Advertisement

ವಿಶ್ವ ಯೋಗ ಸ್ಪರ್ಧೆ: ಭಾರತಕ್ಕೆ ಕೀರ್ತಿ ತಂದ ಕುಂದಾಪುರದ ಕುಶ

11:01 AM Jan 29, 2018 | |

ಕುಂದಾಪುರ: ಮಲೇಶ್ಯದ ಕೌಲಾಲಂಪುರದಲ್ಲಿ ರವಿವಾರ ನಡೆದ 6ನೇ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಕುಂದಾಪುರದ
ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿ, ಸದ್ಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿರುವ ಮರವಂತೆಯ ಕುಶ ಪೂಜಾರಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. 

Advertisement

ಭಾರತದಿಂದ ಆರು ಮಂದಿ ಪುರುಷರು ಹಾಗೂ ಆರು ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಮರವಂತೆಯ ಕುಶ ಪೂಜಾರಿ ಮಾತ್ರ ಪ್ರಶಸ್ತಿ ಗಳಿಸುವಲ್ಲಿ ಯಶ ಕಂಡಿದ್ದಾರೆ. ಒಟ್ಟಾರೆ 20 ದೇಶಗಳ ಸ್ಪರ್ಧಿಗಳು ಪಾಲ್ಗೊಂಡ ಈ ಪ್ರತಿಷ್ಠಿತ ಯೋಗ ಸ್ಪರ್ಧೆಯಲ್ಲಿ ಕುಶ ಅವರು ಎರಡು ವಿಭಾಗಗಳಲ್ಲಿ ತೃತೀಯ ಸ್ಥಾನ ಗಳಿಸುವುದರೊಂದಿಗೆ ಭಾರತಕ್ಕೆ ಮಾತ್ರವಲ್ಲದೆ ಕರ್ನಾಟಕಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರು ವಿ.ವಿ.ಯ ಯೋಗ ವಿಜ್ಞಾನ ಎಂಎಸ್ಸಿ ವಿದ್ಯಾರ್ಥಿನಿ ಶಿಗ್ಗಾಂವಿ ಮೂಲದ ಅಶ್ವಿ‌ನಿ ಕೂಡ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಚಿಕ್ಕಂದಿನಲ್ಲೇ ಯೋಗಾಸಕ್ತಿ: ಕುಶ ಪೂಜಾರಿ ಅವರು ಮರವಂತೆಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಶಿಕ್ಷಕರಾದ ಎಂ.ಎ. ಲಂಬಾಣಿ ಅವರಿಂದ ಪ್ರೇರಿತರಾಗಿ ಯೋಗದ ಕುರಿತು ಆಸಕ್ತಿ ಬೆಳೆಸಿಕೊಂಡರು. ಹೈಸ್ಕೂಲ್‌ ಹಾಗೂ ಪಿಯುಸಿಯಲ್ಲಿದ್ದಾಗ ರಾಜ್ಯ, ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿದ್ದಾಗ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿ, 3 ಬಾರಿ ಅಖೀಲ ಭಾರತ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದರು. ಅಂತರ್‌ ಕಾಲೇಜು ಮಟ್ಟದ ಯೋಗಸ್ಪರ್ಧೆಯಲ್ಲಿ 3 ಬಾರಿ ವೈಯಕ್ತಿಕ ಚಾಂಪಿಯನ್‌ ಆಗಿದ್ದರು.

ಆಯ್ಕೆ ಪ್ರಕ್ರಿಯೆ ಹೇಗೆ?:  ಸ್ಪರ್ಧೆಗೆ ಮೊದಲು ರಾಷ್ಟ್ರಮಟ್ಟಕ್ಕೆ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ನಾಲ್ವರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟಾರೆ ಭಾರತವನ್ನು ಪ್ರತಿನಿಧಿಸುವ 6 ಮಂದಿಯಲ್ಲಿ ಕುಶ ಅವರು 4ನೆಯವರಾಗಿ ಆಯ್ಕೆಯಾಗಿದ್ದರು. ಮಲೇಶ್ಯದಲ್ಲಿ ನಡೆದ ಈ ಬಾರಿಯ ಅಂತಾರಾಷ್ಟ್ರೀಯ ಯೋಗಸ್ಪರ್ಧೆಯಲ್ಲಿ ಒಟ್ಟು 3 ವಿಭಾಗಗಳ ಪೈಕಿ 2ರಲ್ಲಿ ಕುಶ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿಯೆಟ್ನಾಂ ಮತ್ತು ಚೀನದ ಸ್ಪರ್ಧಿಗಳು ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ. ಜ. 26ರಿಂದ 28ರ ವರೆಗೆ ಈ ಸ್ಪರ್ಧೆ ನಡೆಯಿತು.

ಕುಟುಂಬದ ಪರಿಚಯ: ಕುಶ ಅವರ ತಂದೆ ರಾಮಚಂದ್ರ ಪೂಜಾರಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ನೀಲು ಅವರು ಗೃಹಿಣಿಯಾಗಿದ್ದಾರೆ. ಕುಶ ಮತ್ತು ಅವರ ಸಹೋದರ ಲವ ಅವಳಿಗಳು. ಸಹೋದರಿ ಜ್ಯೋತಿ ಶಿಕ್ಷಕಿಯಾಗಿದ್ದಾರೆ. ತನಗೆ ಸಹಕಾರ ನೀಡಿದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಸಂಚಾಲಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಪ್ರಾಂಶುಪಾಲ ದೋಮ ಚಂದ್ರಶೇಖರ್‌, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್‌ ಗೌಡ, ಪ್ರಾಧ್ಯಾಪಕರು, ಮಂಗಳೂರು ವಿ.ವಿ.ಯ ಉಪನ್ಯಾಸಕರಿಗೆ ಕುಶ ಅವರು ವಂದನೆ ಸಲ್ಲಿಸಿದ್ದಾರೆ.

Advertisement

ತುಂಬಾ ಖುಷಿಯಾಗುತ್ತಿದೆ…
ವಿಶ್ವಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವುದೇ ಒಂದು ಹೆಮ್ಮೆಯ ವಿಚಾರ. ಅಲ್ಲಿ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಖುಷಿಯಾಗಿದೆ. ತುಂಬಾ ಎಕ್ಸೈಟ್‌ ಆಗಿದ್ದೇನೆ. ಸ್ಪರ್ಧೆಯುದ್ದಕ್ಕೂ ಕಠಿನ ಸವಾಲುಗಳು ಎದುರಾಗಿದ್ದವು. ನನ್ನ ಈ ಯಶಸ್ಸಿಗೆ ಸಹಕರಿಸಿದ ಮೊದಲ ಗುರು ಎಂ.ವಿ. ಲಂಬಾಣಿ, ಬೆಂಗಳೂರಿನ ನಿರಂಜನ್‌ ಮೂರ್ತಿ, ತಂದೆ- ತಾಯಿ, ಅಕ್ಕ-ಅಣ್ಣ, ಆರ್ಥಿಕ ಸಹಾಯ ನೀಡಿದ ಎಲ್ಲ ಊರವರಿಗೆ ನಾನು ಆಭಾರಿಯಾಗಿದ್ದೇನೆ.
ಕುಶ ಪೂಜಾರಿ, ಪ್ರಶಸ್ತಿ ವಿಜೇತ ಯೋಗಪಟು 

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next