ವಾಷಿಂಗ್ಟನ್/ಹೊಸದಿಲ್ಲಿ: ವಿಶ್ವಬ್ಯಾಂಕ್‌ನ ಉದ್ದಿಮೆ ಸ್ನೇಹಿ ರಾಷ್ಟ್ರಗಳ ವರದಿ ಬಿಡುಗಡೆಯಾಗಿದ್ದು, ಹಾಲಿ ಸಾಲಿನಲ್ಲಿ ಭಾರತದ ಸ್ಥಾನ 30 ಅಂಕಗಳಷ್ಟು ಉತ್ತಮಗೊಂಡಿದೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ಜಾರಿಯಿಂದ ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗಿದೆ ಎಂಬ ವಿಪಕ್ಷ ಮತ್ತು ಬಿಜೆಪಿಯಲ್ಲಿನ ಕೆಲ ನಾಯಕರ ಟೀಕೆಗಳ ನಡುವೆಯೇ ಈ ವರದಿ ಬಿಡುಗಡೆಯಾಗಿರುವುದು ಪ್ರಧಾನಿ ಮೋದಿ ಕೈಗೊಂಡಿರುವ ಅರ್ಥ ವ್ಯವಸ್ಥೆಯ ಸುಧಾರಣಾ ಕ್ರಮಕ್ಕೆ ವಿಶ್ವಸಮುದಾಯದ ಮನ್ನಣೆ ಎಂದೇ ವಿಶ್ಲೇಷಿಸಲಾಗುತ್ತಿದೆ.ಹೊಸದಿಲ್ಲಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಕೂಡ ಪ್ರತಿಕ್ರಿಯೆ ನೀಡಿ, ಹಾಲಿ ಸಾಲಿನಲ್ಲಿ ನಮ್ಮ ದೇಶ 30 ಸ್ಥಾನಗಳಷ್ಟು ಹೆಚ್ಚು ತೇರ್ಗಡೆಯಾಗಿ 100ನೇ ಸ್ಥಾನ ಪಡೆದುಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಂಡವಾಳ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ, ಸಾಲ ಸೌಲಭ್ಯ ಒದಗಿಸುವಿಕೆ, ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದರಿಂದ ಕಳೆದ ಸಾಲಿನಲ್ಲಿ 130ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 100ನೇ ಸ್ಥಾನಕ್ಕೆ ಜಿಗಿದಿದೆ. 2014ರಲ್ಲಿ ದೇಶದ ಸಂಖ್ಯೆ 142ನೇ ಸ್ಥಾನದಲ್ಲಿತ್ತು ಎಂದಿದ್ದಾರೆ ಜೇಟಿÉ. ಉದ್ಯಮ ಸ್ನೇಹಿ ರಾಷ್ಟ್ರಗಳ ಸಾಲಿನಲ್ಲಿ ಮೊದಲ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ ಇರಬೇಕೆಂದು ಪ್ರಧಾನಿ ಹೇಳುತ್ತಿದ್ದರು. ಅದಕ್ಕೆ ಪೂರಕವಾಗಿ ಈ ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಹೇಳಿದ ಗುರಿಯನ್ನೂ ತಲುಪುತ್ತೇವೆ ಎಂದರು ಜೇಟಿÉ.
ಹತ್ತರಲ್ಲಿ ಎಂಟು: ಜಾಗತಿಕವಾಗಿ ಉದ್ಯಮ ಸ್ನೇಹಿ ರಾಷ್ಟ್ರ ಎಂದು ಗುರುತಿಸಿಕೊಳ್ಳುವ ಹತ್ತು ಅಂಶಗಳ ಪೈಕಿ ಎಂಟರಲ್ಲಿ ಭಾರತ ಗಣನೀಯ ಪ್ರಮಾಣದಲ್ಲಿ ಸುಧಾರಣೆ ದಾಖಲಿಸಿದೆ. ಮುಂದಿನ ವರ್ಷಗಳಲ್ಲಿ ಹತ್ತಕ್ಕೆ ಹತ್ತರಲ್ಲೂ ಸುಧಾರಣೆ ಕಾಣುವ ವಿಶ್ವಾಸ ಇದೆ ಎಂದಿದ್ದಾರೆ ಜೇಟಿÉ. ತೆರಿಗೆ ಪಾವತಿಯಲ್ಲಿ 53 ಸ್ಥಾನಗಳಲ್ಲಿ ದೇಶ ಉತ್ತೀರ್ಣತೆ ಪಡೆದಿದೆ. ಅಂದರೆ ಹಾಲಿ 172ನೇ ಸ್ಥಾನದಿಂದ ಸದ್ಯ 119ನೇ ಸ್ಥಾನಕ್ಕೆ, ಸಣ್ಣ ಪ್ರಮಾಣದ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಿಕೊಳ್ಳುವಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನ, ಸಾಲ ಸೌಲಭ್ಯದಲ್ಲಿ ಹಾಲಿ 44ರಿಂದ 29ನೇ ಸ್ಥಾನಕ್ಕೆ ದೇಶದ ಅಂಕ ಉತ್ತಮಗೊಂಡಿದೆ ಎಂದಿದ್ದಾರೆ.
ಬಹು ಕ್ಷೇತ್ರ ಮತ್ತು ಸರ್ವಾಂಗೀಣವಾಗಿ ಅಭಿವೃದ್ಧಿ ಸಾಧಿಸಬೇಕೆಂಬ ಮನಸ್ಸಿನಿಂದ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಹೀಗಾಗಿ ವ್ಯಾಪಾರೋದ್ದಿಮೆ ನಡೆಸುವ ನಿಟ್ಟನಲ್ಲಿರುವ ದೇಶದ ರ್‍ಯಾಂಕಿಂಗ್‌ನಲ್ಲಿ ವೃದ್ಧಿಯಾಗಿದೆ. ಇದೊಂದು ನಿಜಕ್ಕೂ ಐತಿಹಾಸಿಕ ಸಾಧನೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