ಪಶ್ಚಿಮ ಘಟ್ಟದ ಸೌಂದರ್ಯ ಅದರ ವಿಸ್ಮಯ, ಮಳೆ ಹಾಗೂ ಕಾಡಿನ ಕತ್ತಲೆಯ ನಿಗೂಢ ಜಗತ್ತು, ಇದು ಎಲ್ಲವೂ ಅದ್ಭುತ. ಕಾಡಿನಲ್ಲಿ ಹುಟ್ಟುವ ಸಣ್ಣ ಸಣ್ಣ ಚಿಲುಮೆ ಮಳೆಗಾಲದಲ್ಲಿ ಸಣ್ಣ ತೊರೆಯಾಗಿ ಹರಿದು ನದಿಯಾಗಿ ಎತ್ತರದ ಬೆಟ್ಟದ ಕಣಿವೆಯಿಂದ ಬಂಡೆಗಳನ್ನು ದಾಟಿ ಭೋರ್ಗರೆಯುವ ಜಲಪಾತಗಳನ್ನು ಸೃಷ್ಟಿಸಿ ಅದೆಷ್ಟೋ ಮೃಗಗಳಿಗೆ ನೀರುಣಿಸಿ ಕೊನೆಗೆ ಹೊಳೆಯಾಗಿ ಸಾಗರ ಸೇರುವ ವೈಭವವೆ ಅಪೂರ್ವ, ಅಂತಹದೇ ಒಂದು ಸುಂದರ ಜಲಪಾತವನ್ನು ಅನ್ವೇಷಿಸಿ ಹೊರಟ ನಮ್ಮ ಚಾರಣದ ಒಂದು ಸಣ್ಣ ಕತೆ ಇದು.
ಅದು ಮಳೆಗಾಲದ ಸಮಯ, ನದಿ ಹೊಳೆಗಳು ತುಂಬಿ ಹರಿಯುತ್ತಿದ್ದ ಸಮಯ. ಎಂದಿನಂತೆ ನಾನು ಮತ್ತು ಹರ್ಷ ಚಾರಣದ ಜಾಗವನ್ನು ಹುಡುಕುತ್ತಿದ್ದೆವು. ಯಾಕೋ ಏನೋ ಈ ಬಾರಿ ಚಾರಣದ ಬದಲು ಬೈಕ್ ನಲ್ಲಿ ಆಫ್ ರಾಡಿಂಗ್ ಹೋಗೋಣ ಅಂತ ಚರ್ಚೆ ಶುರುವಾಯಿತು. ಹೋಗುವುದಾದರೂ ಎಲ್ಲಿಗೆ ಎಂದು ಯೋಚಿಸುವಾಗ ನೆನಪಾದದ್ದು ಮಲೆಕುಡಿಯರ ಊರು…
ದಟ್ಟ ಕಾಡಿನ ಒಳಗೆ ಸುಮಾರು 14/15km ದೂರದ ಬ್ರಿಟಿಷ್ ಕಾಲದ ರಸ್ತೆ, ರಸ್ತೆಯ ಕೊನೆಯಲ್ಲಿ ಒಂದು 20/25 ಮನೆ ಮಲೆಕುಡಿಯ ಸಮುದಾಯದವರ ಊರು. ಶಾಲೆಯ ಬೋರ್ಡ್ ನೋಡಿದವರು ಕೆಲವರು ಮಾತ್ರ ಅದರಲ್ಲೂ ಶಾಲೆ ಮುಗಿಸಿದವರು ಮಾತ್ರ ಬೆರಳೆಣಿಕೆಯಷ್ಟು ಜನ. ಓದಿದವರು ಪೇಟೆಯಲ್ಲಿ ಕೆಲಸದಲ್ಲಿ ಇದ್ದರೂ, ಹಲವಾರು ಮಂದಿ ಈಗಲೂ ಕಾಡುತ್ಪತ್ತಿ ಮತ್ತು ಕೃಷಿ ನಂಬಿಕೊಂಡು ಬದುಕುವರೆ ಹೆಚ್ಚು. ನಾನು ಹರ್ಷ ಹಾಗೂ ಭುವನ್ ಹಳ್ಳಿಗೆ ಪರಿಚಿತರೇ. ನಾವು ಮೊದಲು ಹಲವಾರು ಬಾರಿ ಆ ಹಳ್ಳಿಗೆ ಭೇಟಿ ನೀಡಿದ್ದೆವು. ಆದರೆ ಪ್ರತಿ ಬಾರಿ ನಾವು ಭೇಟಿ ನೀಡಿದ್ದು ಬೇಸಿಗೆಯ ಸಮಯದಲ್ಲಿ ಹಾಗೆಯೇ ಈ ಬಾರಿ ಮಳೆಗಾಲದಲ್ಲಿ ಹೋಗಿ ಬರುವ ತೀರ್ಮಾನ ಮಾಡಿದೆವು.
