Advertisement

ವಿಶ್ವಯುದ್ಧದ “ಕಿಂ’ವದಂತಿ!

12:35 PM Oct 03, 2017 | |

ಸರ್ವಾಧಿಕಾರಿಯಾದವನು ಎಷ್ಟು ತಿಕ್ಕಲನಾಗಿರುತ್ತಾನೋ ಅಷ್ಟೇ ಪುಕ್ಕಲನೂ ಆಗಿರುತ್ತಾನೆ. ಯಾವ ಅಧಿಕಾರದ(ಪವರ್‌) ಅಮಲು ಅವನಿಗೆ ತಿಕ್ಕಲುತನ ತಂದು ಕೊಡುತ್ತದೋ, ಆ ಅಧಿಕಾರವನ್ನು ಕಳೆದುಕೊಳ್ಳುವ ಊಹೆಯೇ ಅವನನ್ನು ಪುಕ್ಕಲನನ್ನಾಗಿಸುತ್ತದೆ. ಆ ಭಯದಿಂದ ಮುಕ್ತನಾಗಲು ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ ಆಯ್ಕೆ ಮಾಡಿಕೊಂಡಿರುವುದು “ಬೆದರಿಕೆ’ಯ ಮಾರ್ಗವನ್ನು.  ಅಮೆರಿಕವನ್ನು ಪುಡಿಗಟ್ಟುತ್ತೇನೆನ್ನುವ ಆತನ ಧಮಕಿಗಳ ಹಿಂದೆ ಒಂದೇ ಏಟಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರವಿದೆ.

Advertisement

ಜಗತ್ತು ಮೂರನೇ ವಿಶ್ವಯುದ್ಧದತ್ತ ಸಾಗುತ್ತಿದೆಯೇ? ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ಪೂರ್ವ ಏಷ್ಯನ್‌ ರಾಷ್ಟ್ರ ಉತ್ತರ ಕೊರಿಯಾ ಪರಸ್ಪರ ಅಣ್ವಸ್ತ್ರಗಳನ್ನು ಎಸೆದುಕೊಂಡು ತಮ್ಮ ಜತೆಗೆ ಇಡೀ ಜಗತ್ತಿನ ಉಸಿರುಗಟ್ಟಿಸಲಿವೆಯೇ? ನಮ್ಮ ಕನ್ನಡದ ನ್ಯೂಸ್‌ ಚಾನೆಲ್‌ಗ‌ಳನ್ನು ಕಳೆದ ಒಂದೆ ರಡು ತಿಂಗಳಿನಿಂದ ನೋಡಿದವರಿಗೆ, ಪತ್ರಿಕೆಗಳನ್ನು ಓದಿದವರಿಗೆ ಈ ಪ್ರಶ್ನೆಯೇನಾದರೂ ಕೇಳಿದರೆ “ಹೌದೌದು, ತೃತೀಯ ವಿಶ್ವಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದು ಹೇಳುವ ಸಾಧ್ಯತೆಯೇ ಹೆಚ್ಚು. ಅಂದರೆ ಆ ಪಾಟಿ ನಮ್ಮ ಮಾಧ್ಯಮಗಳಲ್ಲಿ ಕಿಮ್‌ ಜಾಂಗ್‌ ಉನ್‌ ಮತ್ತು ಡೊನಾಲ್ಡ್‌ ಟ್ರಂಪ್‌ ರಾರಾಜಿಸುತ್ತಿ ದ್ದಾರೆ. ಒಟ್ಟಲ್ಲಿ ನಮ್ಮವೂ ಸೇರಿದಂತೆ ಜಗತ್ತಿನ ಬಹುತೇಕ ಮಾಧ್ಯಮಗಳೂ ತಾವೇ ಯುದ್ಧ ಫಿಕ್ಸ್‌ ಮಾಡಿಬಿಟ್ಟಿವೆ! ಇದನ್ನು ಪುಷ್ಟೀಕರಿಸುವಂತೆಯೇ ಇವೆ ಕಿಮ್‌ ಜಾಂಗ್‌ ಉನ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಪರಸ್ಪರ ತೂರಿಕೊಳ್ಳುತ್ತಿರುವ ವಾಗ್ಬಾಣಗಳು. ಆದರೆ ನಿಜಕ್ಕೂ “ಸರ್ವಾಧಿಕಾರಿ’ ಕಿಮ್‌ ಜಾಂಗ್‌ ಉನ್‌ ಅಮೆರಿಕದ ಮೇಲೆ ಯುದ್ಧ ಮಾಡೇ ಬಿಡುತ್ತಾರಾ? “ಉತ್ತರ ಕೊರಿಯಾವನ್ನು ಚಿಂದಿ ಚಿತ್ರಾನ್ನ ಮಾಡುತ್ತೇವೆ’ ಎಂಬ ಟ್ರಂಪ್‌ರ ಆಕ್ರೋಶಭರಿತ ಮಾತುಗಳು ನಿಜವಾಗುತ್ತವಾ?

