ಸಿಂಗಾಪುರ್ : 13 ತಿಂಗಳ ಹಿಂದೆ ಜನಿಸಿದ್ದ ಮಗು ಕೊನೆಗೂ ಮನೆ ತಲುಪಿದೆ. ಹೌದು, ಸಿಂಗಾಪುರದ ನ್ಯಾಶನಲ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಜನಿಸಿದ ಈ ಮಗು ಜನಿಸುವಾಗಿ ಒಂದು ಆ್ಯಪಲ್ ನಷ್ಟು ತೂಕ ಅಂದರೇ, ಕೇವಲ 212 ಗ್ರಾಂ ನಷ್ಟು ತೂಕವಿದ್ದಿತ್ತು, ಸುಮಾರು 13 ತಿಂಗಳುಗಳ ಸುದೀರ್ಘ ಚಿಕಿತ್ಸೆಯ ನಂತರ ಈಗ ಮಗು ಮನೆ ತಲುಪಿದೆ.
ಕಳೆದ ಜೂನ್ 9 ರಂದು ಜನಿಸಿದ್ದ ಮಗು, ಕೇವಲ 24 ಸೆಂಟಿಮೀಟರ್ ನಷ್ಟು ಮಾತ್ರ ಉದ್ದ ಇದ್ದಿತ್ತು. ಕ್ವೆಕ್ ಯು ಕ್ಸುವಾನ್ ಎಂಬ ಹೆಸರಿನ ಮಗು ಜನಿಸಿದಾಗ, ಬದುಕಿ ಉಳಿಯುತ್ತದೆ ಎನ್ನುವುದರ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ನಂಬಿಕೆ ಇದ್ದಿರಲಿಲ್ಲ. ಸುಮಾರು 13 ತಿಂಗಳುಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡದ ಬಳಿಕ ಈಗ ಮಗು ಕಣ್ಣು ಬಿಟ್ಟು ಸ್ಪಂದಿಸುವುದಕ್ಕೆ ಆಂಭಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಶನಲ್ ಯೂನಿವರ್ಸಿಟಿ ಹಾಸ್ಪಿಟಲ್ ನ ನರ್ಸ್ ಜಾಂಗ್ ಸುಹೆ, ನನ್ನ 22 ವರ್ಷದ ವೃತ್ತಿ ಅನುಭವದಲ್ಲಿ ಇದುವರೆಗೆ ನಾನು ಇಷ್ಟು ಚಿಕ್ಕ ಗಾತ್ರದ ಹಾಗೂ 212 ಗ್ರಾಂ ತೂಕದ ಮಗು ಜನಿಸಿದ್ದನ್ನು ನಾನು ನೋಡಿದ್ದಿರಲಿಲ್ಲ. ಮಗು ಜನಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಮಗು ಬದುಕಿ ಉಳಿಯುತ್ತದೆ ಎನ್ನುವುದರ ಬಗ್ಗೆ ನನಗೆ ವಿಶ್ವಾಸವಿರಲಿಲ್ಲ. ಈಗ ಖುಷಿಯಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಸಿನಿಮಾ ಚಿತ್ರೀಕರಣ ಅನುಮತಿ ಬಗ್ಗೆ ಹೊಸ ಆದೇಶ ಹೊರಡಿಸುತ್ತೇವೆ: ಸಿಎಂ ಬೊಮ್ಮಾಯಿ
ಕ್ವೆಕ್ ಯು ಕ್ಸುವಾನ್ ಹೆಸರಿನ ಮಗುವಿಗೆ 13 ತಿಂಗಳುಗಳ ಕಾಲ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. 13 ತಿಂಗಳುಗಳ ನಂತರ ಮಗು ಈಗ 6.3 ಕೆ. ಜಿ ತೂಕಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಜಗತ್ತಿನ ಅತ್ಯಂತ ಚಿಕ್ಕ ಮಗು ಎಂದು ಗುರುತಿಸಿಕೊಂಡಿದೆ.
ಪ್ರಿ ಮೆಚ್ಯುರ್ ಬೇಬಿ, ಅಂದರೇ, ಸುಮಾರು ನಾಲ್ಕು ತಿಂಗಳುಗಳ ಮೊದಲೇ ಜನಿಸಿದ ಕ್ವೆಕ್ ಯು ಕ್ಸುವಾನ್, ಸುದೀರ್ಘ ಆಸ್ಪತ್ರೆಯ ವಾತಾವರಣದಿಂದ ಈಗ ಮನೆಗೆ ತಲುಪಿದ್ದು, ಸದ್ಯ ಆರೋಗ್ಯವಾಗಿದೆ ಎಂದು ವರದಿ ತಿಳಿಸಿದೆ.
