Advertisement

ವಿಶ್ವ ಪ್ರವಾಸೋದ್ಯಮ ದಿನ: ನನ್ನ ಕನಸಿನ ತಾಣ

08:38 AM Sep 28, 2019 | Sriram |

ಪ್ರವಾಸ ಹೋಗುವ ಆಸೆ, ಕನಸು ಯಾರಲ್ಲಿ ಇಲ್ಲ ಹೇಳಿ. ಕೆಲವೊಂದು ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಪತ್ರಿಕೆ ವಿಶ್ವ ಪ್ರವಾಸೋದ್ಯಮ ದಿನದ ನಿಟ್ಟಿನಲ್ಲಿ ಓದುಗರಲ್ಲಿ ಅವರವರ ಕನಸಿನ ತಾಣದ ಕುರಿತಾಗಿ ಬರೆದು ಕಳುಹಿಸುವಂತೆ ತಿಳಿಸಿತ್ತು. ಸುಮಾರು 600 ಮಂದಿ ತಮ್ಮ ಕನಸಿನ ತಾಣಗಳ ಕುರಿತು ಬರೆದು ಕಳುಹಿಸಿದ್ದಾರೆ. ಆದರೆ ಕೆಲವರು ತಮ್ಮ ಹೆಸರು, ಊರು ಯಾವುದನ್ನೂ ಬರೆದಿಲ್ಲ. ಅಂಥವುಗಳನ್ನು ಪ್ರಕಟಿಸಿಲ್ಲ. ಇನ್ನು ಸಾಕಷ್ಟು ಮಂದಿ ಒಂದೇ ತಾಣವನ್ನು ಆರಿಸಿದ್ದರಿಂದ ಒಂದೊಂದನ್ನು ಆಯ್ಕೆ ಮಾಡಲಾಗಿದ್ದು, ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಹೊಗೆನಕಲ್‌ ಫಾಲ್ಸ್‌


ಹೊಗೆನಕಲ್‌ ಫಾಲ್ಸ್‌ ನೋಡುವ ಆಸೆ ಇನ್ನೂ ಈಡೇರಿಲ್ಲ.ಇಲ್ಲಿ ನೀರು ರಭಸದಿಂದ ಬೀಳುವಾಗ ಉಂಟಾಗುವ ಮಂಜು ಹೊಗೆ ರೂಪದಲ್ಲಿ ಕಂಡು ಬರುವುದರಿಂದ ಈ ಫಾಲ್ಸ್‌ಗೆ ಈ ಹೆಸರು. ಒಮ್ಮೆಯಾದರೂ ಇಲ್ಲಿ ನ ಸೌಂದರ್ಯ ನೋಡುವ ಆಸೆ ನನ್ನದು. ಬೆಂಗಳೂರಿನಿಂದ ಕೇವಲ 180 ಕಿ.ಮೀ. ದೂರದಲ್ಲಿದ್ದರೂ ಒಮ್ಮೆಯೂ ಈ ಜಾಗದ ಸೌಂದರ್ಯ ಸವಿಯುವ ಭಾಗ್ಯ ನನ್ನದಾಗಿಲ್ಲ.
-ಶ್ರೀನಾಥ,.ಸಿ.ಎಸ್‌., ಪರ್ಕಳ

ಹೊನ್ನೆಮರಡು


ನನ್ನ ಕನಸಿನ ತಾಣ ಶರಾವತಿಯ ಹಿನ್ನೀರು ವ್ಯಾಪಿಸಿರುವ ಪ್ರದೇಶ ಹೊನ್ನೆಮರಡು. ಅದ್ಭುತ ಹಿನ್ನೀರಿನ ಸಮುದ್ರ ಪ್ರದೇಶವಿದು. ಸೂರ್ಯ ಮುಳುಗುವ ಸಮಯದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿಸುವುದೇ ಒಂದು ಖುಷಿ. ಮಂಜಿನಂತಹ ತಂಪಾದ ಹವಾಮಾನವನ್ನು ಹೊಂದಿದೆ. ದೋಣಿ ವಿಹಾರಕ್ಕೂ ಹೇಳಿ ಮಾಡಿಸಿದ ಜಾಗವಿದು.ಅತೀ ಹೆಚ್ಚು ಪಕ್ಷಿ ಸಂಕುಲಗಳನ್ನೂ ಇಲ್ಲಿವೆಯಂತೆ.
-ಸ್ವಾತಿ, ಕನ್ನರ್ಪಾಡಿ

