ಬೆಂಗಳೂರು: ಭಾರತೀಯ ಜನತಾ ಪಕ್ಷದ ಸ್ಥಾಪನ ದಿನಾಚರಣೆಯ ಅಂಗವಾಗಿ ಬುಧವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ರಾಜ್ಯದ ಉನ್ನತ ಶಿಕ್ಷಣ, ಐ.ಟಿ. ಮತ್ತು ಬಿ.ಟಿ. ಸಚಿವರಾದ ಡಾ| ಸಿ.ಎನ್. ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಇತರ ಗಣ್ಯರ ನೇತೃತ್ವದಲ್ಲಿ ಮಲ್ಲೇಶ್ವರದ ಕಾಡುಮಲ್ಲೇ ಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಪಕ್ಷದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಈ ಸಚಿವರು ಮತ್ತು ಶಾಸಕರು ಅಲ್ಲಿಂದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಮೆರವಣಿಗೆ ಮೂಲಕ ತೆರಳಿದರು.
ತದನಂತರ ಧ್ವಜಾರೋಹಣ ನೆರವೇರಿಸಲಾಯಿತು. ಭಾರತಮಾತೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಗಣ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅನಂತರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎಲ್ ಇಡಿ ಪರದೆಯಲ್ಲಿ ವೀಕ್ಷಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, 1951ರಲ್ಲಿ ರಾಷ್ಟ್ರಹಿತಕ್ಕೆ ಪೂರಕವಾದ ರಾಜಕೀಯ ಪಕ್ಷದ ಅಗತ್ಯವಿದೆ ಎಂಬ ಚಿಂತನೆಯೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ 10 ಜನ ಸ್ವಯಂಸೇವಕರನ್ನು ಒಳಗೊಂಡ ಜನಸಂಘವು ಶ್ಯಾಮಪ್ರಸಾದ್ ಮುಖರ್ಜಿ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಆಗ ಕೇವಲ 10 ಜನ ಸದಸ್ಯರಿದ್ದರು.
ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ದೇಶವ್ಯಾಪಿ ಪ್ರಭಾವ ಬೀರುವ ಸಾಮರ್ಥ್ಯ ಇರಲಿಲ್ಲ. ದೇಶನಿಷ್ಠೆ, ಸತತ ಪರಿಶ್ರಮದ ಮೂಲಕ ಇವತ್ತು ಜಗತ್ತಿನ ಅತೀ ಹೆಚ್ಚು 18 ಕೋಟಿ ಸದಸ್ಯತ್ವ ಹೊಂದಿದ, ಅತೀ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಪಡೆದ, ಅತೀ ಹೆಚ್ಚು ಸಂಸದರು, ಅತೀ ಹೆಚ್ಚು ಶಾಸಕರಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ನುಡಿದರು.
ಇದನ್ನೂ ಓದಿ:ರಾಜ್ಯದ 75 ಕೆರೆ ಕಟ್ಟೆಗಳನ್ನು ಅಭಿವೃದ್ಧಿಗೊಳಿಸಲು ಪ್ರಧಾನಿ ಸೂಚನೆ: ಸಿಎಂ
ಅತೀ ಹೆಚ್ಚು ಮಹಿಳಾ ಶಾಸಕರು, ಅತೀ ಹೆಚ್ಚು ದಲಿತ ಶಾಸಕರು ಮತ್ತು ಅತ್ಯಂತ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರನ್ನು ಹೊಂದಿದ ಹೆಮ್ಮೆ ನಮ್ಮ ಪಕ್ಷದ್ದು ಎಂದು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರದಲ್ಲಿ ಅಗ್ರಗಣ್ಯರಾಗಿ¨ªಾರೆ. ಜಗತ್ತಿನ ಅತ್ಯಂತ ಜನಪ್ರಿಯ ನಾಯಕತ್ವವನ್ನು ಬಿಜೆಪಿ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸಾಂಸ್ಕೃತಿಕ ರಾಷ್ಟ್ರೀಯತೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸರ್ವಧರ್ಮ ಸಮಭಾವ, ಏಕಾತ್ಮ ಮಾನವ ದರ್ಶನ ಹಾಗೂ ಮೌಲ್ಯಾಧಾರಿತ ರಾಜಕೀಯ ನೀತಿ ಜತೆ ಪಕ್ಷ ಕೆಲಸ ಮಾಡುತ್ತಿದೆ. ಕಾಲಕಾಲಕ್ಕೆ ನಿರಂತರವಾಗಿ ಆಂತರಿಕ ಚುನಾವಣೆ ನಡೆಸುತ್ತ ಪಕ್ಷದೊಳಗೂ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಏಕೈಕ ಪಕ್ಷ ಬಿಜೆಪಿ. ಕೆಲವು ಪಕ್ಷಗಳು ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತಿಳಿಸುತ್ತ ಚುನಾಯಿತ ಪ್ರಧಾನಿಯನ್ನೂ ಟೀಕಿಸುತ್ತವೆ. ಆದರೆ ಆ ಪಕ್ಷದೊಳಗೆ ಪ್ರಜಾಪ್ರಭುತ್ವ ಇಲ್ಲ ಎಂದವರು ಟೀಕಿಸಿದರು.