ಆ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ರಕ್ಷಣಾ ಪರಿಣತರು. ಆದರೆ ಟಿಆರ್‌ಪಿಯಿರುವುದು ಯುದ್ಧಕ್ಕೇ ಹೊರತು ಶಾಂತಿಗಲ್ಲ ವಲ್ಲ? ಈ ಕಾರಣಕ್ಕಾಗಿಯೇ ಮಾಧ್ಯಮಗಳು ಯುದ್ಧ ನಡೆಸಲು ಸಿದ್ಧವಾಗಿಬಿಟ್ಟಿವೆ. ಈ ಕಾಲ್ಪನಿಕ ಯುದ್ಧದ ಪರಿಣಾಮಗಳ ಬಗ್ಗೆ, ಎರಡೂ ರಾಷ್ಟ್ರಗಳ ನಡುವಿನ ಬಾಂಬುಗಳ ಬಲಾಬಲದ ಬಗ್ಗೆ ಪಟ್ಟಿ ಎದುರಿಗಿಟ್ಟು ಈ ಕಡೆ ಎಷ್ಟು ಜನ ಸಾಯುತ್ತಾರೆ- ಆ ಕಡೆ ಮಡಿಯುವವರೆಷ್ಟು? ಎಂದೂ ರೌಂಡ್‌ ಫಿಗರ್‌ ಹೇಳುತ್ತಿವೆ!

ಈ ಕಥೆಯನ್ನು ಇನ್ನಷ್ಟು ಟ್ರೆಸ್ಟಿಂಗ್‌ಗೊಳಿಸುವುದಕ್ಕಾಗಿಯೇ ಕಿಮ್‌ ಜಾಂಗ್‌ ಉನ್‌ನ ಸರ್ವಾಧಿಕಾರಿ ಆಡಳಿತ, ಉತ್ತರ ಕೊರಿಯಾದಲ್ಲಿನ ಪ್ರೊಪಗಾಂಡಾ ಮಷೀನರಿ, ಆತನ ಹೇರ್‌ ಕಟ್‌ ಕಥೆ, ಅಲ್ಲಿನ ಕ್ರೂರ ನಿಯಮಗಳ ಬಗ್ಗೆಯೆಲ್ಲ ಚರ್ಚೆ ನಡೆಯುತ್ತಿದೆ. ಕಿಮ್‌ ಜಾಂಗ್‌ ಉನ್‌ ಮಹಾನ್‌ ಹುಚ್ಚ ವ್ಯಕ್ತಿ ಹೀಗಾಗಿ ಅವನು ಯುದ್ಧ ನಡೆಸುವುದಕ್ಕೂ ಹೇಸುವವನಲ್ಲ ಎಂಬ ಇತ್ಯರ್ಥಕ್ಕೆ ಬರಲಾಗಿದೆ. ಆದರೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಸರ್ವಾಧಿಕಾರಿಯಾದವನು ಎಷ್ಟು ತಿಕ್ಕಲನಾಗಿರುತ್ತಾನೋ ಅಷ್ಟೇ ಪುಕ್ಕಲನೂ ಆಗಿರುತ್ತಾನೆ. ಯಾವ ಅಧಿಕಾರ(ಪವರ್‌)ದ ಅಮಲು ಅವನಿಗೆ ತಿಕ್ಕಲುತನ ತಂದು ಕೊಡುತ್ತದೋ, ಆ ಅಧಿಕಾರವನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ಅವನನ್ನು ಪುಕ್ಕಲನನ್ನಾಗಿಸುತ್ತದೆ. ಆ ಭಯದಿಂದ ಮುಕ್ತ ನಾಗಲು ಕಿಮ್‌ ಜಾಂಗ್‌ ಉನ್‌ ಆಯ್ಕೆ ಮಾಡಿಕೊಂಡಿರುವುದು “ಬೆದರಿಕೆ’ಯ ಮಾರ್ಗವನ್ನು. 