ಹಿಮಾಲಯ


ನನ್ನ ಕನಸಿನ ತಾಣ ಹಿಮಾಲಯ. ಇಲ್ಲಿಗೆ ಒಂದು ಸಲ ಹೋಗಬೇಕು ಅನ್ನೋ ಆಸೆ ಇದೆ. ಅಲ್ಲಿ ನಮ್ಮನ್ನು, ನಮ್ಮ ದೇಶವನ್ನು ಕಾಯುತ್ತಿರುವ ಯೋಧರು, ಅವರ ಕೆಲಸದ ಅವಧಿ, ಹಿಮದಲ್ಲಿ ಬೆಚ್ಚಗೆ ಹೇಗಿರುತ್ತಾರೆ. ಊಟ ಮಾಡಲು ಅನ್ನ ಬೇಯುವುದಿಲ್ಲ, ರೊಟ್ಟಿ ಕಾಯುವುದಿಲ್ಲ. ಇದನ್ನೆಲ್ಲ ಯೋಚಿಸಿದ ದಿನವೇ, ಈ ಕನಸಿನ ತಾಣಕ್ಕೆ ಒಮ್ಮೆ ಹೋಗಬೇಕು ಅನ್ನೋ ಅಸೆ ಶುರುವಾದದ್ದು.
-ಶುಭಲಕ್ಷ್ಮೀ, ಉಡುಪಿ

ನಯಾಗರ ಫಾಲ್ಸ್‌


ಅಮೆರಿಕ ನಯಾಗರ ಫಾಲ್ಸ್‌ ಪ್ರವಾಸಿಧಾಮ ಮರೆಯಲಾಗದ ಅನುಭವ. ಅಮೆರಿಕ ಕೆನಡಾ ಗಡಿಭಾಗ ದಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ನಯಾಗರ ಪ್ರವಾಸಿತಾಣ ಅತ್ಯಂತ ಸುಂದರ ತಾಣವಾಗಿದೆ. ಈ ಪ್ರವಾಶಿ ಧಾಮಕ್ಕೆ ದೇಶ ವಿದೇಶಗಳಿಂದ ಲಕ್ಷಗಟ್ಟಲೆ ಜನ ಬರುತ್ತಾರೆ. ಒಮ್ಮೆಯಾದರೂ ಅಲ್ಲಿÉಗೆ ಭೇಟಿ ನೀಡುವುದು ಹೆಚ್ಚಿನವರ ಜೀವನದ ಕನಸು ಆಗಿದೆ.
-ನಂದಳಿಕೆ ಬಾಲಚಂದ್ರ ರಾವ್‌, ಕಾರ್ಕಳ

Advertisement

ಲಡಾಕ್‌


ಕಾಶ್ಮೀರದ ಕಣಿವೆ ಪ್ರದೇಶವಾದ ಲಡಾಕ್‌. ಕಾಶ್ಮೀರದ ಕುರಿತು ಹಲವು ಸಿನೆಮಾ, ಕತೆ, ಕಾದಂಬರಿ ಓದಿ ಈ ಸ್ಥಳವನ್ನು ನನ್ನ ಕನಸಿನ ಲೋಕದಲ್ಲಿ ಇಳಿಸಿಕೊಂಡಿರುವೆ. ಮದುವೆಯ ಬಳಿಕ ನನ್ನ ಸಂಗಾತಿಯ ಜತೆ ಪ್ರಯಾಣಿಸಿ ಅಲ್ಲಿರುವ ಹಿಮದೊಂದಿಗೆ ಮೊಜಿನಲ್ಲಿ ತೊಡಗಿ ಕಣಿವೆ ಸಂಗಾತಿಯೊಂದಿಗೆ ಐಸ್‌ಸ್ಕ್ರೀಂ ತಿಂದು ಹಾಡು ಹರಟೆಯಲ್ಲಿ ತಲ್ಲಿನವಾಗಬೇಕೆಂಬ ಕನಸು ನನ್ನದು.
-ರಾಧಿಕಾ, ಕುಂದಾಪುರ

ಕೋಟಿಲಿಂಗೇಶ್ವರ


ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿರುವ ಕೋಟಿಲಿಂಗೇಶ್ವರ ದೇವಾಲಯದಲ್ಲಿ 108 ಅಡಿಗಳ ಬೃಹತ್‌ ಶಿವಲಿಂಗ ಇದೆ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವೆಂದು ಪರಿಗಣಿಸಲ್ಪಟ್ಟಿದೆ. ಭಕ್ತರು ಇಲ್ಲಿ 35 ಅಡಿಗಳಷ್ಟು ಎತ್ತರದ ಶಿವನ ವಾಹನವಾದ ನಂದಿಯ ವಿಗ್ರಹವನ್ನು ಸಹ ನೋಡಬಹುದು. ದೇವಾಲಯದ ಸುತ್ತಲೂ ಕೋಟಿ ಶಿವಲಿಂಗಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು.
-ಸುದೀಪ್‌ ಪೂಜಾರಿ, ನಂದಳಿಕೆ