6ಗಂಟೆ ಬೆಳಗ್ಗೆ ನಾನು, ಹರ್ಷ ಹಾಗೂ ಭುವನ್ ಗಾಗಿ ಕಾಯುತ್ತಿದ್ದೆ. ನೆಚ್ಚಿನ ಕಾರಂತರ ಹೋಟೆಲಿನಲ್ಲಿ ಬೆಳಗಿನ ಉಪಹಾರ ಮುಗಿಸಿ, ನಮ್ಮ ಪ್ರಯಾಣ ಮುಂದುವರೆಸಿದೆವು. ದಾರಿಯುದ್ದಕ್ಕೂ ನಮ್ಮಲ್ಲಿ ಒಂದೇ ಯೋಚನೆ, ಹೋಗುವ ದಾರಿ ಹಾಗೂ ಅದರಲ್ಲಿ ಎದುರಾಗಬಹುದಾದ ತೊಂದರೆಗಳು. ಸುಮಾರು 8.30ಗೆ ನಾವು ಕಾಡಿನ ಬಳಿ ಬಂದೆವು, ಅಲ್ಲಿಂದ ಆಫ್ ರೋಡ್ ಪ್ರಾರಂಭ , ಜಿಟಿ ಜಿಟಿ ಮಳೆಗೆ ರೈನ್ ಕೋಟ್ ಹಾಕಿದರು ಒದ್ದೆಯಾದ ನಾವು ನಮ್ಮ ಪ್ರಯಾಣ ಮುಂದುವರಿಸಿದೆವು. ಹಳ್ಳಿಯ ಜನ ಮಳೆಗಾಲದಲ್ಲಿ ಜೀಪಿನಲ್ಲಿ ಹೋಗಿ ಬರುತಿದ್ದ ಕಾರಣ ರಸ್ತೆಯ ಎರಡು ಬದಿ ಜೀಪಿನ ಟೈಯರ್ ಗಳು ಹುಗಿದು, ಹೊಂಡಗಳಾಗಿದ್ದವು. ಆದರೂ ಅದರ ನಡುವಲ್ಲಿ ಎದ್ದು ಬಿದ್ದು, ಬೈಕ್ ಅನ್ನು ಕೆಸರಿಗೆ ಮುಳುಗಿಸಿ ಹೋಗುವಾಗ ಒಂದು ಕಡೆ ಬೈಕ್ ಕೈ ಕೊಟ್ಟಿತು. ಭುವನ್ ಇಳಿದು ಬೈಕ್ ಮುಂದೆ ತಳ್ಳಿದ, ಸ್ವಲ್ಪ ಇಂಜಿನ್ ಬಿಸಿ ಆರಿದ ಮೇಲೆ ಬೈಕ್ ಮುಂದೆ ನಡೆಯಿತು. ಹೇಗೋ ಮಾಡಿ ಮಲೆಕುಡಿಯರ ಊರಿಗೆ ನಾವು ತಲುಪಿದೆವು. 14km ರಸ್ತೆ ಕ್ರಮಿಸಲು ನಾವು ತೆಗೆದ ಸಮಯ ಸರಾಸರಿ 2ಗಂಟೆ.
