ಶಹಾಬಾದ: ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ ಮಹತ್ವದ ಸ್ಥಾನ ಹೊಂದಿ, ಕವಿರಾಜ ಮಾರ್ಗ ಅತಿ ಮಹತ್ವದ ಕೃತಿಯಾಗಿ, ಕನ್ನಡ ನಾಡು ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ ಎಂದು ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ನಗರದ ಸುಗೂರೇಶ್ವರ ಜ್ಞಾನ ಜ್ಯೋತಿ ಕೋಚಿಂಗ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಯಾವ ಭಾಷೆಯಲ್ಲಿಯೂ ಇಷ್ಟೊಂದು ವಿಫುಲವಾದ ಸಾಹಿತ್ಯಿಕ ಕೃಷಿಯಾಗಿಲ್ಲ. ಆರಂಭದಲ್ಲಿ ಆದಿಕವಿ ಪಂಪ, ಜನ್ನ, ರನ್ನರಿಂದ ಸಾಹಿತ್ಯ ಬೆಳೆದು ಬಂದು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು ಎಂದರು. ನಿವೃತ್ತ ಪ್ರಾಧ್ಯಾಪಕ ವಿ.ಆಯ್.ಹಿರೇಮಠ ಮಾತನಾಡಿ, ನಮ್ಮ ಭಾಷೆ ಕಟ್ಟುವ ಕೆಲಸವನ್ನು ಮಕ್ಕಳು ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಪ್ರೇರಕ ಶಕ್ತಿಯಾಗಿ ನಿಂತಿದೆ ಎಂದರು.
ಉಪನ್ಯಾಸಕರಾದ ಡಿ.ವ್ಹಿ. ಅಂಗಡಿ ಮಾತನಾಡಿ, ನಾವು ನಮ್ಮ ಮಕ್ಕಳನ್ನು ಮಾತೃ ಭಾಷೆ ಕನ್ನಡದಲ್ಲೇ ಓದಿಸುವುದರ ಮೂಲಕ ಕನ್ನಡ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು.
ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್ ಧನ್ನಾ ಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಮರಲಿಂಗ ಯಾದಗಿರಿ, ಸಂಚಾಲಕ ಹಣಮಂತ ಕುಂಬಾರ, ಶಿಕ್ಷಕ ವಿರೇಶಮಠ ಇದ್ದರು. ಸಿದ್ಧಯ್ಯ ಮಠ ಅಧ್ಯಕ್ಷತೆ ವಹಿಸಿದ್ದರು. ಶಶಿಕಾಂತ ಮಡಿವಾಳ ಪ್ರಾಸ್ತಾವಿಕ ನುಡಿದರು, ಮೋಹನ ಮಾನೆ ನಿರೂಪಿಸಿದರು, ವೀರಗಂಗಾಧರ ಹಿರೇಮಠ ಸ್ವಾಗತಿಸಿದರು, ಗುರು ಪ್ರಸಾದ ವಂದಿಸಿದರು.