ಸಹಸ್ರಲಿಂಗ, ಶಿರಸಿ


ಶಿವನ ಆರಾಧಿಸುವ ಶಿವರಾತ್ರಿಯೆಂದರೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ವಿಶೇಷ ಸಂಭ್ರಮ. ಶಿರಸಿಯಿಂದ ಹದಿನಾಲ್ಕು ಕಿ.ಮೀ. ದೂರದ ಸಹಸ್ರಲಿಂಗವು ಶಿವನ ತಾಣದ ಜತೆಗೆ ಪ್ರವಾಸೀ ಕ್ಷೇತ್ರವೂ , ನನ್ನ ನೆಚ್ಚಿನ ತಾಣವೂ ಹೌದು. ಶಾಂತವಾಗಿ ಹರಿಯುವ ಶಾಲ್ಮಲಾ ನದಿಯ ನಡುವಿನ ಕಪ್ಪು ಬಂಡೆಗಳ ಮೇಲೆ ಮೈದಳೆದಿರುವ ಶಿವಲಿಂಗಗಳನ್ನು ನೋಡಬೇಕೆಂದು ಕಾತರದಿಂದ ಕಾಯುತ್ತಿದ್ದೇನೆ.
-ತೇಜಸ್ವಿ ದೇವಾಡಿಗ, ಉಡುಪಿ

ಸೈಂಟ್‌ ಮೇರಿಸ್‌


ನನಗೆ ಬಾಲ್ಯದಿಂದಲೂ ಉಡುಪಿ ಜಿಲ್ಲೆಯ ಸೈಂಟ್‌ ಮೇರಿಸ್‌ ದ್ವೀಪ ನೋಡುವ ಆಸೆ. ಬೋಟ್‌ನಲ್ಲಿ ಕುಳಿತು ಅಲ್ಲಿಯ ಸೌಂದರ್ಯ ಸವಿಯುವ ಹಂಬಲ ನನ್ನದು. ಸಮುದ್ರದಲ್ಲಿ ಸಾಗುವುದು ಎಂದರೆ ರೋಮಾಂಚನವಾಗುತ್ತದೆ. ಆದರೆ ಇದುವರೆಗೂ ಅಲ್ಲಿಗೆ ತೆರಳಲು ಸಾಧ್ಯವಾಗಿಲ್ಲ. ದಿನವಿಡೀ ಅಲ್ಲಿದ್ದು, ಅಲ್ಲಿನ ಬಂಡೆಕಲ್ಲಿನ ಸೌಂದರ್ಯವನ್ನು ಆಸ್ವಾದಿಸಬೇಕೆಂಬುದು ನನ್ನ ಬಯಕೆಯಾಗಿದೆ. .
-ಸುಪ್ರಿತ್‌ ರವಿರಾಜ, ಕೆಮ್ಮಣ್ಣು

ಅಜಂತಾ ಮತ್ತು ಎಲ್ಲೋರಾ


ಅಜಂತಾ ಮತ್ತು ಎಲ್ಲೋರಾದ ಗುಹಾಂತರ ದೇವಾಲಯ ಇವು ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಇವೆರಡು ದೇವಾಲಯಗಳು ಭಾರತೀಯ ವಾಸ್ತು ಶಿಲ್ಪಕ್ಕೆ ರಾಷ್ಟ್ರಕೂಟರು ನೀಡಿದ ಅತ್ಯಮೂಲ್ಯ ಕೊಡುಗೆೆ. ಬೃಹತ್‌ ಗಾತ್ರದ ಕಲ್ಲಿನ ಮೇಲಿನ ಆಕರ್ಷಕ ಕೆತ್ತನೆಗಳು ಅದ್ಭುತವಾಗಿವೆ. ಇಂತಹ ವಿಸ್ಮಯಕಾರಿ ತಾಣಕ್ಕೆ ತೆರಳಲು ನಾನು ಉತ್ಸುಕನಾಗಿದ್ದೇನೆ.
-ವಿನಾಯಕ ಕನ್ನಂತ, ಶಂಕರನಾರಾಯಣ

ಸಾಬರಮತಿ ಆಶ್ರಮ


ನಾನು ಪ್ರವಾಸ ಹೋಗಬೇಕೆಂದು ಬಯಸುವುದು ಗುಜರಾತ್‌ಗೆ. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಗುರುಗಳಾದ ಕ್ಸೇವಿಯರ್ ಗುಜರಾತ್‌ ಬಗ್ಗೆ ಹೇಳಿದ್ದರು.ಅಲ್ಲಿನ ಪ್ರವಾಸಿ ತಾಣಗಳು, ಪ್ರಾಚೀನ ನಗರಗಳ ಬಗ್ಗೆ ತಿಳಿಸಿದ್ದರು. ನರ್ಮದಾ ನದಿ, ಸಾಬರಮತಿ ಆಶ್ರಮ, ಸರದಾರ್‌ ವಲ್ಲಭಭಾಯಿ ಪಟೇಲರ ಪ್ರತಿಮೆ, ಹಲವಾರು ಪ್ರದೇಶಗಳನ್ನು ಸಂದರ್ಶಿಸಬೇಕೆಂಬುದು ನನ್ನ ಇಚ್ಛೆ.
-ವಿದ್ಯಾಲಕ್ಷ್ಮೀ ಭಟ್‌, ಕಾರ್ಕಳ

