ಬೆಳ್ತಂಗಡಿ: 8ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಿಂದ ಧರ್ಮಸ್ಥಳ ಅಮೃವರ್ಶಿಣಿ ಸಭಾಭವನದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.
ಬೆಳಗ್ಗೆ 7 ರಿಂದ 7-45ರ ತನಕ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಯೋಗದಲ್ಲಿ ಸಾಧನೆಯನ್ನು ಮಾಡಿದವರಿಗೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ಯೋಗರತ್ನ ಪ್ರಶಸ್ತಿ’ಯನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿಜಿಯವರು ಈ ಬಾರಿ ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದು ಈ ಪ್ರಯುಕ್ತ ಕಾಲೇಜಿನ 35 ವಿದ್ಯಾರ್ಥಿಗಳು ಹಾಗೂ ಆಯ್ದ ಅಧ್ಯಾಪಕರಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದೆ.
ಇದನ್ನೂ ಓದಿ:ಯೋಗದಿಂದ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ: ಮೈಸೂರಿನಲ್ಲಿ ಪ್ರಧಾನಿ ಮೋದಿ
ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗಳು ಹಾಗೂ 10 ಜಿಲ್ಲೆಗಳಲ್ಲಿರುವ ಸರಕಾರಿ ಜಿಲ್ಲಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಘಟಕಗಳಲ್ಲಿ ಇಂದು ಜೂನ್ 21ರಂದು ಯೋಗ ದಿನವನ್ನು ನಡೆಸಲಾಗಿದೆ. ಸುಮಾರು 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ಪರಮಾನಂದ ಓಂ ಜೀ ಮಹಾರಾಜ್, ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಸ್ಕೂಲ್ ಪ್ರಾಂಶುಪಾಲ ಫಾ| ಥೋಮಸ್ ಬಿಜಿಲಿ ಒಐಸಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಉಪಕಾರ್ಯದರ್ಶಿ ನಸೀಮಾ ಬಿ.ಐ., ಎಸ್.ಡಿ.ಎಂ.ಸಿ.ಎನ್.ವೈ.ಎಸ್. ಎಚ್.ನ ಡೀನ್ ಶಿವಪ್ರಸಾದ್, ಶ್ರೀ ಕ್ಷೇ ಧ.ಮಂ. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಯೋಗನೀರ್ದೇಶಕ ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.
ಉಜಿರೆ ಎಸ್.ಡಿ.ಎಂ. ಸಿ.ಎನ್.ವೈ.ಎಸ್. ಎಚ್., ಪಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಸಿಬಂದಿ ಜೋಸ್ನಾ, ವಿದ್ಯಾರ್ಥಿ ಅನನ್ಯಾ ಕಾರ್ಯಕ್ರಮ ನಿರೂಪಿಸಿದರು. ಡಾ| ವಿಶಾಕಾ ಯೋಗ ತರಬೇತಿ ನಡೆಸಿಕೊಟ್ಟರು.