Advertisement

ಭಾರತವನ್ನು ಸೋಲಿಸಲು ವಿಶ್ವ ಇಲೆವೆನ್‌ನಿಂದ ಮಾತ್ರ ಸಾಧ್ಯ!

11:45 PM Oct 26, 2019 | Team Udayavani |

ಹೊಸದಿಲ್ಲಿ: ಭಾರತವೀಗ ತವರಿನಲ್ಲಿ ಸತತ 11 ಟೆಸ್ಟ್‌ ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿರುವುದು ಇತಿಹಾಸ. ಜಿಂಬಾಬ್ವೆ, ಅಫ್ಘಾನಿಸ್ಥಾನಂಥ ಸಾಮಾನ್ಯ ತಂಡಗಳಿರಲಿ, ಬಲಿಷ್ಠ ಪಡೆಯೆಂದೇ ಗುರುತಿಸಲ್ಪಡುತ್ತಿದ್ದ ದಕ್ಷಿಣ ಆಫ್ರಿಕಾ ಕೂಡ ಮೊನ್ನೆ ವೈಟ್‌ವಾಶ್‌ ಅನು ಭವಿಸಿಕೊಂಡು ತವರಿಗೆ ಮರಳಿತು. ಭಾರತವನ್ನು ಅವರದೇ ಅಂಗಳದಲ್ಲಿ ಮಣಿಸುವುದು, ಸರಣಿ ಗೆಲ್ಲುವುದು ಸುಲಭವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು.

Advertisement

ಭಾರತ ಕೊನೆಯ ಸಲ ತವರಿನಲ್ಲಿ ಟೆಸ್ಟ್‌ ಸರಣಿ ಸೋತದ್ದು 2012-13ರಷ್ಟು ಹಿಂದೆ, ಇಂಗ್ಲೆಂಡ್‌ ವಿರುದ್ಧ. ಅನಂತರ ಆಡಿದ ಎಲ್ಲ 11 ಟೆಸ್ಟ್‌ ಸರಣಿಗಳಲ್ಲೂ ಟೀಮ್‌ ಇಂಡಿಯಾ ಜಯಭೇರಿ ಮೊಳಗಿಸಿದೆ. ಈ ಅವಧಿಯಲ್ಲಿ ಆಡಿದ 32 ಟೆಸ್ಟ್‌ ಪಂದ್ಯಗಳಲ್ಲಿ 26 ಗೆಲುವು ಕಂಡಿದೆ. 5 ಡ್ರಾ ಆಗಿದೆ. ಒಂದರಲ್ಲಷ್ಟೇ ಸೋತಿದೆ.

ಈ 26ರಲ್ಲಿ 10 ಗೆಲುವು ಇನ್ನಿಂಗ್ಸ್‌ ಅಂತರದ್ದಾಗಿದೆ. 150 ಪ್ಲಸ್‌ ರನ್‌ ಅಂತರದಲ್ಲಿ 7 ಗೆಲುವು ಸಾಧಿಸಿದೆ. 8 ಪ್ಲಸ್‌ ವಿಕೆಟ್‌ ಅಂತರದ 4 ಜಯ ಒಲಿದಿದೆ. ಇದು ತವರಿನಲ್ಲಿ ಭಾರತದ ಟೆಸ್ಟ್‌ ಪ್ರಭುತ್ವಕ್ಕೆ ಸಾಕ್ಷಿ. ಇಂಗ್ಲೆಂಡ್‌, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಬಾಂಗ್ಲಾದೇಶ… ಎಲ್ಲ ತಂಡಗಳೂ ಭಾರತದ ಕೈಯಲ್ಲಿ ಹೊಡೆತ ತಿಂದೇ ಹೋಗಿವೆ. ಹಾಗಾದರೆ ಭಾರತವನ್ನು ಮಣಿಸುವ ಸಾಮರ್ಥ್ಯ ಹೊಂದಿರುವ ತಂಡವಾದರೂ ಯಾವುದು? ಬಹುಶಃ ಇದಕ್ಕೆ ಉತ್ತರವಿಲ್ಲ.

ವಿಶ್ವ ಇಲೆವೆನ್‌ ಪರಿಕಲ್ಪನೆ
ವಿಶ್ವದ ಎಲ್ಲ ತಂಡಗಳಿಗೂ ಭಾರತದಲ್ಲಿ ಗೆಲುವು ಮರೀಚಿಕೆಯಾಗಿರುವ ಈ ಹೊತ್ತಿನಲ್ಲಿ “ಕ್ರಿಕೆಟ್‌ ವೆಬ್‌ಸೈಟ್‌’ ಒಂದು ವಿಭಿನ್ನ ರೀತಿಯಲ್ಲಿ ಆಲೋಚಿಸಿದೆ. ಹೊಸ ಯೋಜನೆಯೊಂದನ್ನು ರೂಪಿಸಿದೆ. ಆದರೆ ಇದು ಕೇವಲ ಕಾಲ್ಪನಿಕ. ವಿಶ್ವದ ಎಲ್ಲ ಟೆಸ್ಟ್‌ ತಂಡಗಳ ಸರ್ವಶ್ರೇಷ್ಠ ಆಟಗಾರರ ತಂಡವೊಂದನ್ನು ರಚಿಸಿ ಭಾರತದಲ್ಲಿ ಆಡಿಸಿದರಷ್ಟೇ ಅದಕ್ಕೆ ಗೆಲುವು ಒಲಿಯಬಹುದು ಎಂಬುದೊಂದು ಇಲ್ಲಿನ ಲೆಕ್ಕಾಚಾರ. ಹಾಗಾದರೆ ಈ ಆಟಗಾರರ ಪಡೆ ಹೇಗಿರಬಹುದು? ಇಲ್ಲಿ ಯಾರೆಲ್ಲ ಸ್ಥಾನ ಸಂಪಾದಿಸಬಹುದು? ಕುತೂಹಲ ಸಹಜ.