ಯಾಣ


ಕಪ್ಪು ಕಲ್ಲಿನ ಗುಹೆಯೊಳಗೆ ಪ್ರವೇಶಿಸುವ ಅಪರೂಪದ ಪ್ರವಾಸಿ ತಾಣವೇ ಯಾಣ. ಇದರ ಬೃಹತ್‌ ಆಕಾರದ ಶಿಖರವು ಗಗನವನ್ನೇ ಚುಂಬಿಸುವಂತಿದೆ. ಈ ಉರಿ ಬಿಸಿಲಿನ ನಡುವೆಯೇ ತಂಪು ಗಾಳಿ ಬೀಸುವ ಪರಿ ಇಲ್ಲಿಯ ವೈಶಿಷ್ಟ್ಯವೇ ಸರಿ. ಶಿರಸಿ ಜಿಲ್ಲೆಯ ಸನಿಹದಲ್ಲೇ ಇದೆ. ಮುಂದಿನ ರಜಾ ಸಮಯದಲ್ಲಿ ನಾನು ಒಂದು ದಿನ ಯಾಣಕ್ಕೆಂದೇ ಮೀಸಲು ಇಡಲು ಇಚ್ಚಿಸಿದ್ದೇನೆ.
-ನಾಗವೇಣಿ ಶೇಟ್‌ , ಉಡುಪಿ

ಹಂಪಿ


ನನ್ನ ಕನಸಿನ ಪ್ರವಾಸಿತಾಣ ಹಂಪಿ.ಇದು ವಿಶ್ವಪಾರಂಪರಿಕ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಸ್ಥಳವೂ ಹೌದು. ಹೊಯ್ಸಳ ವಾಸ್ತುಶಿಲ್ಪ ಕಲೆಗಳ ಬೀಡು. ಇಂತಹ ಇತಿಹಾಸವುಳ್ಳ ಹಂಪಿಯನ್ನು ನೋಡಲು ಕಣ್ಣೆರಡು ಸಾಲದು. ನೋಡಿದಷ್ಟು ಮುಗಿಯದ ಹಂಪಿಯ ಕಲ್ಲು ಕಲ್ಲಿನಲ್ಲಿ ಬರೆದ ಶಿಲ್ಪ ಮಹಾಕಾವ್ಯ ಎಂದರೂ ಅತಿಶಯವಿಲ್ಲ. ಶಿಲ್ಪ ವೈಭವವನ್ನು ನೋಡವ ಕನಸು ಇನ್ನೂ ಹಾಗೆ ಇದೆ.
-ಉಮೇಶ್‌ ಆಚಾರ್ಯ, ಕೊಳಂಬೆ ಉಡುಪಿ

ಶಿವಗಂಗೆ


ಉತ್ತರ ಕನ್ನಡ ಜಿಲ್ಲೆಗೆ ಪ್ರಕೃತಿ ಮಾತೆ ನೀಡಿದ ಸುಂದರ ವರ ಜಲಪಾತಗಳು. ಮೂಲತಃ ಈ ಜಲಪಾತಗಳ ನಾಡಿನವಳೇ ಆದರೂ ನಾನು ನೋಡದ ಅದೆಷ್ಟೋ ಜಲಪಾತಗಳಿವೆ. ಅವುಗಳಲ್ಲಿ ಒಂದು ಈ ಶಿವಗಂಗೆ. ಶಿರಸಿಯಿಂದ 22 ಕಿ.ಮೀ. ದೂರದ ಸೋಂದಾದಲ್ಲಿ ಹಸಿರಿನ ಸೊಬಗಿನ ಮಧ್ಯ ಸುಂದರವಾಗಿ ಮೂಡಿಬಂದಿರುವ ಈ ಶಿವಗಂಗೆಯನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಹಂಬಲವಿದೆ.
-ಮೇಘನಾ ಭಟ್‌, ಉಡುಪಿ

ಸಿಲ್ವರ್‌ ಫಾಲ್ಸ್


ಒರೆಗಾನ್‌ ರಾಜ್ಯದ ಪೋರ್ಟ್‌ ಲ್ಯಾಂಡ್ನಿಂದ 100 ಕಿ.ಮೀ. ದೂರದಲ್ಲಿರುವ ಸಿಲ್ವಫಾಲ್ಸ್ ರಾಷ್ಟ್ರೀಯ ಉದ್ಯಾನ ನನ್ನ ಕನಸಿನ ತಾಣ. ಇಲ್ಲಿ ಜಲಪಾತದ ಮೇಲ್ಭಾಗವನ್ನು ತಲುಪಿ ಅಲ್ಲಿಂದ ಇಳಿಜಾರಾದ ಒದ್ದೆ ದಾರಿಯಲ್ಲಿ ನಡೆದು ದಕ್ಷಿಣ ಭಾಗದಲ್ಲಿ ಕೆಳಗೆ ಧುಮುಕುವ ಅತ್ಯಂತ ಸುಂದರ ಸಿಲ್ವರ್‌ ಫಾಲ್ಸ್ ಎಲ್ಲರ ಮೆಚ್ಚುಗೆಯ ತಾಣ. ಜಲಪಾತದ ಹಿಂದೆಯೂ ನಡೆದು ಹೋಗುವಂತೆ ಕಾಲುದಾರಿ ನಿರ್ಮಿಸಿದ್ದು ವಿಶೇಷ.
-ವಿಠಲದಾಸ್‌ ಭಟ್‌, ಮಣಿಪಾಲ

