Advertisement

ವಿಶ್ವಕಪ್‌ ಹಾಕಿ ಸೆಮಿ:ಆಸೀಸ್‌ಗೆ ನೆದರ್ಲೆಂಡ್‌,ಬೆಲ್ಜಿಯಂಗೆ ಆಂಗ್ಲರು

09:53 AM Dec 15, 2018 | |

ಭುವನೇಶ್ವರ: ಆತಿಥೇಯ ಭಾರತದ ಹೋರಾಟ ಕ್ವಾರ್ಟರ್‌ ಫೈನಲ್‌ನಲ್ಲೇ ಕೊನೆಗೊಂಡಿದ್ದರಿಂದ ಸಹಜವಾಗಿಯೇ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಜೋಶ್‌ ಒಮ್ಮೆಲೇ ಕಡಿಮೆಯಾಗಿದೆ. ಇಂಥ ಸನ್ನಿವೇಶದಲ್ಲೇ ಕಣದಲ್ಲಿ ಉಳಿದಿರುವ 4 ತಂಡಗಳು ಶನಿವಾರ ಸೆಮಿಫೈನಲ್‌ ಸೆಣಸಾಟಕ್ಕೆ ಅಣಿಯಾಗುತ್ತಿವೆ.

Advertisement

ಹ್ಯಾಟ್ರಿಕ್‌ ಪ್ರಶಸ್ತಿಯ ಹಾದಿಯಲ್ಲಿರುವ ವಿಶ್ವದ ನಂ.1 ತಂಡವಾಗಿರುವ ಆಸ್ಟ್ರೇಲಿಯಕ್ಕೆ ನೆದರ್ಲೆಂಡ್‌ ಸವಾಲು ಎದುರಾಗಲಿದೆ. ಇನ್ನೊಂದು ಉಪಾಂತ್ಯದಲ್ಲಿ ಬೆಲ್ಜಿಯಂ-ಇಂಗ್ಲೆಂಡ್‌ ಮುಖಾಮುಖೀಯಾಗಲಿವೆ. 

3 ಬಾರಿಯ ಚಾಂಪಿಯನ್‌ ನೆದರ್ಲೆಂಡ್‌ ಗುರುವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಆತಿಥೇಯ ಭಾರತವನ್ನು ಉರುಳಿಸಿದ ಹುಮ್ಮಸ್ಸಿನಲ್ಲಿದೆ. 20 ವರ್ಷಗಳ ಬಳಿಕ ಪ್ರಶಸ್ತಿಗೆ ಮುತ್ತಿಕ್ಕಲು ಹವಣಿಸುತ್ತಿದೆ. 

2013ರ ಬಳಿಕ ಆಸ್ಟ್ರೇಲಿಯ-ನೆದರ್ಲೆಂಡ್‌ 11 ಸಲ ಪರಸ್ಪರ ಎದುರಾಗಿದ್ದು, ಕಾಂಗರೂ ಪಡೆ ಐದರಲ್ಲಿ ಗೆದ್ದಿದೆ. ಡಚ್ಚರು 4 ಸಲ ಜಯಿಸಿದ್ದಾರೆ. 2 ಪಂದ್ಯಗಳು ಡ್ರಾಗೊಂಡಿವೆ. ಕೂಟದಲ್ಲಿ ನಿಧಾನ ಗತಿಯ ಆರಂಭ ಪಡೆದ ಆಸ್ಟ್ರೇಲಿಯ, ಬಳಿಕ ತುಂಬು ವಿಶ್ವಾಸದಲ್ಲಿ ಹೋರಾಡುತ್ತಲೇ ಬಂದಿದೆ. ಐರ್ಲೆಂಡ್‌ ವಿರುದ್ಧ 2-1 ಗೆಲುವು ಒಲಿಸಿಕೊಂಡ ಅನಂತರ ಇಂಗ್ಲೆಂಡ್‌ (3-0) ಮತ್ತು ಚೀನ (11-0) ವಿರುದ್ಧ ಭರ್ಜರಿ ಮೇಲುಗೈ ಸಾಧಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ಗೆ 3-0 ಗೋಲುಗಳಿಂದ ಆಘಾತವಿಕ್ಕಿತು.

