ತೀರ್ಥಹಳ್ಳಿ: ಪಟ್ಟಣದ ಅಂಗನವಾಡಿಯೊಂದರಲ್ಲಿ ಸರ್ಕಾರದಿಂದ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವಾದ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳುವೊಂದು ಪ್ರತ್ಯಕ್ಷವಾಗಿದ್ದು ಅದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಮಾಡಿದೆ.
ಹಿಂದಿನ ಪೌಷ್ಟಿಕಾಂಶ ಆಹಾರದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಹೊಸ ರೀತಿಯಲ್ಲಿ ಮಿಲೆಟ್ ಲಡ್ಡು ಮಿಶ್ರಣ, ರವೆ ಉಪ್ಪಿಟ್ಟು, ಹೀಗೆ ಬೇರೆ ರೀತಿಯ ಆಹಾರವನ್ನು ಮಕ್ಕಳಿಗೆ ಕೊಡುವುದರಿಂದ ಈ ಪೌಷ್ಟಿಕ ಆಹಾರವು ಮಕ್ಕಳಿಗೆ ಇಷ್ಟವಾಗುವುದಿಲ್ಲ ಎಂಬ ಮಾತು ಮಕ್ಕಳ ಪೋಷಕರಿಂದ ಕೇಳಿ ಬರುತ್ತಿದೆ.
ಹೊಸ ರೀತಿಯಲ್ಲಿ ಬರುತ್ತಿರುವ ಮೆನುವಿನಲ್ಲಿ ಆಹಾರವು ಪ್ಲಾಸ್ಟಿಕ್ (ಪೊಟ್ಟಣ)ದಲ್ಲಿ ಬರುತ್ತಿದ್ದು ಇದು ಮಕ್ಕಳಿಗೆ ಪಜೀತಿ ಉಂಟು ಮಾಡಿದೆ. ಈ ಉಪ್ಪು ಖಾರ ಇಲ್ಲದ ಆಹಾರವನ್ನು ಬಲವಂತವಾಗಿ ತಿನ್ನುವ ದುಸ್ಥಿತಿ ಅಂಗನವಾಡಿ ಪುಟ್ಟ ಪುಟ್ಟ ಮಕ್ಕಳಿಗೆ ಬಂದಿದೆ. ಮಕ್ಕಳು ಒಲ್ಲದ ಮನಸ್ಸಿನಿಂದ ಈ ಆಹಾರ ಸೇವಿಸಬೇಕಿದೆ. ತರಕಾರಿ, ಸೊಪ್ಪು, ಅಡುಗೆ ಎಣ್ಣೆ ಇಲ್ಲದೆ ಸಾಂಬಾರ್ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳು ಈ ಸತ್ವ ರಹಿತ ಆಹಾರ ತಿನ್ನಬೇಕಿದೆ.
ಹಿಂದೆ ಶೇಂಗಾ ( ಚಿಕ್ಕಿ ), ಹಾಲು, ಮೊಟ್ಟೆ, ಮಧ್ಯಾಹ್ನ ಅನ್ನ ಸಾರು ಎಲ್ಲಾ ಕೊಡುತ್ತಿದ್ದರು. ಆದರೆ ಈಗ ಫುಡ್ ಹಿಟ್ಟನ್ನು ನೀರಿನಲ್ಲಿ ಕಲಸಿ ಕೊಡಲಾಗುತ್ತಿದೆ. ಕಿಚಡಿ ಮಾಡಿದರು ಅದಕ್ಕೆ ಒಗ್ಗರಣೆ ಹಾಕದೆ ನೀಡಲಾಗುತ್ತದೆ. ಮುಂಚೆ ಶೇಂಗಾ ಬೆಲ್ಲ ಇಷ್ಟ ಪಟ್ಟು ತಿನ್ನುತ್ತಿದ್ದ ಮಕ್ಕಳು ಈಗ ಹೊಸ ಮಿಲೆಟ್ ಲಾಡು ತಿನ್ನಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ಖಾರದ ಕಿಚಡಿ ತಿಂದು ಖಾರ ಖಾರ ಎನ್ನುವ ಪರಿಸ್ಥಿತಿ ಬಂದೊದಗಿದೆ. ಮಕ್ಕಳ ಕಷ್ಟ ತಿಳಿಯದ ಅಧಿಕಾರಿಗಳು ಮೈಗಳ್ಳರಾಗಿದ್ದಾರೆ. ಒಟ್ಟಿನಲ್ಲಿ ಪುಟ್ಟ ಮಕ್ಕಳ ಕಷ್ಟ ಕೇಳುವರಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ಸೂಕ್ತ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಿದೆ.