ತುಮಕೂರಿನ ಮಧುಗಿರಿ ಬೆಟ್ಟ, ಏಷ್ಯಾ ಖಂಡದ ಅತೀ ಎತ್ತರದ ಎರಡನೇ ಏಕಶಿಲ ಬೆಟ್ಟ, ಅಲ್ಲಿ ಒಂದು ಮಣ್ಣಿನ ಕೋಟೆ ಇದೆ. ಅದು ಸುಮಾರು 400-500ವರ್ಷ ಹಳೆಯದ್ದು, ಹಾಗೂ ಅದನ್ನು 17ನೇ ಶತಮಾನದಲ್ಲಿ (1670ರಲ್ಲಿ) ರಾಜಾ ಹೈರಾಗೌಡ ಎಂಬ ಪಾಳೆಗಾರ ನಿರ್ಮಿಸಿದ್ದನು.
“”ಇಲ್ಲ ಇನ್ನು ಸ್ವಲ್ಪ ಮಾತ್ರ ಇರೋದು ಹತ್ತೋಣ, ಇಷ್ಟು ಹತ್ತಿ ಬಂದು ಆಯಿತಲ್ಲ ಮುಂದೆ ಹೋಗೋಣ, ಬಹುಶಃ ಇದೊಂದೆ ಇಷ್ಟು ಭಯ ಹುಟ್ಟಿಸುವ ಹಾದಿ ಇರಬಹುದು, ಬನ್ನಿ ಇದು ಹೊಸ ಅನುಭವವನ್ನು ಕಟ್ಟಿಕೊಡತ್ತೆ…” ಹೀಗೆ ಹಲವಾರು ಹುರಿದುಂಬಿಸುವಂತಹ ಮಾತುಗಳು ಕೇಳಿಬರುತ್ತಿದ್ದವು. ಆಯಾಸದ ಎದುಸಿರು ಒಂದೆಡೆ. ಹುರಿದುಂಬಿಸುವ ಮಾತುಗಳಿಂದ ಪ್ರೇರೇಪಿತರಾಗಿ, ಏರಬೇಕೆಂಬ ಬಯಕೆ ಇನ್ನೊಂದೆಡೆ. ಕಷ್ಟಪಟ್ಟರೆ ಸುಖ ಕಟ್ಟಿಟ್ಟ ಬುತ್ತಿ ಎಂಬಂತೆ, ಆ ಕಷ್ಟದಲ್ಲೂ ಒಂದು ರೀತಿಯ ಆನಂದವಿತ್ತು. ಚಾರಣ ಎಂದರೆ ಹಾಗೆ, ಅದೊಂದು ಅನುಭವಗಳ ಆಗರ.
ತುಮಕೂರಿನ ಮಧುಗಿರಿ ಬೆಟ್ಟ, ಏಷ್ಯಾ ಖಂಡದ ಅತೀ ಎತ್ತರದ ಎರಡನೇ ಏಕಶಿಲ ಬೆಟ್ಟ, ಅಲ್ಲಿ ಒಂದು ಮಣ್ಣಿನ ಕೋಟೆ ಇದೆ. ಅದು ಸುಮಾರು 400-500ವರ್ಷ ಹಳೆಯದ್ದು, ಹಾಗೂ ಅದನ್ನು 17ನೇ ಶತಮಾನದಲ್ಲಿ (1670ರಲ್ಲಿ) ರಾಜಾ ಹೈರಾಗೌಡ ಎಂಬ ಪಾಳೆಗಾರ ನಿರ್ಮಿಸಿದ್ದು. ನಮ್ಮ ತಂಡದಲ್ಲಿ ಬೇರೆ ಬೇರೆ ಭಾಗದಿಂದ ಬಂದಿದ್ದ ಸುಮಾರು 45ಜನ ಇದ್ದೆವು. ಆದರೆ ಆತ್ಮೀಯರು ಯಾರ ಮುಖವೂ ಅಷ್ಟಾಗಿ ಪರಿಚಯ ಇರಲಿಲ್ಲ. ಆರಂಭದಲ್ಲಿ ಅಂಜಿಕೆಯಿಂದಲೇ ಶುರುವಾದ ಪಯಣವಾದರೂ, ಮರುದಿನ ರಾತ್ರಿ ಪುನಃ ಬಸ್ ಇಳಿಯುವಾಗ ಆ ಅಂಜಿಕೆಯಾಗಲಿ ಭಯವಾಗಲೀ ಇರಲಿಲ್ಲ. ಬದಲಾಗಿ ಮೋಜಿನ ಕನಸುಗಳ ಜತೆಗೆ ಬಂದವರೆಲ್ಲರು ಸ್ನೇಹಿತರಾಗಿದ್ದರು.
ಮಧುಗಿರಿಯಲ್ಲಿಯೇ ಒಂದು ಐಬಿಯಲ್ಲಿ ವಿಶ್ರಮಿಸಿ ಬೆಳಗ್ಗೆ ಸರಿಸುವಾರು 7.30ರ ವೇಳಗೆ ಬೆಟ್ಟವನ್ನು ಹತ್ತಲು ಪ್ರಾರಂಭಿಸಿದೆವು. ತಳದಿಂದ ಆ ಕಲ್ಲಿನ ಬೆಟ್ಟವನ್ನು ಕಂಡು ಹಾ!!! ಇದೆಷ್ಟು ಚಿಕ್ಕದಾಗಿದೆ. ಒಂದು ಗಂಟೆಯೊಳಗೆ ಅದರ ತುದಿಯನ್ನು ಮುಟ್ಟಬಹುದು ಎಂದು ಎಲ್ಲರ ಬಾಯಿಂದ ಉತ್ಸಾಹದ ಮಾತುಗಳು ಹೊರ ಬಂದವು. ಆ ಮಾತುಗಳನ್ನೆಲ್ಲಾ ಕಲ್ಲಿನ ಬೆಟ್ಟ ಕೇಳಿಸಿಕೊಂಡಂತೆ ನಮ್ಮತ್ತ ನೋಡಿ ಮುಗುಳು ನಗೆ ಬೀರುವಂತಿತ್ತು. ಅದರ ಮರ್ಮವನ್ನು ಅರಿಯದ ನಮ್ಮ ತಂಡ ಬೆಟ್ಟವನ್ನು ಹತ್ತಲು ಪ್ರಾರಂಭಿಸಿತು. ಸ್ವಲ್ಪ ಮೇಲೇರುತ್ತಿದ್ದಂತೆೆ ಎಲ್ಲರೂ ಆಡಿದ ಆಡಂಬರದ ಮಾತುಗಳು ನೆಲಸಮವಾಗಿ ಹೋಗಿದ್ದವು. ಇನ್ನು ಎಷ್ಟು ಹತ್ತಬೇಕು, ನನ್ನಿಂದ ಕೂಡದು, ಯಬ್ಟಾ! ಎಂಬ ಮಾತುಗಳು ಕೇಳಲಾರಂಭಿಸಿದವು.
