Advertisement

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಭಜರಂಗ್‌, ರವಿ ದಹಿಯಾ ಕಂಚಿನ ವಿಜಯ

09:26 AM Sep 22, 2019 | Sriram |

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ಸೆಮಿಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪಿಗೆ ತುತ್ತಾದ ಭಜರಂಗ್‌ ಪೂನಿಯಾ ಮತ್ತು ಇದೇ ಮೊದಲ ಸಲ ಕಣಕ್ಕಿಳಿದ ರವಿಕುಮಾರ್‌ ದಹಿಯಾ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದಿತ್ತಿದ್ದಾರೆ. ಆದರೆ 8 ವರ್ಷಗಳ ಬಳಿಕ ಮರಳಿದ ಅನುಭವಿ ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಎಡವಿದರು.

Advertisement

ಶುಕ್ರವಾರದ 65 ಕೆಜಿ ವಿಭಾಗದ ಜಿದ್ದಾಜಿದ್ದಿ ಕಾಳಗವೊಂದರಲ್ಲಿ ಭಜರಂಗ್‌ ಪೂನಿಯಾ ಮಂಗೋಲಿಯಾದ ಟುಲ್ಗ ಒಶಿರ್‌ ಅವರನ್ನು 8-7 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. 0-6 ಅಂತರದಿಂದ ಹಿಂದಿದ್ದ ಭಜರಂಗ್‌ ಒಮ್ಮೆಲೇ ಜಬರ್ದಸ್ತ್ ಪ್ರದರ್ಶನ ನೀಡಿ ಮಂಗೋಲಿಯನ್‌ ಎದುರಾಳಿಯನ್ನು ಚಿತ್‌ ಮಾಡಿದ್ದು ವಿಶೇಷವಾಗಿತ್ತು. ಕೊನೆಯ 90 ಸೆಕೆಂಡ್‌ಗಳ ಸೆಣಸಾಟದಲ್ಲಿ ಭಜರಂಗ್‌ 3 ಅವಳಿ ಅಂಕಗಳನ್ನು ಸಂಪಾದಿಸಿದರು. ಇದು ಭಜರಂಗ್‌ ಗೆದ್ದ ಸತತ 3ನೇ ವಿಶ್ವ ಚಾಂಪಿಯನ್‌ಶಿಪ್‌ ಪದಕ.

ಅನಂತರದ 57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ರವಿ ಕುಮಾರ್‌ ದಹಿಯಾ ಇರಾನ್‌ನ ರೇಝ ಅಹ್ಮದಲಿ ವಿರುದ್ಧ 6-3 ಅಂತರದ ಮೇಲುಗೈ ಸಾಧಿಸಿದರು.

ಸುಶೀಲ್‌ ಕುಮಾರ್‌ಗೆ ಸೋಲು
ಎಂಟು ವರ್ಷಗಳ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಮರಳಿದ, ಅವಳಿ ಒಲಿಂಪಿಕ್‌ ಪದಕ ವಿಜೇತ ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಶುಕ್ರವಾರದ 74 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅಜರ್‌ಬೈಜಾನ್‌ನ ಖಾಜಿಮುರಾದ್‌ ಗಜಿಯೇವ್‌ 11-9 ಅಂತರದಿಂದ ಭಾರತೀಯನನ್ನು ಮಣಿಸಿದರು.

ವಿರಾಮದ ವೇಳೆ 9-4 ಅಂತರದಿಂದ ಮುಂದಿದ್ದ ಸುಶೀಲ್‌ ಕುಮಾರ್‌ ಮೇಲುಗೈ ಸಾಧಿಸುವ ಎಲ್ಲ ಸೂಚನೆ ನೀಡಿದ್ದರು. ಆದರೆ ಅನಂತರ ಸತತ 7 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡ ಗಜಿಯೇವ್‌ ಭಾರತೀಯನ ಮೇಲೆ ತಿರುಗಿ ಬಿದ್ದರು. ದ್ವಿತೀಯ ಅವಧಿಯಲ್ಲಿ ಸುಶೀಲ್‌ ಕುಮಾರ್‌ಗೆ ಒಂದೂ ಅಂಕ ಗಳಿಸಲಾಗಲಿಲ್ಲ.

Advertisement

ಗಜಿಯೇವ್‌ ಫೈನಲ್‌ ಪ್ರವೇಶಿಸಿದರೆ ಸುಶೀಲ್‌ ಕುಮಾರ್‌ ರೆಪಿಶೇಜ್‌ ಸುತ್ತಿನಲ್ಲಿ ಕಂಚಿನ ಪದಕ ಹಾಗೂ ಒಲಿಂಪಿಕ್‌ ಅರ್ಹತಾ ಸ್ಪರ್ಧೆಯ ರೇಸ್‌ನಲ್ಲಿ ಉಳಿಯಲಿದ್ದಾರೆ.

ಪರ್ವೀನ್‌, ಸುಮಿತ್‌ ಪರಾಭವ
ಕೂಟದ 7ನೇ ದಿನದ ಸ್ಪರ್ಧೆಯಲ್ಲಿ 2ನೇ ಸುತ್ತಿಗೆ ಏರಿದ ಏಕೈಕ ಭಾರತೀಯನೆಂದರೆ ಪರ್ವೀನ್‌. ಅವರು 92 ಕೆಜಿ ವಿಭಾಗದಲ್ಲಿ ಕೊರಿಯಾದ ಸೆ ಚಾಂಗ್‌ಜೆ ವಿರುದ್ಧ 12-1 ಅಂತರದ ಗೆಲುವು ಸಾಧಿಸಿದರು. ಆದರೆ ಮುಂದಿನ ಸುತ್ತಿನಲ್ಲಿ ಉಕ್ರೇನಿನ ಲಿಯುಬೊಮಿರ್‌ ಸಗಲಿಯುಕ್‌ ಕೈಯಲ್ಲಿ 0-8 ಅಂತರದಿಂದ ಎಡವಿ ಹೊರಬಿದ್ದರು.

ಕಾಮನ್‌ವೆಲ್ತ್‌ ಗೇಮ್ಸ್‌ ಬಂಗಾರ ಪದಕ ವಿಜೇತ ಸುಮಿತ್‌ ಮಲಿಕ್‌ 125 ಕೆಜಿ ಫ್ರೀಸ್ಟೈಲ್‌ ವಿಭಾಗದ ಮೊದಲ ಸುತ್ತಿನಲ್ಲೇ ಸೋತರು. ಅವರನ್ನು ಹಂಗೇರಿಯ ಡ್ಯಾನಿಲ್‌ ಲಿಗೆಟಿ 2-0 ಅಂತರದಿಂದ ಹಿಮ್ಮೆಟ್ಟಿಸಿದರು. 70 ಕೆಜಿ ಫ್ರೀಸ್ಟೈಲ್‌ನಲ್ಲಿ ಕರಣ್‌ ಮೋರ್‌ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು.

Advertisement

Udayavani is now on Telegram. Click here to join our channel and stay updated with the latest news.

Next