ಹಳ್ಳಿ ತಲುಪಿದ ಕೂಡಲೇ ನಮಗೆ ಎದುರಾದದ್ದು ಹಳ್ಳಿಯ ಹಿರಿಯ ಶಾಂತಪ್ಪ, ತೋಟದ ಕೆಲಸದಲ್ಲಿದ್ದ ಆತ ನಮ್ಮನ್ನು ಕಂಡು ವಿಚಾರಿಸಿದ. ನಾವು ನಮ್ಮ ಪರಿಚಯ ತಿಳಿಸಿದ ನಂತರ ಆತ ಮನೆಗೆ ಕರೆದ. ನಾವು ಹೋಗಿ ಸ್ವಲ್ಪ ನೀರು ಕುಡಿದು ದಣಿವು ಆರಿಸುವಾಗ ಗುಡ್ಡದ ಮೇಲಿನಿಂದ ಹರಿಯುತ್ತಿರುವ ಒಂದು ಜಲಪಾತದದ ಸುಳಿವು ಕಂಡಿತು. ಅದರ ಬಗ್ಗೆ ವಿಚಾರಿಸಿದಾಗ, ಬಲು ಕಷ್ಟದ ಹಾದಿ ಜಲಪಾತದ ಬುಡ ತಲುಪಲು ಹರಸಾಹಸ ಪಡಬೇಕಾಗುತ್ತದೆ ಎಂಬುದು ತಿಳಿಯಿತು. ಜಾರುವ ಬಂಡೆ , ರಕ್ತ ಹೀರುವ ಜಿಗಣೆ, ತುರಿಕೆ ಉಂಟುಮಾಡುವ ಗಿಡ ಹಾಗೆಯೇ ಕಾಡಿನಲ್ಲಿ ಸಂಚರಿಸುವ ಕಾಡಾನೆಗಳ ಹಿಂಡು , ಚಿರತೆಯ ಓಡಾಟ ಕಂಡದ್ದು ಉಂಟು ಕಾಡೆಮ್ಮೆಯ ಹಿಂಡು ಕಾಡಿನಲ್ಲಿದೆ ಎಂದು ಹೇಳಿದ .
ಅಲ್ಲಿಗೆ ಹೋದವರ ಸಂಖ್ಯೆ ಬಹಳ ಕಮ್ಮಿ ಹಿಂದೊಮ್ಮೆ ಕಾಡುತ್ಪತ್ತಿಯ ಹುಡುಕಾಟದಲ್ಲಿ ಹೋದಾಗ ಜಲಪಾತ ಕಂಡ ನೆನಪು ಎಂದು ಹೇಳಿದ. ಆದರೆ ಆಗ ನೀರು ಮಾತ್ರ ತುಂಬಾ ಕಮ್ಮಿ ಮತ್ತೆ ಅಲ್ಲಿಗೆ ಹೋಗಲು ಬೇಸಿಗೆ ಒಳ್ಳೆಯ ಸಮಯ ಎಂದು ಹೇಳಿದ. ನೀರಿಲ್ಲದ ಜಲಪಾತದಲ್ಲಿ ಏನಿದೆ ಎಂದು ನಾವು ಮೂವರೇ ಮಾತಾಡಿಕೊಂಡೆವು. ನಮ್ಮಲ್ಲಿ ಈಗ ಒಂದು ಹೊಸ ಜಲಪಾತ ನೋಡುವ ತವಕ ಆದರೆ ಹೋಗುವ ದಾರಿ ಮಾತ್ರ ಕಷ್ಟಸಾಧ್ಯ. ಶಾಂತಪ್ಪನ ಬಳಿ ಜಲಪಾತದ ಸರಿಯಾದ ಮಾಹಿತಿ ಇದ್ದರೂ ಅವನು ನಮ್ಮೊಂದಿಗೆ ಕಾಡಿಗೆ ಬರುವ ಸಾಹಸ ಮಾಡಲಿಲ್ಲ,ನಮ್ಮೊಂದಿಗೆ ಯಾರಾದರೂ ಬರುವವರು ಯಾರಾದರೂ ಸಿಗಬಹುದೇ ಎಂದು ಕೇಳಿದೆವು . ಶಾಂತಪ್ಪನ ಮಗ ಪ್ರಕಾಶ ನಮ್ಮ ನೆರವಿಗೆ ನಿಂತ. ಅಲ್ಲಿಗೆ ಹೋಗುವ ದಾರಿಯ ನೆನಪಿಲ್ಲ ಆದರೆ ಹೋಗುವುದಾದರೆ ನಾನು ಜೊತೆಯಾಗಿ ಬರುತ್ತೇನೆ ಎಂದು ಹೇಳಿದ .