Advertisement

ಲೋಕ ಸಮರ; ನಾಲ್ವರಿಂದ ನಾಮಪತ್ರ ಸಲ್ಲಿಕೆ

04:18 PM Apr 02, 2019 | pallavi |

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು 4ನೇ ದಿನವಾದ ಸೋಮವಾರ ನಾಲ್ವರು ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ.

Advertisement

ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿಯಾಗಿ ರೇವಣಸಿದ್ದಪ್ಪ ಬಸವರಾಜ ತಳವಾರ, ಜನತಾದಳ (ಸಂಯುಕ್ತ) ಪಕ್ಷದ ಅಭ್ಯರ್ಥಿಯಾಗಿ ಗುರಪ್ಪ ತೋಟದ, ಪಕ್ಷೇತರರಾಗಿ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ಹಾಗೂ ಉದಯಕುಮಾರ್‌ ಅಂಬಿಗೇರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್‌ ಅವರಿಗೆ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಡಾ| ಸುರೇಶ ಇಟ್ನಾಳ ಇದ್ದರು.

ನಾಮಪತ್ರವೇ ಇಲ್ಲದೆ ಬಂದ್ರು: ಪಕ್ಷೇತರ ಅಭ್ಯರ್ಥಿ ನವಲಗುಂದ ತಾಲೂಕಿನ ಶಿರೂರ ಗ್ರಾಮದ ರೈತರ ಮುಖಂಡರಾದ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ನಾಮಪತ್ರ ಮರೆತು ಚುನಾವಣಾಧಿಕಾರಿಗಳ ಎದುರು ಬಂದು ಕುಳಿತಿದ್ದರು. ನಾಮಪತ್ರ ಕೊಡಿ ಎಂದಾಗ ಅವರ ಬಳಿ ನಾಮಪತ್ರವೇ ಇರಲಿಲ್ಲ. ಬಳಿಕ ಕಚೇರಿಯಿಂದ ಹೊರ ನಡೆದು ನಾಮಪತ್ರದೊಂದಿಗೆ ಮರಳಿ ಬಂದು ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಚಕ್ಕಡಿಯಲ್ಲಿ ರೆಂಟಿಯನ್ನಿಟ್ಟುಕೊಂಡು ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಜಾನಪದ ಕಲಾತಂಡಗಳು ಮತ್ತು ರೈತ ಸಂಘದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗೌಡ್ರ ಆಸ್ತಿ ವಿವರ: ಇ-ಮೇಲ್‌, ಫೇಸ್‌ ಬುಕ್‌ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಖಾತೆ ಇಲ್ಲವೆಂದು ಮಲ್ಲಿಕಾರ್ಜುನಗೌಡ ಅವರು ಅಫಿಡವಿಟ್‌ ನಲ್ಲಿ ಹೇಳಿದ್ದಾರೆ. ತಮ್ಮ ಹೆಸರಿನಲ್ಲಿ 18,06,060ರೂ. ಮೌಲ್ಯದ ಚರಾಸ್ತಿ ಇದ್ದು, ಪತ್ನಿ ಹೆಸರಿನಲ್ಲಿ 3,29,200 ರೂ. ಇರುವುದಾಗಿ ತಿಳಿಸಿದ್ದಾರೆ. ತಮ್ಮ ಕೈಯಲ್ಲಿ 50 ಸಾವಿರ, ಪತ್ನಿ ಕೈಯಲ್ಲಿ 25 ಸಾವಿರ ನಗದು ಇದೆ. ಎರಡು ಬ್ಯಾಂಕ್‌ ಖಾತೆಗಳ ಪೈಕಿ ಒಂದರಲ್ಲಿ 25 ಸಾವಿರ ಹಾಗೂ ಇನ್ನೊಂದು ಖಾತೆಯಲ್ಲಿ 1060 ರೂ. ಇದೆ.

ಪತ್ನಿ ಹೆಸರಿನ ಖಾತೆಯಲ್ಲಿ ಹಣವಿಲ್ಲ. 10 ಲಕ್ಷ ರೂ. ಮೌಲ್ಯದ ಬೊಲೆರೊ ವಾಹನ, 40 ಸಾವಿರ ಮೌಲ್ಯದ ದ್ವಿಚಕ್ರ ವಾಹನ, 6 ಲಕ್ಷ ರೂ. ಮೌಲ್ಯದ ಇವೋ ಟ್ರ್ಯಾಕ್ಟರ್‌ ಇದೆ. 90 ಸಾವಿರ ಮೌಲ್ಯದ 3 ತೊಲೆ ಬಂಗಾರ ತಮ್ಮ ಹೆಸರಿನಲ್ಲಿದ್ದು, ಪತ್ನಿ ಬಳಿ 3 ಲಕ್ಷ ಮೌಲ್ಯದ 10 ತೊಲೆ ಬಂಗಾರ, 4200 ರೂ. ಮೌಲ್ಯದ ಬೆಳ್ಳಿ ಪೂಜಾ ಸಾಮಾನು ಇರುವುದಾಗಿ ಹೇಳಿದ್ದಾರೆ.

