ನವದೆಹಲಿ: ನಿಮ್ಮ ಆಹಾರವನ್ನು ವ್ಯರ್ಥ ಮಾಡಬೇಡಿ, ಅನ್ನವನ್ನು ಬಿಸಾಡಬೇಡಿ…ಈ ಬುದ್ದಿಮಾತನ್ನು ನಾವು ನಮ್ಮ ಹಿರಿಯರಿಂದ ಕೇಳುವ ಒಂದು ಸಾಮಾನ್ಯ ಮಾತು ಎಂದು ಭಾವಿಸಿದ್ದೇವೆ. ಆದರೆ ಈ ಮಾತನ್ನು ಯಾಕೆ ಹೇಳುತ್ತಿದ್ದಾರೆ ಎಂಬುದನ್ನು ಯೋಚಿಸಿದ್ದೀರಾ? ಏಕೆಂದರೆ ಆಹಾರವನ್ನು ಹಾಳು ಮಾಡುವುದು ನೈತಿಕವಾಗಿ ಒಂದು ಕೆಟ್ಟ ಅಭ್ಯಾಸವಾಗಿದೆ. ಅಷ್ಟೇ ಅಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡಿದಂತಾಗಲಿದೆ.
ಇದನ್ನೂ ಓದಿ:ಮೋದಿ ಸಾಧನೆಯ ಹಿಂದಿನ ಸ್ಪೂರ್ತಿ: ಹೀರಾಬೆನ್ ಬಗೆಗಿನ ಅಪರೂಪದ ಮಾಹಿತಿ ಇಲ್ಲಿದೆ
ಆಹಾರವನ್ನು ವ್ಯರ್ಥ ಮಾಡುವುದರಿಂದ ಪರಿಸರ ಮತ್ತು ಜಾಗತಿಕ ಹವಾಮಾನಕ್ಕೂ ಮಾರಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು ಒಂದು ಶತಕೋಟಿ ಟನ್ ಆಹಾರ ವ್ಯರ್ಥವಾಗುತ್ತಿದೆ ಎಂಬುದು ಆಘಾತಕಾರಿ ಸಂಗತಿಯಾಗಿದೆ.
ಅಂದರೆ ಇದರ ಅರ್ಥ ಜಾಗತಿಕವಾಗಿ ಉತ್ಪಾದನೆಯಾಗುತ್ತಿರುವ ಅಂದಾಜು 3/1ರಷ್ಟು ಆಹಾರವನ್ನು ಹಾಳು ಮಾಡುತ್ತಿದ್ದೇವೆ. ಜಗತ್ತಿನಲ್ಲಿ ಪ್ರತಿವರ್ಷ ಭಾರೀ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ಆಹಾರದ ಪ್ರಮಾಣ ಎಷ್ಟು ಎಂಬ ಬಗ್ಗೆ ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ 2021ರ ವರದಿಯನ್ನು ಯುಎನ್ ಇಪಿ ಬಹಿರಂಗಪಡಿಸಿದೆ.
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಈ ಪುರಾವೆಯನ್ನು ನಾವು ಇನ್ಮುಂದೆ ನಿರ್ಲಕ್ಷಿಸುವುದು ಬಹಳ ಕಷ್ಟಕರವಾಗಲಿದೆ. ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವ ವೈವಿಧ್ಯದ ನಷ್ಟ, ಮಾಲಿನ್ಯ ಮತ್ತು ತ್ಯಾಜ್ಯ ಬಿಕ್ಕಟ್ಟನ್ನು ನಿಭಾಯಿಸಲು ಆಹಾರ ವ್ಯವಸ್ಥೆಗಳ ಸುಧಾರಣೆ ನಿರ್ಣಾಯಕವಾಗಿದೆ ಎಂದು ವರದಿ ಎಚ್ಚರಿಸಿದೆ.
ಭಾರೀ ಪ್ರಮಾಣದ ಆಹಾರವನ್ನು ವ್ಯರ್ಥ ಮಾಡುತ್ತಿರುವುದು ಮಾನವ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯ ಮೂರನೇ ಒಂದು ಭಾಗದಷ್ಟಿರುತ್ತದೆ. ಅಷ್ಟೇ ಅಲ್ಲ ಶೇ.86ರಷ್ಟು ಸಸ್ಯ ಮತ್ತು ಪ್ರಾಣಿ ಜಾತಿಗಳು ಅಳಿವಿನ ಅಂಚಿನಲ್ಲಿದ್ದು, ಕೃಷಿಯು ಅಪಾಯದಲ್ಲಿದೆ. ಆಹಾರ ವ್ಯರ್ಥ ಮಾಡುವುದು ಜಾಗತಿಕವಾಗಿ ಭಾರೀ ಪ್ರಮಾಣದ ಆಹಾರ ಕೊರತೆಗೆ ಎಡೆಮಾಡಿಕೊಡಲಿದೆ ಎಂದು ವರದಿ ತಿಳಿಸಿದೆ.
ಫುಡ್ ವೇಸ್ಟ್ ಇಂಡೆಕ್ಸ್ ವರದಿ ಪ್ರಕಾರ, ಪ್ರತಿ ಮನೆಯಲ್ಲಿನ ಆಹಾರ ವ್ಯರ್ಥವಾಗುತ್ತಿರುವುದು ಬೃಹತ್ ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದೆ. ಆಹಾರ ವ್ಯರ್ಥ ಮಾಡುವುದರಲ್ಲಿ ಎಲ್ಲರ ಪಾಲು ಸೇರಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಪ್ರತಿದಿನದ ಜೀವನಶೈಲಿಯಲ್ಲಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ವರದಿ ಸಲಹೆ ನೀಡಿದೆ.