ಉತ್ತರ ಕೊರಿಯಾ ಆಡಳಿತವನ್ನು ಕಾಡುತ್ತಿರುವ ಎರಡು ದೊಡ್ಡ ಚಿಂತೆಯೆಂದರೆ ದೇಶದ ನಾಗರಿಕರ ಮೇಲೆ ಬಿಗಿ ಹಿಡಿತ ಮುಂದುವರಿಸುವುದು ಹೇಗೆ ಮತ್ತು ಅಮೆರಿಕದ ಒತ್ತಡದಿಂದ ಪಾರಾಗುವುದು ಹೇಗೆ ಎನ್ನುವುದು. ಸದ್ದಾಂ ಹುಸ್ಸೇನ್‌ ಮತ್ತು ಮುಅಮ್ಮರ್‌ ಗದ್ದಾಫಿಯಂಥ ಸರ್ವಾಧಿಕಾರಿಗಳನ್ನು ಹೊಡೆದು ಹಾಕಿದಂತೆಯೇ ಅಮೆರಿಕ ತನ್ನ ಕಥೆಯನ್ನೂ ಮುಗಿಸಬಹುದು ಎನ್ನುವ ಭಯ ಕಿಮ್‌ ಜಾಂಗ್‌ಗೆ ಇದೆ. ಆದರೆ ಬಲಿಷ್ಠ-ಪುಂಡ ಅಮೆರಿಕವನ್ನು ತನ್ನತ್ತ ಬರದಂತೆ ತಡೆಯಬಲ್ಲ ಅಸ್ತ್ರವೂ ಉತ್ತರ ಕೊರಿಯಾ  ಬಳಿ ಇದೆ. ಅದೇ ಅಣ್ವಸ್ತ್ರ! ಅಣ್ವಸ್ತ್ರ ಎನ್ನುವ ಪದಕ್ಕೆ ಅಮೆರಿಕವನ್ನು ಸುಮ್ಮನಾಗಿಸುವ ಮಾಯಾವಿ ಶಕ್ತಿಯಿದೆ. ಜಪಾನ್‌ನ ಮೇಲೆ ಅಣ್ವಸ್ತ್ರವೆಸೆದ ಪಾಪ ಪ್ರಜ್ಞೆಯಿಂದ ಇಂದಿಗೂ ಬಳಲುತ್ತಿದೆ ಅಮೆರಿಕ. ಈ ಕಾರಣ ಕ್ಕಾಗಿಯೇ ಅಣ್ವಸ್ತ್ರದ ಪರಿಣಾಮಗಳ ಬಗ್ಗೆ ಜಪಾನ್‌ಗಿಂತಲೂ ಅತಿ ಹೆಚ್ಚು ಅಧ್ಯಯನ ನಡೆದಿರುವುದು, ಚರ್ಚೆಗಳಾಗುವುದು ಅಮೆರಿಕದಲ್ಲಿ ಎನ್ನುತ್ತವೆ ವರದಿಗಳು. “ನ್ಯೂಕ್ಲಿಯರ್‌ ಥೆಟ್‌’ ಅನ್ನು ಅಮೆರಿಕದ ಮಾಧ್ಯಮಗಳು, ಜನರು ಗಂಭೀರವಾಗಿ ಪರಿಗಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೆ ಇನ್ನೊಂದು ರಾಷ್ಟ್ರದಲ್ಲಿ ಮೂಗು ತೂರಿಸಿ ಮೈ ಕೈ ಹೊಲಸು ಮಾಡಿಕೊಳ್ಳಬೇಡಿ ಎನ್ನುವುದು ಅಮೆರಿಕನ್ನರ ಒಕ್ಕೊರಲ ಅಭಿಮತ. 