ಮುಳ್ಳಯ್ಯನಗಿರಿ


ಮುಳ್ಳಯ್ಯನಗಿರಿ ಶಿಖರ ಇದು ನನ್ನ ನೆಚ್ಚಿನ ಪ್ರವಾಸಿ ತಾಣ. ಇದು ಚಿಕ್ಕಮಗಳೂರು ಜಿಲ್ಲೆ
ಯ ತಿಪ್ಪನಹಳ್ಳಿಯ ಗ್ರಾಮದಲ್ಲಿದೆ. ದೂರದಿಂದ ಈ ಶಿಖರವು ಹಸಿರು ಹೊದಿಕೆಯನ್ನು ಹೊದ್ದುಕೊಂಡು ನೋಡುಗರನ್ನು ರೋಮಾಂಚನಗೊಳಿಸುವ ತಾಣ. ಈ ಶಿಖರದ ಸೌಂದರ್ಯವನ್ನು ಹತ್ತಿರದಿಂದ ಕಣ್ತುಂಬಿಸಿ ಕೊಂಡು ಪ್ರಕೃತಿಯ ಸೌಂದರ್ಯವನ್ನು ಸವಿಯ ಬೇಕೆನ್ನುವ ಆಸೆ ನನ್ನದು.
-ದಿತ್ಯಾ ಗೌಡ, ಕಾರ್ಕಳ

ಸೀಗೆ ಗುಡ್ಡ


ಅದೆಷ್ಟೋ ದಿನದ ಕನಸಿದು. ಹಾಸನ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ ಕಪ್ಪತಗುಡ್ಡ ಅಥವಾ ಅದನ್ನು ಸೀಗೆ ಗುಡ್ಡ ಎಂದು ಕರೆಯುತ್ತಾರೆ. ಇಲ್ಲಿ ಗಾಳಿಯಂತ್ರಗಳ ಸಂಖ್ಯೆ ಜಾಸ್ತಿಯಾಗಿದ್ದು ನೋಡಲು ಸುಂದರ ತಾಣ. ಸುತ್ತ ಮುತ್ತ ಬೆಟ್ಟ – ಗುಡ್ಡಗಳಿಂದ ಕೂಡಿದ, ಹಸಿರೇ ಹಾಸಿಗೆಯಾದಂತಹ ಸುಂದರ ದೃಶ್ಯ ಅಲ್ಲಿದೆ. ಈ ಬಾರಿಯ ಬೇಸಗೆ ರಜೆಗೆ ಇಲ್ಲಿ ಹೋಗಲೇ ಬೇಕೆನ್ನುವ ಆಸೆ ಇದೆ.
-ಎ.ಸಿ ಶೋಭಾ, ಕಾರ್ಕಳ

ಸೋಮೇಶ್ವರ ಕಡಲ ಕಿನಾರೆ


ನನ್ನ ನೆಚ್ಚಿನ ಕನಸಿನ ತಾಣವೆಂದರೆ ಬೈಂದೂರಿಗೆ ಸಮೀಪ ವಿರುವ ಕಡಲು ನದಿಯ ಸಂಗಮವಾಗಿರುವ ಸೋಮೇಶ್ವರ ಕಡಲ ಕಿನಾರೆ. ಸೌಂದರ್ಯವೇ ಮೈತುಂಬಿಕೊಂಡು ಕಣ್ಮನ ಸೆಳೆಯುವ ಪ್ರಕೃತಿಯ ಮೋಹಕತೆ, ಮನಸ್ಸಿಗೆ ಪ್ರಸನ್ನತೆ ಕರುಣಿಸುವ ಮರಗಿಡಗಳು, ಲತೆ-ಬಳ್ಳಿಗಳು ಹಾಗೂ ಕಲ್ಲು ಬಂಡೆಯ ಮೇಲೆ ಕಾಲು ಚಾಚಿ ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬೇಕೆನ್ನುವುದು ನನ್ನ ಕನಸು.
-ಪ್ರಿಯಾಂಕಾ ಬಿಜೂರು, ಬೈಂದೂರು