ಈ ಎಲ್ಲ ಮಾತುಗಳಿಗೂ ಉತ್ತರವೆಂಬಂತೆ ನಮ್ಮೊಂದಿಗೆ ಬಂದ ಮಾರ್ಗದರ್ಶಿ ಇದೊಂದು ಹಾದಿಯನ್ನು ದಾಟಿದರೆ ನಂತರದ ದಾರಿಗಳನ್ನು ಸುಲಭವಾಗಿ ಹತ್ತಬಹುದು. ಇದೊಂದೇ ಇಷ್ಟು ಕಷ್ಟಕರವಾದ ಹಾದಿ. ಇದನ್ನು ದೈರ್ಯದಿಂದ ದಾಟಿ ಎಂದು ಹೇಳಿ ಎಲ್ಲರಿಗೂ ಹುರಿದುಂಬಿಸುವ ಕೆಲಸ ಮಾಡುತ್ತಿದರು. ಆ ಹಾದಿ ಹೇಗಿತ್ತೆಂದರೆ ಜಾರುವ ಕಲ್ಲು, ಪಾದ ಮಾತ್ರ ಇಡುವಷ್ಟು ಜಾಗ. ಅದರಲ್ಲಿ ನಾವು ತುಂಬಾ ಜಾಗರೂಕತೆ ಇಂದ ನಡೆದು ಹೋದರೆ ಮಾತ್ರ ಆ ಹಾದಿಯನ್ನು ದಾಟಬಹುದಿತ್ತು. ಸ್ವಲ್ಪ ಎಡವಿದರೂ ಆ ಕಲ್ಲಿನ ಬೆಟ್ಟದ ತಳದಲ್ಲಿ ಬೀಳಬೇಕು! ಆದರೂ ಮನಸನ್ನು ಗಟ್ಟಿಮಾಡಿಕೊಂಡು ದಾಟಿದೆವು. ಅನಂತರ ಅಲ್ಲಿನ ಪಕೃತಿ, ಕೋಟೆ, ನೋಡಿದಷ್ಟು ದೂರ ಕಾಣುವ ಸುತ್ತಲಿನ ಪರಿಸರ ಆಹಾ! ಎಂತಹಾ ಅದ್ಭುತ!
ಬೆಟ್ಟವನ್ನು ಹತ್ತುತ್ತಾ ಹೋದಂತೆ ಹೊಸ ಅನುಭವಗಳು ನಮ್ಮದಾಗುತ್ತಾ ಹೋದವು. ಆ ಕಲ್ಲಿನ ಬೆಟ್ಟದ ನೆತ್ತಿಯ ಮೇಲೆ ಕಾಲಿಟ್ಟಾಗ ಭಯದಲ್ಲಿ ಆನಂದ ಹೇಗಿರುತ್ತದೆೆ¤ ಎಂದು ತಿಳಿಯಿತು. ಆಯಾಸದಿಂದ ದಣಿದು 3,930ಅಡಿ ಎತ್ತರ ಹತ್ತಿಬಂದ ಎಲ್ಲರಿಗೂ ಪ್ರಕೃತಿ ಮಾತೆ ತಣ್ಣನೆಯ ಗಾಳಿಯ ಮೂಲಕ ಸಿಹಿ ಅಪ್ಪುಗೆಯನ್ನು ನೀಡುತ್ತಿದ್ದಾಳೇನೋ ಎಂಬ ಅನುಭೂತಿ. ಸಂತಸದಲ್ಲಿ ಕುಣಿದಾಡುತ್ತಾ ಆ ತಾಯಿಯ ಮಡಿಲಲ್ಲಿ ಮಲಗಿದರೆ ಯಾವುದೋ ಒಂದು ಕನಸಿನ ಲೋಕದಲ್ಲಿ ಮಲಗಿದ ಭಾವ.
ಅಂದಹಾಗೆ ಕೆಳಗಿಂದ ನೋಡುವಾಗ ಬೆಟ್ಟ ನಿರ್ಜೀವವಾಗಿ ಬಿದ್ದಿದ್ದ ಆನೆಯೊಂದು ಮಲಗಿದಂತೆ ಕಾಣಿಸುತ್ತದೆ. ಆದರೆ ಆ ಆನೆಯ ಹೆಗಲೇರಿ ಕೆಳಗಿಳಿದು ಬಂದಾಗ ಅನುಭವಗಳ ರಾಶಿಯನ್ನು ತುಂಬಿಕೊಂಡಿದ್ದ ಗಜೇಂದ್ರನಂತೆ ಬಾಸವಾಗುತ್ತದೆ. ಮಧುಗಿರಿ ಬೆಟ್ಟವನ್ನು ಒಮ್ಮೆ ಹತ್ತಿ ಬಂದ ಸಂಭ್ರಮ ಮನದಾಳದಲ್ಲಿ ಮನೆಮಾಡಿ ನಿಂತಿತ್ತು.
– ಮೇಘಾ ಆರ್. ಸಾನಾಡಿ