Advertisement

ಹೀಗಾಗಿ ಅಮೆರಿಕ ತನ್ನ ಮೇಲೆ ಯುದ್ಧ ಮಾಡುವ ಸಾಧ್ಯತೆ ಕಡಿಮೆ ಎನ್ನುವುದು ಕಿಮ್‌ ಜಾಂಗ್‌ ಉನ್‌ಗೆ ಖಾತ್ರಿಯಾಗಿದೆ. ಆದರೂ ಪದೇ ಪದೆ ಅಮೆರಿಕಕ್ಕೆ ಧಮಕಿ ಹಾಕುತ್ತಿರುವುದರ 
ಹಿಂದೆ, ಆತನ ಆಡಳಿತದ ಎಂದಿನ ಪ್ರೊಪಗಾಂಡಾ ಕೆಲಸ ಮಾಡುತ್ತಿದೆ. ದಕ್ಷಿಣ ಕೊರಿಯಾಕ್ಕೆ ಹೋಲಿಸಿದರೆ ಆರ್ಥಿಕವಾಗಿ ಅಧೋಗತಿಗೆ ಇಳಿದಿದೆ ಉತ್ತರ ಕೊರಿಯಾದ ಸ್ಥಿತಿ. ಅಧಿಕಾರ ದಲ್ಲಿರುವವರನ್ನು ಬಿಟ್ಟರೆ ಸಾಮಾನ್ಯ ಜನಜೀವನ ಗುಣಮಟ್ಟ ಕಳಪೆಯಾಗಿದೆ. ಜನರು ಒಳಗಿನಿಂದ ದೊಂಬಿ ಏಳಬಾರದು ಎಂದರೆ ಏನು ಮಾಡಬೇಕು? ಅವರ ಗಮನವನ್ನೆಲ್ಲ ಬೇರೆಡೆ ಸೆಳೆಯಬೇಕು. ಇದಕ್ಕಾಗಿ ಮೊದಲಿನಿಂದಲೂ ಉತ್ತರ ಕೊರಿಯಾಕ್ಕೆ ಅಮೆರಿಕ ಒಳ್ಳೆಯ ನೆಪ. ದುಷ್ಟ ಅಮೆರಿಕದ ವಿರುದ್ಧ ಹೋರಾಡಿ ಕಿಮ್‌ ಜಾಂಗ್‌ ನಿಮ್ಮನ್ನು ಉಳಿಸುತ್ತಾರೆ ಎನ್ನುವ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ಜನರ ಗಮನ ಕದಲಿಸಲಾಗುತ್ತಿದೆ. (ಕಳೆದ ವರ್ಷ ವಿದ್ಯುತ್‌ ಅಭಾವದಿಂದ ಪ್ಯಾಂಗ್ಯಾಂಗ್‌ ನಗರಿಯ ಮುಕ್ಕಾಲು ಪ್ರದೇಶ ಸುಮಾರು 2 ದಿನ ಕತ್ತಲಲ್ಲಿ ಮುಳುಗಿತ್ತು. ಇಂಥ ಪರಿಸ್ಥಿತಿ ಎದುರಾದಾಗಲೆಲ್ಲ ಕಿಮ್‌ ಆಡಳಿತ ತನ್ನ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಅಮೆರಿಕದತ್ತ ಬೆರಳು ಮಾಡುತ್ತದೆ. “”ರಾತ್ರಿಯ ವೇಳೆ ಅಮೆರಿಕನ್‌ ವಾಯುಸೇನೆಯಿಂದ ಸಂಭಾವ್ಯ ದಾಳಿ ಇದೆಯಾದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಮೂರ್ನಾಲ್ಕು ದಿನ ವಿದ್ಯುತ್‌ ಕಡಿತಗೊಳಿಸುತ್ತೇವೆ” ಎಂಬ ಆದೇಶ ಹೊರಡಿ ಸುತ್ತದೆ). ದಶಕಗಳಿಂದ ಜಗತ್ತಿನ ಆಗುಹೋಗುಗಳಿಗೆ ಬಾಗಿಲು ಹಾಕಿಕೊಂಡು ಕುಳಿತಿರುವ ಉತ್ತರ ಕೊರಿಯನ್ನರು ಇಂಥ ಕಥೆಗಳನ್ನು ನಂಬೇ ನಂಬುತ್ತಾರೆ. 

ಈ ಕಾರಣಕ್ಕಾಗಿಯೇ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬಹುದು. ಕಿಮ್‌ ಜಾಂಗ್‌ ಹುಚ್ಚನಲ್ಲ, ಚತುರ ಆಡಳಿತಗಾರ. ನಿಜಕ್ಕೂ ಕಿಮ್‌ ಜಾಂಗ್‌ನ ವಿರುದ್ಧ ದಿನಕ್ಕೊಂದು ಹೇಳಿಕೆ ಹೊರಡಿಸಿ ಆತನ ಆಟಕ್ಕೆ ಸಿಲುಕಿ ಮೂರ್ಖತನ ತೋರಿಸುತ್ತಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. 