Advertisement

ಸ್ಥಿರಾಸ್ತಿಯಲ್ಲಿ 15 ಲಕ್ಷ ಮೌಲ್ಯದ 10 ಎಕರೆ 30 ಗುಂಟೆ ಹಾಗೂ 8 ಲಕ್ಷ ಮೌಲ್ಯದ 6 ಎಕರೆ 27 ಗುಂಟೆ ಭೂಮಿ ಇದ್ದು, ಇದೆಲ್ಲವೂ ಪಿತ್ರಾರ್ಜಿತ. ಇನ್ನೂ ಪತ್ನಿ ಕಸ್ತೂರಿ ಅವರ ಹೆಸರಿನಲ್ಲಿ 12 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ವಾಹನ ಸಾಲ 6 ಲಕ್ಷ, ಬೆಳೆ ಸಾಲ 6 ಲಕ್ಷ ಸೇರಿ ಒಟ್ಟು 12 ಲಕ್ಷ ಸಾಲವಿದೆ. ಪತ್ನಿ ಹೆಸರಿನಲ್ಲೂ 2 ಲಕ್ಷ ರೂ. ಸಾಲ ಇರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಪಿತ್ರಾರ್ಜಿತವಾಗಿ 23 ಲಕ್ಷ ಮೌಲ್ಯದ ಆಸ್ತಿ ತಮ್ಮ ಹೆಸರಿನಲ್ಲಿ ಹಾಗೂ 12 ಲಕ್ಷ ಮೌಲ್ಯದ ಆಸ್ತಿ ತಮ್ಮ ಮಡದಿ ಹೆಸರಿನಲ್ಲಿ ಇರುವುದಾಗಿ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.

ಗುರಪ್ಪ ತೋಟದ ಆಸ್ತಿ ವಿವರ: ಗುರಪ್ಪ ಹೆಸರಿನಲ್ಲಿ ಒಟ್ಟು 8,97,000 ರೂ. ಹಾಗೂ ಪತ್ನಿ ರೂಪಾ ಹೆಸರಿನಲ್ಲಿ 3,10,000 ರೂ. ಚರಾಸ್ತಿ ಇದೆ. ಈ ಪೈಕಿ ಕೈಯಲ್ಲಿ 5 ಸಾವಿರ ನಗದು, ವಿವಿಧ ಬ್ಯಾಂಕ್‌ ಖಾತೆಯಲ್ಲಿ 2,51,645, 28,000, 18,000 ಹಾಗೂ 50,000 ರೂ. ಇದೆ. 50 ಸಾವಿರ ಮೌಲ್ಯದ ಷೇರು, 10 ಸಾವಿರ ಮೌಲ್ಯದ ಎಲ್‌ಐಸಿ ಬಾಂಡ್‌, 3,50,000 ರೂ. ಮೌಲ್ಯದ ಕಾರು, 35 ಸಾವಿರ ಮೌಲ್ಯದ ಹೊಂಡಾ ಬೈಕ್‌, 1,50,000 ರೂ. ಮೌಲ್ಯದ 50 ಗ್ರಾಂ ಬಂಗಾರ, ಪತ್ನಿ ಹೆಸರಿನಲ್ಲಿ 3,10,000 ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಇರುವುದಾಗಿ ಗುರಪ್ಪ ಹೇಳಿದ್ದಾರೆ. ಆದರೆ
57 ಲಕ್ಷ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಹೇಳಿದ್ದು, ಈ ಮೂಲಕ ಲಕ್ಷಾಧಿಪತಿ ಆಗಿದ್ದಾರೆ. ಇದರೊಂದಿಗೆ 5,68,000 ರೂ. ಸಾಲ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಒಟ್ಟಿನಲ್ಲಿ 8,97,000 ರೂ. ಮೌಲ್ಯದ ಚರಾಸ್ತಿ, 57 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಇವರ ಪತ್ನಿ ಹೆಸರಿನಲ್ಲಿ 3,10,000 ಮೌಲ್ಯದ ಚರಾಸ್ತಿ ಇದೆ.

ಅಂಬಿಗೇರ-ತಳವಾರರ ಆಸ್ತಿ ವಿವರ: ಉದಯಕುಮಾರ ಅಂಬಿಗೇರ ತಮ್ಮ ಹೆಸರಿನಲ್ಲಿ 3,40,161 ಲಕ್ಷ ರೂ. ಹಾಗೂ ಪತ್ನಿ ಹೆಸರಿನಲ್ಲಿ 3,25,000 ರೂ. ಚರಾಸ್ತಿ ಇದ್ದು, 1,29,180 ರೂ. ಸಾಲ ಇದೆ. ರೇವಣಸಿದ್ದಪ್ಪ ತಳವಾರ ಹೆಸರಿನಲ್ಲಿ 3,20,000 ರೂ ಹಾಗೂ ಪತ್ನಿ ಹೆಸರಿನಲ್ಲಿ 2,20,000 ಮೌಲ್ಯದ ಚರಾಸ್ತಿ ಇದೆ. ಇನ್ನೂ ಸ್ವಯಾರ್ಜಿತವಾಗಿ 1,80,000 ರೂ. ಹಾಗೂ ಪಿತ್ರಾರ್ಜಿತವಾಗಿ 6 ಲಕ್ಷ ರೂ. ಮೌಲ್ಯದ ಸ್ಥಿರಾಸ್ಥಿ ಇರುವುದಾಗಿ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next