ಏಕತೆಯ ಪ್ರತಿಮೆ


ನನ್ನ ಕನಸಿನ ತಾಣ ನರ್ಮದಾ ಜಿಲ್ಲೆಯಲ್ಲಿರುವ ಸಾಧು ಬೆಟ್‌ ದ್ವೀಪದಲ್ಲಿ ತಲೆ ಎತ್ತಿರುವ ಬರೋಬ್ಬರಿ 182 ಮೀಟರ್‌ ಎತ್ತರದ “ಏಕತೆಯ ಪ್ರತಿಮೆ’. ಈ ಪ್ರತಿಮೆ ಯನ್ನು ವೀಕ್ಷಿಸಲು ಅನುಕೂಲವಾಗುವಂತೆ 153 ಮೀಟರ್‌ ಎತ್ತರದಲ್ಲಿ ಒಂದೇ ಬಾರಿಗೆ ಸುಮಾರು 200 ಮಂದಿ ನಿಲ್ಲಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಗತ್ತಿನಲ್ಲಿ ಅಗ್ರಮಾನ್ಯವಾಗಿ ಗುರುತಿಸಲ್ಪಡುವ ನನ್ನ ಕನಸಿನ ತಾಣವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳುವ ತವಕ.
-ರಂಜಿತ್‌ ಶೆಟ್ಟಿ , ಮಟ್ಟಾರು

ವರಂಗ ಕೆರೆ ಬಸದಿ


ಕೆರೆ ಬಸದಿ ಎಂದೇ ಪ್ರಸಿದ್ಧಿಯಾಗಿರುವ ಹೆಬ್ರಿ ಸಮೀಪದ ವರಂಗ ಜೈನ ಬಸದಿ ನಾನು ತುಂಬಾ ಇಷ್ಟ ಪಡುವಂತಹ ಸ್ಥಳ. ಯಾಕೆಂದರೆ ಭಕ್ತಿಯ ಜತೆಗೆ ನೆಮ್ಮದಿಯು ಕೂಡ ಸಿಗುವ ತಾಣ ಅದು, ಸುತ್ತ ಹಸಿರು, ಕೆರೆಯ ನಡುವೆ ಜೈನ ಬಸದಿ, ಬೋಟಿನಲ್ಲಿ ಪ್ರಯಾಣಿಸಬೇಕು. ವರಂಗದ ಬಗ್ಗೆ ವೀಡಿಯೊಗಳನ್ನು ನೋಡಿ, ಕೇಳಿ ತಿಳಿದುಕೊಂಡಿದ್ದೇನೆ ಅಷ್ಟೆ. ಒಮ್ಮೆಯೂ ನೋಡಲಿಲ್ಲ .
-ಚೈತ್ರಾ, ಧರ್ಮಸ್ಥಳ

ಕನ್ಯಾಕುಮಾರಿ


ಭಾರತಮಾತೆಯ ದಕ್ಷಿಣದ ತುದಿಯಲ್ಲಿರುವ ಸ್ಥಳ ಕನ್ಯಾಕುಮಾರಿ. ಹಿಂದೂ ಮಹಾ ಸಾಗರ, ಬಂಗಾಲಕೊಲ್ಲಿ, ಅರಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ. ಅಲ್ಲಿರುವ ಬಂಡೆ ಮೇಲೆ ನೆಲೆ ನಿಂತಿರುವ ವಿವೇಕಾನದರ ರಾಕ್‌ ಮೆಮೋರಿಯಲ್‌ ನೋಡ ಬೇಕೆಂಬ ಆಸೆ ಇದೆ. ಇಂತಹ ಒಂದು ಸುಂದರವಾದ ಸ್ಥಳವನ್ನು ನೋಡಬೇಕೆಂಬ ಆಸೆ ತುಂಬಾ ಇದೆ.
-ಸುಶ್ಮಿತಾ, ಕಟಪಾಡಿ

ಜೋಗ ಜಲಪಾತ


“ಮಾನವನಾಗಿ ಹುಟ್ಟಿದ್‌ ಮ್ಯಾಲೆ ಏನೇನ್‌ ಕಂಡಿ’ ಹಾಡನ್ನು ಬಾಲ್ಯದಿಂದ ಕೇಳಿದಾಗಿನಿಂದಲೂ ಒಮ್ಮೆ ಜೋಗ ಜಲಪಾತ ನೋಡಬೇಕು ಎನ್ನುವುದು ನನ್ನ ಕನಸು. ಈ ಸಲವಾದರೂ ಒಮ್ಮೆ ಸ್ನೇಹಿತರೊಡನೆ ಭೇಟಿ ನೀಡಿ ರಾಜಾ, ರಾಣಿ, ರಾಕೆಟ್‌ನ
ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಪ್ರಕೃತಿಯ ರಮಣೀಯತೆಯನ್ನು ಸವಿಯಬೇಕು. ಸ್ನೇಹಿತರ ಜತೆ ನಿಂತು ಅದರ ವೈಭವವನ್ನು ಸೆರೆಹಿಡಿಯಬೇಕೆನ್ನುವುದು ನನ್ನಾಸೆ.
-ಸಂದೇಶ್‌ ಕಜೆಲೆಕ್ಕಿ, ಕಾರ್ಕಳ