ಬರಾಕ್‌ ಒಬಾಮಾ ಆಡಳಿತದಲ್ಲಿ ಪೂರ್ವ ಏಷ್ಯಾದ ರಕ್ಷಣಾ ಸಹಾಯಕ ಕಾರ್ಯದರ್ಶಿಯಾಗಿದ್ದ ಅಬೆ ಡೆನ್ಮಾರ್ಕ್‌ ಯುದ್ಧದ ಸಾಧ್ಯತೆಗಳನ್ನು ಒಂದೇ ಏಟಿಗೆ ನಿರಾಕರಿಸುತ್ತಾರೆ. “”ಯುದ್ಧ ನಡೆಯುತ್ತದೆ ಎಂದಾದರೆ ಈಗಾಗಲೇ ನಾವು ಹಲವಾರು ಬದಲಾ ವಣೆಗಳನ್ನು ನೋಡುತ್ತಿದ್ದೆವು. ದಕ್ಷಿಣ ಕೊರಿಯಾದಲ್ಲಿ ಅಮೆರಿಕನ್‌ ನಾಗರಿಕರು, ಸೈನಿಕರ ಕುಟುಂಬದವರು ಮತ್ತು ಮಿಲಿಟರಿ ಯೇತರ ಸಿಬ್ಬಂದಿಯ ಸಂಖ್ಯೆಯೇ 1 ಲಕ್ಷದಷ್ಟಿದೆ. ಅಮೆರಿಕ ಯುದ್ಧ ನಡೆಸುತ್ತದೆ ಎಂದಾದರೆ ಇಷ್ಟೊತ್ತಿಗೆ ಇವರನ್ನೆಲ್ಲ  ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ನಡೆದಿರುತ್ತಿತ್ತು. ” ಎನ್ನುತ್ತಾರೆ ಅಬೆ. 

ಅಮೆರಿಕದ ನ್ಯಾಷನಲ್‌ ಇಂಟೆಲಿಜೆನ್ಸ್‌ನ ಮಾಜಿ ನಿರ್ದೇಶಕ ಡೆನಿಸ್‌ ಬ್ಲೇರ್‌ ಮಾತು ಕೂಡ ಇದೇ ಧಾಟಿಯಲ್ಲೇ ಇವೆ- “”ಯುದ್ಧದ ಸಂಭಾವ್ಯತೆ ಇದೆಯೆಂದಾದಾಗ, ಬಹಳಷ್ಟು ಕೆಲಸ ಗಳನ್ನು ಮೊದಲು ಮಾಡಬೇಕಾಗುತ್ತದೆ. ಮೀಸಲು ಪಡೆಯನ್ನು ಒಗ್ಗೂಡಿಸಬೇಕಾಗುತ್ತದೆ, ಸಾಗಣೆ ಮತ್ತು ಸಂವಹನ ಸಂಬಂಧಿ ಕೆಲಸಗಳೂ ವಿಪರೀತವಿರುತ್ತವೆ. ಆದರೆ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಪಡೆಗಳಿಂದ ಗಡಿಯಲ್ಲಿ(ಮುಖ್ಯವಾಗಿ ಕೊರಿಯನ್‌ ಡಿಮಿಲಿಟರೈಜ್‌x ವಲಯದ ದಕ್ಷಿಣ ತುದಿಯಲ್ಲಿ) ಈ ರೀತಿಯ ಯಾವ ಚಟುವಟಿಕೆಗಳೂ ಕಾಣಿಸುತ್ತಿಲ್ಲ. ಅತ್ತ ಉತ್ತರ ಕೊರಿ ಯನ್‌ ಪಡೆಗಳೂ ಸುಮ್ಮನಿವೆ ”.