ಮಗುವಿನ ಹೆರಿಗೆಯ ಸಂದರ್ಭದಲ್ಲಿದ್ದ ಆಸ್ಪತ್ರೆಯ ನಿಯೋನಾಟಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ. ಎನ್ ಜಿ, ಹೆರಿಗೆಯಾಗುವ ಸಂದರ್ಭದಲ್ಲಿ, ಪ್ರೀ ಮೆಚ್ಯುರ್ ಆಗಿರುವುದರಿಂದ ಮಗು ಅಂದಾಜು 400 ರಿಂದ 600 ಗ್ರಾಂ ತೂಕ ಇರಬಹುದು ಎಂದು ಅಂದಾಜಿಸಿದ್ದೇವು. ಆದರೇ, ಮಗು ಜನಿಸಿದಾಗ ಕೇವಲ 212 ಗ್ರಾಂ ತೂಕ ಇದ್ದಿತ್ತು, ನನ್ನೊಂದಿಗೆ ಹೆರಿಗೆ ಚಿಕಿತ್ಸೆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೆ ಆಶ್ಚರ್ಯವಾಗಿತ್ತು, ಮಗು ಬದುಕುಳಿಯುತ್ತದೆ ಎನ್ನುವುದರ ಬಗ್ಗೆ ನಮಗೆ ನಂಬಿಕೆ ಇದ್ದಿರಲಿಲ್ಲ.
ಪ್ರಿ ಮೆಚ್ಯರ್ ಮಗುವಿನ ಚಿಕಿತ್ಸೆಯೂ ಕೂಡ ನಮಗೆ ದೊಡ್ಡ ಸವಾಲಾಗಿತ್ತು. ಮಗುವಿನ ಚರ್ಮ ತುಂಬಾ ಮೃದುವಾಗಿತ್ತು, ನಮಗೆ ಮಗುವನ್ನು ಮುಟ್ಟುವುದಕ್ಕೂ ಕೂಡ ಭಯವಾಗುತ್ತಿತ್ತು. ಮಗುವಿಗೆ ಆಕ್ಸಿಜನ್ ಪೂರೈಸುವುದು ಕೂಡ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಮಗುವಿನ ಆರೈಕೆಗೆ ವೈದ್ಯಕೀಯ ಸಿಬ್ಬಂದಿಗಳು ಪಟ್ಟ ಕಷ್ಟ ಅವರ ವೃತ್ತಿಜೀವನದ ಅನುಭವದಲ್ಲಿ ಎಂದೂ ಕಂಡಿರಲಿಕ್ಕಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
13 ತಿಂಗಳುಗಳ ಅವಧಿಯಲ್ಲಿ ಮಗು ಪ್ರತಿ ನಿತ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಹಾಗೂ ಬೆಳವಣಿಗೆ ಹೊಂದುತ್ತಿರುವುದನ್ನು ನೋಡಿ ಆಕೆಯ (ಮಗುವಿನ ) ಆರೈಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿಗಳನ್ನು ನಿಬ್ಬೆರಗಾಗಿಸುವಂತೆ ಮಾಡಿತ್ತು, ಕೋವಿಡ್ 19 ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಆಕೆಯ ಬೆಳವಣಿಗೆ ವೈದ್ಯಕೀಯ ಸಿಬ್ಬಂದಿಗಳ ಪಾಲಿಗೆ ಆಶಾದಾಯಕವಾಗಿ ಕಾಣಿಸಿತ್ತು ಎಂದು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಮಗುವಿನ ಆರೈಕೆಗಾಗಿ ಪೋಷಕರಿಗೆ ವಿಶೇಷ ತರಬೇತಿಯನ್ನು ಕೂಡ ವೈದ್ಯಕೀಯ ಸಿಬ್ಬಂದಿಗಳು ನೀಡಿದ್ದು, ಮಗು ಮನೆಗೆ ತಲುಪಿದರೂ ಸಂಪೂರ್ಣವಾಗಿ ಮಗು ಬೆಳೆಯುವ ತನಕ ಚಿಕಿತ್ಸಕ ಆರೈಕೆಗಳು ಮನೆಯಲ್ಲೂ ಮುಂದುವರಿಯಲಿದೆ.
ಇನ್ನು, ಅಯೋವಾ ವಿಶ್ವವಿದ್ಯಾಲಯ, ಈವರೆಗೆ ಜಗತ್ತಿನಲ್ಲಿ ಜನಿಸಿದ ಅತ್ಯಂತ ಸಣ್ಣ ಗಾತ್ರದ ಮಗುವೆಂದು ಮಾಹಿತಿ ನೀಡಿದೆ. ಈ ಮೊದಲು 2018 ರಲ್ಲಿ 240 ಗ್ರಾಂ ತೂಕದ ಮಗು ಜನಿಸಿತ್ತು ಎಂದು ಕೂಡ ತಿಳಿಸಿದೆ.
ಇದನ್ನೂ ಓದಿ : 5ಡಿಯಲ್ಲಿ ನಾನು ಡಿಫರೆಂಟ್ ಅದಿತಿ.. ಹೊಸ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