ರಾಜಸ್ಥಾನ


ರಾಜಸ್ಥಾನವು ನನ್ನ ಕನಸಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿರುವ ಮಹಲುಗಳು, ಕೋಟೆಗಳು ಆಕರ್ಷಕವಾಗಿ ಕುತೂಹಲ ಮೂಡಿಸುವಂತಿದೆ. ಡೆಸರ್ಟ್‌ ಸಫಾರಿಯೂ ಇಲ್ಲಿಯ ಆಕರ್ಷಣೆಗಳಲ್ಲಿ ಒಂದು. ಇಲ್ಲಿಯ ಜನರ ಆಹಾರ ಹಾಗೂ ಉಡುಪುಗಳು ವೈವಿದ್ಯತೆಯಿಂದ ಕೂಡಿದೆಯಂತೆ. ಇಂತಹ ಒಂದು ಸುಂದರವಾದ ತಾಣವನ್ನು ಕಣ್ಣಾರೆ ನೋಡಿ ಆನಂದಿಸಬೇಕೆಂಬುವುದು ನನ್ನ ಬಹು ಸಮಯದ ಆಸೆ.
-ಸುಧಾ ವಿ. ರಾವ್‌, ಕುಂಜಿಬೆಟ್ಟು ಉಡುಪಿ

ಉತ್ತರಾಖಂಡ್‌ನ‌ ಹೂಗಳ ಕಣಿವೆ


ನನ್ನ ಕನಸಿನ ತಾಣ ಉತ್ತರಾಖಂಡ್‌ನ‌ ಹೂಗಳ ಕಣಿವೆ. ಇದು ರಾಷ್ಟ್ರೀಯ ಉದ್ಯಾ ನವಾಗಿದ್ದು, ಮುನ್ನೂರಕ್ಕೂ ಅಧಿಕ ಬಗೆಯ ಹೂಗಳನ್ನು ಹೊಂದಿದೆ. ಪಶ್ಚಿಮ ಹಿಮಾಲ ಯದ ಉನ್ನತ ಪ್ರದೇಶದಲ್ಲಿರುವ ಈ ಉದ್ಯಾನವು ಅಗಾಧ ಜಲರಾಶಿ ಮತ್ತು ವನ್ಯ ಸಂಪತ್ತುಗಳಿಂದ ಕಂಗೊಳಿಸುತ್ತಿದೆ. ಹೀಗಾಗಿ ಇಲ್ಲಿನ ಪರ್ವತಗಳಲ್ಲಿ ಚಾರಣ ಮಾಡಬೇಕೆನ್ನುವುದು ನನ್ನ ಆಸೆಯಾಗಿದೆ.
-ರೇಶ್ಮಾ ನಾಯಕ್‌, ಆತ್ರಾಡಿ

ಬನವಾಸಿ


ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಭಾರ ತದ ಹಳೆಯ ನಗರ ವಾಗಿರುವ ಬನವಾಸಿ ನನ್ನ ನೆಚ್ಚಿನ ತಾಣ. ಇದು ಧಾರ್ಮಿಕ, ಐತಿಹಾಸಿಕ ಸ್ಥಳವಾಗಿದ್ದು ನೋಡ ಬೇಕೆನ್ನುವ ಆಸೆ ಉತ್ಕಟವಾಗಿದೆ. ಭಾರತದ ಸಂಸ್ಕೃತಿಗೆ ಕದಂಬರು ನೀಡಿದ ಕೊಡುಗೆಯನ್ನು ಕಣ್ತುಂಬಿಕೊಳ್ಳಬೇಕೆನ್ನುವುದು ನನ್ನ ಹಂಬಲ. ಅಲ್ಲಿರುವ ಮಧುಕೇಶ್ವರ ದೇವಾಲಯದ ಸೊಬಗನ್ನು ಕಾಣಬೇಕೆನ್ನುವುದು ನನ್ನ ಆಸೆ.
-ಶಾಂತಿ ಬಿ.ಎಂ., ಡಾ| ಜಿ. ಶಂಕರ್‌ ಕಾಲೇಜು ಉಡುಪಿ 