ಇನ್ನೊಂದೆಡೆ ನೆದರ್ಲೆಂಡ್‌ನ‌ದ್ದು ಅಬ್ಬರದ ಆರಂಭವಾಗಿತ್ತು. ಮಲೇಶ್ಯವನ್ನು 7-0 ಅಂತರದಿಂದ ಮಣಿಸಿದ ಬಳಿಕ ಜರ್ಮನಿಗೆ 1-4ರಿಂದ ಶರಣಾಯಿತು. ಬಳಿಕ ಪಾಕಿಸ್ಥಾನವನ್ನು 5-1 ಗೋಲುಗಳಿಂದ ಹಿಮ್ಮೆಟ್ಟಿಸಿ ಲಯ ಕಂಡುಕೊಂಡಿತು. ಇವೆಲ್ಲಕ್ಕಿಂತ ಮಿಗಿಲಾದದ್ದು ಭಾರತದ ವಿರುದ್ಧ ಮೊಳಗಿಸಿದ ಜಯಭೇರಿ.

Advertisement

ಡಚ್ಚರಿಗೆ ಸೇಡಿನ ಪಂದ್ಯ

ನೆದರ್ಲೆಂಡ್‌ ಪಾಲಿಗೆ ಇದು ಸೇಡಿನ ಪಂದ್ಯ. 4 ವರ್ಷಗಳ ಹಿಂದೆ ತವರಿನ ಹೇಗ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ 1-6 ಅಂತರದಿಂದ ಶರಣಾಗಿ ಕಪ್‌ ಕಳೆದುಕೊಂಡ ನೋವು ಡಚ್ಚರನ್ನು ಈಗಲೂ ಕಾಡುತ್ತಿದೆ. ಅನಂತರದ 4 ವರ್ಷಗಳಲ್ಲಿ ನೆದರ್ಲೆಂಡ್‌ ಆಟದಲ್ಲಿ ಬಹಳಷ್ಟು ಪ್ರಗತಿಯಾಗಿದೆ. ಬಿಲ್ಲಿ ಬೆಕರ್‌, ರಾಬರ್ಟ್‌ ಕೆಂಪರ್‌ಮ್ಯಾನ್‌, ವೆಲಂಟೈನ್‌ ವೆರ್ಗ ಮೊದಲಾದ ಕ್ವಾಲಿಟಿ ಆಟಗಾರರನ್ನು ಹೊಂದಿದೆ. ಹೀಗಾಗಿ ಇದು ಆಸ್ಟ್ರೇಲಿಯ ಪಾಲಿಗೆ ಭಾರೀ ಸವಾಲಿನ ಪಂದ್ಯ ಎಂಬುದರಲ್ಲಿ ಅನುಮಾನವಿಲ್ಲ.

ಬೆಲ್ಜಿಯಂ-ಇಂಗ್ಲೆಂಡ್‌ ಮೇಲಾಟ
ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ತಂಡವಾದ ಬೆಲ್ಜಿಯಂ ಮೊದಲ ಸಲ ವಿಶ್ವಕಪ್‌ ಎತ್ತಿ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ. ಇಂಗ್ಲೆಂಡ್‌ ಕೂಡ ಈವರೆಗೆ ವಿಶ್ವ ಚಾಂಪಿಯನ್‌ ಹೆಗ್ಗಳಿಕೆಯಿಂದ ದೂರವೇ ಉಳಿದಿದೆ. 1986ರ ತವರಿನ ಲಂಡನ್‌ ಕೂಟದಲ್ಲಿ ಫೈನಲ್‌ ಪ್ರವೇಶಿಸಿತಾದರೂ ಅಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next