Advertisement

ವಿಶ್ವದ ಅತೀದೊಡ್ಡ ‘ಸಯಾಮಿ’ವಿಮಾನ ಅಮೆರಿಕಾದಲ್ಲಿ ಯಶಸ್ವೀ ಹಾರಾಟ

02:39 PM Apr 15, 2019 | Hari Prasad |

ಲಾಸ್‌ ಏಂಜಲೀಸ್‌: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲ್ಪಟ್ಟಿರುವ ‘ರೋಕ್‌’ ಇಂದು ಕ್ಯಾಲಿಫೋರ್ನಿಯಾದ ಮೊಝಾವೇ ಮರುಭೂಮಿಯಲ್ಲಿ ತನ್ನ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು.

Advertisement

ಮೈಕ್ರೋಸಾಫ್ಟ್ ನ ಮಾಜೀ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್‌ ಅಲೇನ್‌ ಅವರ ಸ್ಟ್ರಾಟೋ ಲಾಂಚ್‌ ಸಿಸ್ಟಮ್ಸ್‌ ಕಾರ್ಪ್‌ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ದೈತ್ಯ ವಿಮಾನವು ಮುಂಬರುವ ದಿನಗಳಲ್ಲಿ ರಾಕೆಟ್‌ ಗಳನ್ನು ಗುರಿಸೇರಿಸಲು ಮತ್ತು ಬಾಹ್ಯಾಕಾಶ ವಾಹನಗಳನ್ನು ಕಕ್ಷೆಗೆ ಸೇರಿಸುವ ಮಹದುದ್ದೇಶಕ್ಕೆ ಬಳಕೆಯಾಗುವ ವಿಶ್ವಾಸವನ್ನು ಇದನ್ನು ನಿರ್ಮಿಸಿರುವ ಕಂಪೆನಿಯು ವ್ಯಕ್ತಪಡಿಸಿದೆ.

ಈ ಶ್ವೇತ ವಿಮಾನದ ರೆಕ್ಕೆಗಳ ಗಾತ್ರ ಅಮೆರಿಕಾದ ಒಂದು ಫ‌ುಟ್ಬಾಲ್‌ ಮೈದಾನದ ವಿಸ್ತೀರ್ಣಕ್ಕೆ ಸಮವಾಗಿದೆ. ಇದು ಸಯಾಮಿ ಮಾದರಿಯ ವಿಮಾನವಾಗಿದ್ದು ಇದರಲ್ಲಿ ಆರು ಎಂಜಿನ್‌ ಗಳು ಕಾರ್ಯನಿರ್ವಹಿಸುತ್ತವೆ. ಭವಿಷ್ಯದ ಬಾಹ್ಯಕಾಶ ವಿಜ್ಞಾನ ಕ್ಷೇತ್ರದಲ್ಲಿ ‘ಗೇಮ್‌ ಚೇಂಜರ್‌’ ಎಂದೇ ಬಿಂಬಿತವಾಗಿರುವ ಈ ಸಯಾಮಿ ಮಿಮಾನ ‘ರೋಕ್‌’ ಇಂದು ತನ್ನ ಪರೀಕ್ಷಾರ್ಥ ಹಾರಾಟದಲ್ಲಿ ಸುಮಾರು ಎರಡು ಗಂಟೆಗಳವರೆಗೆ ಆಗಸದಲ್ಲಿ ಹಾರಾಡುತ್ತಿತ್ತು ಮತ್ತು ಮೊಝಾವೆಯಲ್ಲಿರುವ ಏರ್‌ ಆಂಡ್‌ ಸ್ಪೇಸ್‌ ನಿಲ್ದಾಣದಲ್ಲಿ ಯಶಸ್ವಿಯಾಗಿ ಅವತರಣಗೊಂಡಿತು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ದೈತ್ಯ ಸಯಾಮಿ ವಿಮಾನದ ಹಾರಾಟಕ್ಕೆ ಸಾಕ್ಷಿಯಾಗಿದ್ದ ನೂರಾರು ಜನರು ಹರ್ಷೋದ್ಘಾರದೊಂದಿಗೆ ಈ ವಿಮಾನವನ್ನು ಸ್ವಾಗತಿಸಿದರು.

ಸ್ಟ್ರಾಟೋ ಲಾಂಚ್‌ ಕಂಪೆನಿಯ ಸಂಸ್ಥಾಪಕ ಪೌಲ್‌ ಅಲೆನ್‌ ಅವರ ಕನಸಿನ ಕೂಸಾಗಿರುವ ಈ ‘ಸಯಾಮಿ’ ವಿಮಾನದ ನಿರ್ಮಾಣದ ರೂಪುರೇಷೆಯನ್ನು ಪೌಲ್‌ ಅವರೇ ರೂಪಿಸಿದ್ದರು ಆದರೆ ಈ ವಿಮಾನ ಮಾದರಿ ನಿರ್ಮಾಣ ಹಂತದಲ್ಲಿರುವಾಗಲೇ ಅಂದರೆ 2018 ಅಕ್ಟೋಬರ್‌ ತಿಂಗಳಿನಲ್ಲಿ ಪೌಲ್‌ ಅವರು ಕ್ಯಾನ್ಸರ್‌ ಮಾರಿಗೆ ಬಲಿಯಾಗಿದ್ದರು. ಪೌಲ್‌ ಅವರಿಂದ 2011ರಲ್ಲಿ ಸ್ಥಾಪಿಸಲ್ಪಟ್ಟ ಸ್ಟ್ರಾಟೋ ಲಾಂಚ್‌ ಕಂಪೆನಿಯು ತನ್ನ ಈ ಹೊಸ ಸಯಾಮಿ ರೋಕ್‌ ವಿಮಾನದ ಮೂಲಕ 2020ರ ಒಳಗೆ ಮೊದಲ ರಾಕೆಟ್‌ ಅನ್ನು ಅಂತರಿಕ್ಷಕ್ಕೆ ಉಡಾಯಿಸುವ ಗುರಿಯನ್ನು ಹೊಂದಿದೆ.

5ಲಕ್ಷ ಪೌಂಡ್‌ ವರೆಗಿನ ತೂಕದ ರಾಕೆಟ್‌ ಗಳು ಮತ್ತು ಇತರೇ ಬಾಹ್ಯಾಕಾಶ ವಾಹನಗಳನ್ನು 35 ಸಾವಿರ ಅಡಿ ಅಂತರದ ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದೆ. ರೋಕ್‌ ತನ್ನ ಪ್ರಯೋಗಾರ್ಥ ಹಾರಾಟ ಸಂದರ್ಭದಲ್ಲಿ ಭೂಮಿಯಿಂದ 17,000 ಅಡಿಗಳವರೆಗೆ ಏರಿ ಗಂಟೆಗೆ ಗರಿಷ್ಠ 189 ಮೈಲು ವೇಗದಲ್ಲಿ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ರೋಕ್‌ ನಿರ್ಮಾತೃ ಕಂಪೆನಿಯ ಪ್ರಕಾರ ಭವಿಷ್ಯದಲ್ಲಿ ರಾಕೆಟ್‌ ಹಾಗೂ ಉಪಗ್ರಹಗಳ ಉಡಾವಣೆ ‘ಒಂದು ವಿಮಾನ ಬುಕ್‌ ಮಾಡಿದಷ್ಟೇ ಸುಲಭವಾಗಲಿದೆ.’

Advertisement

Udayavani is now on Telegram. Click here to join our channel and stay updated with the latest news.

Next