ಕ್ರಿಕೆಟಿಗರ ಇತ್ತೀಚಿನ ಫಾರ್ಮ್, ಭಾರತದಲ್ಲಿ ಆಡಿದ ಅನುಭವ, ಭಾರತೀಯ ಉಪಖಂಡದಲ್ಲಿ ಇವರ ಸಾಧನೆಯನ್ನೆಲ್ಲ ಅವಲೋಕಿಸಿ ವಿಶ್ವ ಇಲೆವೆನ್‌ ಒಂದನ್ನು ರಚಿಸಲಾಗಿದೆ.

Advertisement

ಇಲ್ಲಿ ಆರಂಭಿಕರಾಗಿ ಆಯ್ಕೆಯಾದವರು ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲ್ಯಾಂಡಿನ ಟಾಮ್‌ ಲ್ಯಾಥಂ. ಇವರಲ್ಲಿ ಲ್ಯಾಥಂ ವಿಕೆಟ್‌ ಕೀಪರ್‌ ಕೂಡ ಆಗಿದ್ದಾರೆ. ಹಾಗೆಯೇ ಡೇವಿಡ್‌ ವಾರ್ನರ್‌, ಅಜರ್‌ ಅಲಿ, ತಮಿಮ್‌ ಇಕ್ಬಾಲ್‌, ಡೀನ್‌ ಎಲ್ಗರ್‌ ಇತರ ಓಪನಿಂಗ್‌ ಆಯ್ಕೆಗಳಾಗಿವೆ.

ವಿಲಿಯಮ್ಸನ್‌ ನಾಯಕ
ಮಧ್ಯಮ ಕ್ರಮಾಂಕದ ಹುರಿಯಾಳುಗಳೆಂದರೆ ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌ ಮತ್ತು ಜೋ ರೂಟ್‌. ಇವರಲ್ಲಿ ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗಿದೆ. ಮಿಡ್ಲ್ ಆರ್ಡರ್‌ನ ಬದಲಿ ಕ್ರಿಕೆಟಿಗರನ್ನಾಗಿ ಮುಶ್ಫಿಕರ್‌ ರಹೀಂ, ಬಾಬರ್‌ ಆಜಂ ಅವರನ್ನು ಗುರುತಿಸಲಾಗಿದೆ.

ಪರಿಪೂರ್ಣ ಆಲ್‌ರೌಂಡರ್‌ಗಳಾಗಿ ಕಣಕ್ಕಿಳಿಯಲು ಬೆನ್‌ ಸ್ಟೋಕ್ಸ್‌, ಶಕಿಬ್‌ ಅಲ್‌ ಹಸನ್‌ ಅವರಿಗಿಂತ ಉತ್ತಮ ಆಯ್ಕೆ ಇಲ್ಲ.

ಸ್ಟ್ರೈಕ್‌ ಬೌಲರ್‌ಗಳಿಗೆ ಬಹಳಷ್ಟು ಆಯ್ಕೆಗಳಿವೆ. ಆದರೆ ಪ್ಯಾಟ್‌ ಕಮಿನ್ಸ್‌ ಮತ್ತು ಜೋಫ‌Å ಆರ್ಚರ್‌ ಅವರಿಗೆ ಮೊದಲ ಆದ್ಯತೆ ನೀಡಲಾಗಿದೆ. ರೇಸ್‌ನಲ್ಲಿರುವ ಉಳಿದವರೆಂದರೆ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಕಾಗಿಸೊ ರಬಾಡ, ಜಾಸನ್‌ ಹೋಲ್ಡರ್‌.

ಭಾರತದ್ದು ಟರ್ನಿಂಗ್‌ ಟ್ರ್ಯಾಕ್‌ ಆಗಿರುವ ಕಾರಣ ಸ್ಪಿನ್ನರ್‌ಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಇಲ್ಲಿ ಅವಕಾಶ ಪಡೆದವರು ನಥನ್‌ ಲಿಯೋನ್‌, ರಶೀದ್‌ ಖಾನ್‌.

ತಾಕತ್ತಿದ್ದರೆ ಈ ವಿಶ್ವ ಇಲೆವೆನ್‌ ಭಾರತದಲ್ಲಿ ಟೆಸ್ಟ್‌ ಆಡಲು ಬರಲಿ, ಅವರನ್ನೂ ಬಗ್ಗುಬಡಿ ಯುತ್ತೇವೆ ಎಂದು ಕೊಹ್ಲಿ ಟೀಮ್‌ ಸವಾಲೆಸೆದರೆ ಅಚ್ಚರಿ ಇಲ್ಲ!

ವಿಶ್ವ ಟೆಸ್ಟ್‌ ಇಲೆವೆನ್‌
ದಿಮುತ್‌ ಕರುಣರತ್ನೆ, ಟಾಮ್‌ ಲ್ಯಾಥಂ (ವಿ.ಕೀ.), ಕೇನ್‌ ವಿಲಿಯಮ್ಸನ್‌ (ನಾಯಕ), ಸ್ಟೀವನ್‌ ಸ್ಮಿತ್‌, ಜೋ ರೂಟ್‌, ಬೆನ್‌ ಸ್ಟೋಕ್ಸ್‌, ಶಕಿಬ್‌ ಅಲ್‌ ಹಸನ್‌, ಪ್ಯಾಟ್‌ ಕಮಿನ್ಸ್‌, ಜೋಫ‌Å ಆರ್ಚರ್‌, ನಥನ್‌ ಲಿಯೋನ್‌, ರಶೀದ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next