ಉದಕಮಂಡಲ


ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಉದಕ ಮಂಡಲದಲ್ಲಿ ವರ್ಷವಿಡೀ ವಸಂತಕಾಲ ಅತೀ ಚಳಿಯೂ ಇಲ್ಲ ,ಉರಿ ಬಿಸಿಲೂ ಇಲ್ಲ. ನಿಸರ್ಗ ಸೌಂದರ್ಯಕ್ಕೆ ಹೆಸರಾದ ನೀಲಗಿರಿ ಬೆಟ್ಟದ ಸಾಲಿನ ನಡುವೆ ಇರುವ ದಕ್ಷಿಣಭಾರತದ ಗಿರಿಧಾಮಗಳ ರಾಣಿ ಎನ್ನುತ್ತಾರೆ. ಇಲ್ಲಿಯ ಉದ್ಯಾನವನದ ಫ‌ಲಪುಷ್ಪ ಪ್ರದರ್ಶನ, ಸರೋವರದಲ್ಲಿ ದೋಣಿವಿಹಾರ ಮಾಡುವ ಆಸೆ ನನ್ನದು.
-ವಾರಿಜಾ ಪಿ.ಎನ್‌. ಆಚಾರ್ಯ, ಕೊಡಂಕೂರು

ಉಪ್ಪಿನಕುದ್ರು ದ್ವೀಪ


ಉಪ್ಪಿನಕುದ್ರು ದ್ವೀಪ ಕುಂದಾಪುರದಲ್ಲಿದೆ ಈ ವರೆಗೂ ಅಲ್ಲಿಗೆ ಹೋಗಿಲ್ಲ ನಾನು ಒಮ್ಮೆ ಹೋಗಬೇಕು ಅಂತ ಆಸೆ ಇದೆ… ಈ ದಸರಾ ರಜೆಯಲ್ಲಿ ಒಮ್ಮೆ ಹೋಗಿ ಬರಬೇಕು.. ದಡದಲ್ಲಿ ನಿಂತು ಸಮುದ್ರ ನೋಡುವುದಕ್ಕೂ ದ್ವೀಪದ ಮದ್ಯೆ ನಿಂತು ಸುತ್ತಲೂ ನೀಲಿ ಸಾಗರ ನೋಡುವುದಕ್ಕೂ ವ್ಯತ್ಯಾಸ ಇದೆ. ಅದರ ಅನುಭವವನ್ನು ಪಡೆಯಬೇಕು. ಆ ಊರು ಕೂಡ ಕಲೆ ಗೆ ಹೆಸರಾಗಿದೆ.ಉಪ್ಪಿನ ಟ್ರೇಡ್‌ ಕೂಡ ಅಲ್ಲಿ ಆಗುತ್ತದೆಯಂತೆ.
-ಸ್ವಸ್ತಿಕ್‌, ಮೂಡುಬಿದಿರೆ

ತಾಜ್‌ ಮಹಲ್‌


ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ, ಭಾರತದ ಆಗ್ರಾದಲ್ಲಿ ಯಮುನಾ ನದಿ ತಟದಲ್ಲಿರುವಂತಹ ತಾಜ್‌ ಮಹಲ್‌ ಅನ್ನು ನೋಡಬೇಕು ಎಂಬ ಆಸೆ ನನ್ನಲ್ಲಿದೆ. ಇದರ ಸೌಂದರ್ಯ ಮತ್ತು ಕಥೆಗಳ ಬಗ್ಗೆ ಕೇಳಿದ್ದೇನೆ. ಇದೊಂದು ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವಾಗಿದೆ. ಈ ಸ್ಮಾರಕವನ್ನು ಮುಖಾಮುಖೀ ಯಾಗಿಸುವುದು ನನ್ನ ಬಹುದಿನಗಳ ಕನಸಾಗಿದೆ.
-ಸಮೀಕ್ಷಾ ಜೋಗಿ, ಹಿರ್ಗಾನ, ಕಾರ್ಕಳ

ಶಿಮ್ಲಾ-ಮನಾಲಿ


ಹಿಮದ ಬೆಟ್ಟಗುಡ್ಡಗಳ ನಡುವೆ ಸಂಚರಿಸುತ್ತಾ ಪ್ರಕೃತಿಯ ಸೌಂದರ್ಯ ಆಸ್ವಾದಿಸುವುದೆಂದರೆ ನನಗಿಷ್ಟ. ಪ್ರಸ್ತುತ ವಿದ್ಯಾರ್ಥಿಯಾದ ನಾನು ನನ್ನ ಮುಂದಿನ ಔದ್ಯೋಗಿಕ ಬದುಕಿ ನಲ್ಲಿ ಒಂದು ಬಾರಿಯಾದರೂ ಶಿಮ್ಲಾ-ಮನಾಲಿಗೆ ಭೇಟಿ ನೀಡುವ ಕನಸನ್ನು ಕಟ್ಟಿಕೊಂಡಿದ್ದೇನೆ. ಚುಮುಚುಮು ಚಳಿಯಲ್ಲಿ ಸಂಚರಿಸಿ, ಬಿಸಿಬಿಸಿ ಟೀಯನ್ನು ಸವಿಯುತ್ತಾ, ಅಲ್ಲಿನ ಜೀವನಶೈಲಿ ವೀಕ್ಷಿಸುವ ಹಂಬಲವಿದೆ.
-ಶ್ರೀರಕ್ಷಾ ಶಿರ್ಲಾಲ್‌ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next