Advertisement

ಕುವೆಂಪು ವಿಶ್ವಮಾನವ ಸಂದೇಶ ಜಾಥಾ

04:08 PM Jan 04, 2018 | |

ನಗರ: ಭಾರತ ಎಂದರೆ ಹಲವು ಭಾಷೆ, ಜಾತಿ, ಮತ ಧರ್ಮಗಳ ಜನ ಒಟ್ಟಾಗಿ ಬಾಳುವ ಉದ್ಯಾನವನ. ಅದು
ಎಂದೆಂದಿಗೂ ನಳನಳಿಸುತ್ತಿರಲು ಸರ್ವರೂ ಸಹಬಾಳ್ವೆಯೊಂದಿಗೆ ಬದುಕಬೇಕು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ’ಸೋಜಾ ಹೇಳಿದರು.

Advertisement

ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಆಶ್ರಯದಲ್ಲಿ ಡಿ. 29ರಿಂದ ನಡೆಯುತ್ತಿರುವ ಕುವೆಂಪು ವಿಶ್ವಮಾನವ
ಸಂದೇಶ ಜಾಥಾ ಬುಧವಾರ ಪುತ್ತೂರಿಗೆ ಆಗಮಿಸಿದ ಸಂದರ್ಭ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧಿಕಾರ ಶಾಹಿಯನ್ನು ಸ್ಥಾಪನೆ ಮಾಡುವುದಕ್ಕಾಗಿ ಇಂದು ಸ್ಥಾಪಿತ ಹಿತಾಸಕ್ತಿಗಳು, ಮತೀಯವಾದಿಗಳು ಸಮಾಜವನ್ನು ವಿವಿಧ ಹೆಸರುಗಳಲ್ಲಿ ವಿಂಗಡಣೆ ಮಾಡುತ್ತಿದ್ದಾರೆ. ಇದರ ಫಲವಾಗಿ ಇಂದು ಮತ ಮತ್ತು ಮತಿ ಎರಡೂ ವಿಕಾರಗೊಳ್ಳುತ್ತಾ ಸಾಗುತ್ತಿವೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಮಾತನಾಡಿ, ಕುವೆಂಪು ಅವರ ಅನಿಕೇತನ ಪ್ರಜ್ಞೆಯೇ ವಿಶ್ವ ಬಂಧುತ್ವದ ಲಕ್ಷಣ. ಬೇಲಿ ಇಲ್ಲದೆ, ಒಂದೇ ಮಾಡಿನ ಕೆಳಗೆ ಬದುಕುವ ಮಂತ್ರವನ್ನು ಕುವೆಂಪು ಸಮಾಜಕ್ಕೆ ಕೊಟ್ಟಿದ್ದಾರೆ ಎಂದವರು ನುಡಿದರು.

ಸಮಾನ ಹಕ್ಕು
ಗಾಳಿಗೆ ಕ್ಯಾಲೆಂಡರ್‌ನ ಹಂಗಿಲ್ಲ. ನೀರು ಭೂಪಟ ನೋಡಿ ಹರಿಯುವುದಿಲ್ಲ. ಪ್ರಾಣಿಗಳಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮನುಷ್ಯನಿಗೂ ಪ್ರಕೃತಿಯಲ್ಲಿ ಇದೆಯೇ ಹೊರತು ಅದಕ್ಕಿಂತ ಹೆಚ್ಚಿಲ್ಲ. ಆದರೆ ಮನುಷ್ಯ ಮಾತ್ರ ಗೋಡೆ ಕಟ್ಟಿಕೊಂಡು ಬದುಕುತ್ತಿದ್ದಾನೆ ಎಂದು ಅವರು ನುಡಿದರು.

Advertisement

ಪ್ರಾಚಾರ್ಯ ಝೇವಿಯರ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಹಿರಿಯ ನ್ಯಾಯವಾದಿ ಪಿ.ಕೆ. ಸತೀಶನ್‌ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕುವೆಂಪು ಅವರು ನೀಡಿದ ವಿಶ್ವ ಮಾನವ ಸಂದೇಶ ಇಂದು ಅತ್ಯಂತ ಪ್ರಸ್ತುತ ಎಂದವರು ನುಡಿದರು.

ಮಾನವ ಬಂಧುತ್ವ ವೇದಿಕೆಯ ದ.ಕ. ಜಿಲ್ಲಾ ಸಂಚಾಲಕ ನಾರಾಯಣ ಕಿಲ್ಲಂ ಗೋಡಿ ಉಪಸ್ಥಿತರಿದ್ದರು. ಸದಸ್ಯ ಅಮಳ
ರಾಮಚಂದ್ರ ಸ್ವಾಗತಿಸಿದರು. ಅಂಜನಪ್ಪ ಮತ್ತು ಸದಸ್ಯರ ಕಲಾತಂಡದಿಂದ ವಿಶ್ವ ಮಾನವ ಸಂದೇಶ ಸಾರುವ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ವಿದ್ಯಾರ್ಥಿನಿ ಇರ್ಷಾನಾ ಕಾರ್ಯಕ್ರಮ ನಿರ್ವಹಿಸಿದರು.

ಸರ್ವ ಜನಾಂಗದ ತೋಟ
ರಾಷ್ಟ್ರಕವಿ ಕುವೆಂಪು ಅವರು ಸರ್ವ ಜನಾಂಗದ ತೋಟ ಎಂದು ಬಣ್ಣಿಸಿದ್ದರು. ಆದರೆ ಅಂತಹ ತಾಣವೀಗ ಧರ್ಮ,
ಜಾತಿಗಳ ನಡುವಿನ ಕಲಹದ ನೆಲೆಯಾಗುತ್ತಿದೆ. ಹೇಗೆ ಒಂದೇ ಜಾತಿಯ ಹೂಗಳಿದ್ದರೆ ಅದು ಸುಂದರ ಉದ್ಯಾನ ಅನಿಸಿಕೊಳ್ಳುವುದಿಲ್ಲವೋ ಒಂದೇ ವರ್ಗದ ಜನರಿದ್ದರೂ ಅದು ಉತ್ತಮ ಸಮಾಜ ಅನಿಸುವುದಿಲ್ಲ ಎಂದು ವಿಲ್ಫ್ರೆಡ್  ಡಿ’ಸೋಜಾ ಹೇಳಿದರು.

ಜ. 9ರಂದು ಸಮಾರೋಪ ಡಿಸೆಂಬರ್‌ 29ರಂದು ಕುವೆಂಪು ಜನ್ಮದಿನಾಚರಣೆ ಸಂದರ್ಭ ಕುಪ್ಪಳ್ಳಿಯಿಂದ ಹೊರಟ ಈ ಸಂದೇಶ ಯಾತ್ರೆ ಜನವರಿ 9ರಂದು ಮೈಸೂರು ವಿವಿಯ ಕುವೆಂಪು ಅಧ್ಯಯನ ವಿಭಾಗದಲ್ಲಿ ಸಮಾರೋಪ ಕಾರ್ಯಕ್ರಮ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next