ಮೇಲ್ನೋಟಕ್ಕೆ ಉತ್ತರ ಕೊರಿಯಾದ ಬೆನ್ನಿಗೆ ಚೀನಾ ಮತ್ತು ರಷ್ಯಾ ಇವೆ ಎಂದು ಅನ್ನಿಸಿದರೂ ರಷ್ಯಾ ಉತ್ತರ ಕೊರಿಯಾಕ್ಕೆ ಕೈಕೊಟ್ಟು “ಈ ತಲೆನೋವಿಂದ’ ಮುಕ್ತಿ ಪಡೆಯುವ ಹಾದಿಯಲ್ಲಿದೆ. ಇನ್ನು ಚೀನಾಕ್ಕೂ ಈಗ ಉ. ಕೊರಿಯಾ ಹೊರೆ ಯಾಗುತ್ತಿದೆ. ಹೇಗೆ ಭಾರತವನ್ನು ತಡವಲು ಚೀನಾ ಪಾಕಿಸ್ತಾನ ವನ್ನು ಬಳಸಿಕೊಳ್ಳುತ್ತದೋ ಅದೇ ರೀತಿಯಲ್ಲೇ ಅಮೆರಿಕ ಮತ್ತು ಜಪಾನ್‌ನ ಕಾಲೆಳೆಯಲು ಅದಕ್ಕೆ ಉತ್ತರ ಕೊರಿಯಾ ಬೇಕಿತ್ತು. ಆದರೆ ಈಗ “ಯುದ್ಧಕ್ಕೆ ಹೋದರೆ ನಮ್ಮನ್ನಂತೂ ಮರೆತುಬಿಡಿ’ ಎಂದು ಸ್ಪಷ್ಟವಾಗಿ ಕಿಮ್‌ ಜಾಂಗ್‌ಗೆ ಅದು ಎಚ್ಚರಿಸಿದೆ. 

ಎಲ್ಲರನ್ನೂ ಎದುರು ಹಾಕಿಕೊಳ್ಳುವ ತಾಕತ್ತಂತೂ ಕಿಮ್‌ ಜಾಂಗ್‌ಗೆ ಇಲ್ಲ. ಹೀಗಾಗಿ ಆತನಿಗೂ ಕೆಲವೇ ದಿನಗಳಲ್ಲಿ ಈ ರಗಳೆ ಸಾಕೆನಿಸಬಹುದು. ಆದರೆ ಅತ್ತ ಟ್ರಂಪ್‌ ಮಹಾಶಯರು ಸುಮ್ಮನಾಗುವ ಲಕ್ಷಣ ತೋರಿಸದೇ ಅನಾವಶ್ಯಕವಾಗಿ ಒಣ ಜಗಳವನ್ನು ಮುಂದುವರಿಸುತ್ತಿದ್ದಾರೆ. 

ಅಮೆರಿಕ ತನ್ನ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ ಎಂದು ಖಾತ್ರಿಯಾದ ದಿನವೇ ಕಿಮ್‌ ಜಾಂಗ್‌ ಆರಾಮಾಗಿ ನಿದ್ದೆ ಹೊಡೆಯುತ್ತಾನೆ. ಜತೆಗೆ ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆಯ ಮೂಲಕ ತಾನು ಹೇರಿಸಿರುವ ಹಲವು ನಿರ್ಬಂಧ ಗಳನ್ನು ಅಮೆರಿಕ ತೆಗೆಸಿಹಾಕಿದರೆ ಕಿಮ್‌ರ ದೇಶದ ಆರ್ಥಿಕ ಪರಿಸ್ಥಿತಿಯಾದರೂ ತುಸುಮಟ್ಟಿಗೆ ಸುಧಾರಿಸೀತು. 

ಆದರೆ ಅಮೆರಿಕ ಅಧ್ಯಕ್ಷ ಈ ಕೆಲಸ ಬಿಟ್ಟು “ರಾಕೆಟ್‌ ಮನುಷ್ಯ’, “ಕುಳ್ಳ’ ಎನ್ನುತ್ತಾ ಟ್ವೀಟು ಕುಟ್ಟುತ್ತಿದ್ದಾರೆ. ಒಟ್ಟಲ್ಲಿ ಇವರಿಬ್ಬರ ವಾಕ್ಬಾಣಗಳು ನಿಲ್ಲುವವರೆಗೂ ನಮ್ಮ ನ್ಯೂಸ್‌ ಚಾನೆಲ್‌ಗ‌ಳು ಮತ್ತು ಪತ್ರಿಕೆಗಳು “”ನಡೆದೇ ಹೋಗುತ್ತದಾ ವಿಶ್ವಯುದ್ಧ?” ಎಂದು ಬೆಚ್ಚಿಬೀಳಿಸುವುದನ್ನು ನಿಲ್ಲಿಸುವುದಿಲ್ಲ!

ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next