರಿ ತಿನ್ನುತ್ತಿದ್ದು, ಹಗಲಿನಲ್ಲಿ ಹುಳುಗಳು ಕಾಣುವುದಿಲ್ಲ. ಹಾಗಾಗಿ ಇವುಗಳ ಹತೋಟಿ ಕ್ರಮ ತಿಳಿಯದೆ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಹತೋಟಿ ಕ್ರಮ ಗೊತ್ತಿಲ್ಲ!: ರಾಗಿ ಬೆಳೆ ಬೆಳೆಯುವುದು ನಮಗೇನು ಹೊಸದೇನಲ್ಲ. ಸುಮಾರು ವರ್ಷಗಳಿಂದ ರಾಗಿ ಬೆಳೆಯುತ್ತಿದ್ದು, ಇದುವರೆಗೆ ರಾಗಿ ಬೆಳೆಗೆ ಯಾವುದೇ ಕೀಟಗಳು ಹಾಗೂ ರೋಗಗಳು ಬಂದಿರಲಿಲ್ಲ, ಔಷಧ ಸಿಂಪಡಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಭಾಗದಲ್ಲಿ ರಾಗಿಗೆ ಹುಳುಗಳ ಕಾಟ ಶುರುವಾಗಿದ್ದು, ಹತೋಟಿ ಕ್ರಮ ತಿಳಿಯದಾಗಿದ್ದು, ಕೃಷಿ ಅಧಿಕಾರಿಗಳು ಇತ್ತ ಭೇಟಿ ನೀಡಿ ಔಷಧೋಪಚಾರದ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ಕುರಿಹಟ್ಟಿ ರಾಗಿ ಬೆಳೆಗಾರ ಲಕ್ಷ್ಮೀ ಕಾಂತ್ ಹೇಳಿದ್ದಾರೆ.
-ಎಚ್.ಬಿ. ಕಿರಣ್ ಕುಮಾರ್