ಶಾಂತಪ್ಪ ಪ್ರಕಾಶನಿಗೆ ಕೆಲವೊಂದು ದಾರಿಯ ಗುರುತು ಹೇಳಿದ ಅಲ್ಲದೆ ಕತ್ತಲಾಗುತ್ತಲೆ ಬಂದು ಬಿಡಿ ಎಂದು ಕಳುಹಿಸಿದ. ಪ್ರಕಾಶ ತಲೆಗೆ ಒಂದು ಪ್ಲಾಸ್ಟಿಕ್ ತೊಟ್ಟೆ ಕೈಯಲ್ಲಿ ಒಂದು ಕತ್ತಿ ಹಿಡಿದು ಕಾಡಿನ ಒಳಗೆ ನಡೆದೆಬಿಟ್ಟ…
ಕಾಡಿನ ಒಳಗೆ ಹೋಗುತ್ತಿದ್ದಂತೆ ಕತ್ತಲೆ ಆವರಿಸಿ, ಸೂರ್ಯನ ಕಿರಣ ಭೂಮಿಗೆ ಬೀಳುತ್ತಿರಲಿಲ್ಲ. ಕೆಲವೊಂದು ಮರದ ತುದಿಯನ್ನು ನೋಡಲು ಕುತ್ತಿಗೆ ಎತ್ತಿ ನೋಡಿದರೂ ಸಾಕಾಗದು ಅಷ್ಟು ಎತ್ತರ. ಇನ್ನೂ ಕೆಲವೊಂದು ಮರದ ಸುತ್ತಳತೆ ಹಿಡಿಯಲು ಒಬ್ಬನಂತು ಸಾಕಾಗದು. ಎಲ್ಲವನ್ನು ನೋಡುತ್ತಾ ಪ್ರಕಾಶ ನಡೆದ ದಾರಿಯಲ್ಲೇ ನಾವು ನಡೆಯುತ್ತ ಮುಂದೆ ಮುಂದೆ ಸಾಗಿದೆವು. ದೂರದಲ್ಲಿ ಇದ್ದ ಹಳೆಯ ದೈವದ ಗುಡಿ ದಾಟಿ ಶಿಕಾರಿಗಾಗಿ ಬರುತಿದ್ದ ಜನ ಕೂರಲು ಮಾಡಿದ್ದ ಕಲ್ಲಿನ ದಂಡೆ ದಾಟಿ ಮುಂದೆ ಸಾಗಿದೆವು ಶಾಂತಪ್ಪ ಹೇಳಿದ ಎಲ್ಲ ದಾರಿಯ ಕುರುಹುಗಳು ದಾಟಿದೆವು ಹಾಗೋ ಹೇಗೋ ನಾವು ಜಲಪಾತದ ನೀರು ಹರಿಯುವ ಸಣ್ಣ ತೊರೆಯ ಬಳಿ ಬಂದೆವು .ಅಲ್ಲಿಂದ ನಾವು ತೊರೆಯ ಬದಿಯಲ್ಲಿಯೇ ನಡೆದೆವು, ಜಾರುವ ಕಲ್ಲು ಬಂಡೆ,ಕಾಲಿಗೆ ಕಚ್ಚುತ್ತಿದ್ದ ಜಿಗಣೆಯನ್ನು ತೆಗೆಯುತ್ತಾ ,ಭುವನ್ ಕೇಳುತ್ತಿದ್ದ ಕೆಲವೊಂದು ಪ್ರಶ್ನೆಗೆ ನಾನು ಹರ್ಷ ನಗುತ್ತಾ ಮುಂದೆ ಹೋಗುತ್ತಿದ್ದೆವು. ಹರ್ಷ ಏನನ್ನೋ ನೋಡಿ ಅಲ್ಲೇ ನಿಂತು ನಮ್ಮನು ಕರೆದ ನೋಡಿದರೆ ಕಾಡೆಮ್ಮೆಯ ಅಸ್ಥಿಪಂಜರ. ಪ್ರಕಾಶ ಅದನ್ನು ನೋಡಿ ಯಾವುದೋ ಪ್ರಾಣಿ ಬೇಟೆಯಾಡಿ ಇಲ್ಲಿ ತಿಂದಿರಬಹುದು ಎಂದು ಊಹಿಸಿದ, ಆದರೆ ನಮ್ಮಲ್ಲಿ ಒಂದೇ ಯೋಚನೆ ಜಲಪಾತ ನೋಡುವುದು. ಅಲ್ಲಿಂದ ಸ್ವಲ್ಪ ದೂರದಲ್ಲೇ ಜಲಪಾತದ ದೃಶ್ಯ ನಮ್ಮ ಕಣ್ಣಿಗೆ ಬಿತ್ತು. ದೂರದಿಂದಲೇ ನೋಡಲು ಅದು ಸುಂದರ ಜಲಪಾತ ಶಾಂತಪ್ಪ ಇದೆ ಜಾಗದಿಂದ ಈ ಜಲಪಾತವನ್ನು ಕಂಡಿರಬಹುದು, ನಾವು ನಿಂತ ಜಾಗದಿಂದ ಜಲಪಾತದ ಬಳಿ ಹೋಗಲು ಇನ್ನು ಸ್ವಲ್ಪ ಇಳಿ ಜಾರಿನ ಗುಡ್ಡ ಇಳಿಯಬೇಕಾಯೇತು , ನಾವು ಯಾವುದೇ ತೊಂದರೆ ಇಲ್ಲದೆ ಅಲ್ಲಿಯ ತನಕ ತಲುಪಿದ್ದೆವು. ಅಲ್ಲಿಂದ ಮುಂದೆ ಹೋಗುವ ದಾರಿ ಮಾತ್ರ ಕಷ್ಟ ಸಾಧ್ಯ ಎಂದು ಪ್ರಕಾಶ ಹೇಳಲು ಪ್ರಾರಂಭಿಸಿದ. ಆದರೆ ಅಲ್ಲಿಯ ತನಕ ಬಂದು ಜಲಪಾತವನ್ನು ಸರಿಯಾಗಿ ನೋಡದೆ ಹಿಂದೆ ಹೋಗಲು ಮನಸು ಕೇಳಲಿಲ್ಲ. ಪ್ರಕಾಶನನ್ನು ಒಪ್ಪಿಸಿ ನಮ್ಮ ಪ್ರಯತ್ನ ಮಾಡಲು ಹೊರಟೆವು
ಕೇವಲ ಬೈಕ್ ನಲ್ಲಿ ಆಫ್ರಾಡ್ ಹೋಗುವ ಯೋಜನೆಯಲ್ಲಿ ಬಂದ ನಾವು ಮಧ್ಯಾಹ್ನದ ಊಟದ ಚಿಂತೆ ತಲೆಯಲ್ಲಿ ಇರಲಿಲ್ಲ. ಹಾಗಾಗಿ ಖಾಲಿ ಹೊಟ್ಟೆಯಲ್ಲೇ ನಮ್ಮ ಚಾರಣ ಮುಂದುವರಿಯಿತು. ಪ್ರಕಾಶನ ವೀಳ್ಯದೆಲೆ ಕಟ್ಟು ಕೂಡ ಮುಗಿಯುತ್ತ ಬಂದಿತ್ತು. ದೂರದಲ್ಲಿ ಕಾಣುತ್ತಿದ್ದ ಜಲಪಾತ ಕಂಡು ಖುಷಿ ಆದರೂ. ಜಾರುಬಂಡೆಗಳನ್ನು ಹತ್ತಿ ಹೋಗಬೇಕಾದ ಪರಿಸ್ಥಿತಿ. ಆದಾಗಲೇ ಪ್ರಕಾಶ ಯಾವುದೋ ಮರದ ಕೊಂಬೆಯನ್ನು ತಂದ ಅದರ ಸಹಾಯದಿಂದ ನಾವು ಆ ಜಾರುತಿದ್ದ ಬಂಡೆಯನ್ನು ಹತ್ತಿದೆವು. ಅಲ್ಲೇ ಸ್ವಲ್ಪ ದೂರದಲ್ಲಿ ಜಲಪಾತದ ಸಂಪೂರ್ಣ ಚಿತ್ರ ಕಣ್ಣಿಗೆ ಸಿಕ್ಕಿತು. ಅದು 3 ಹಂತಗಳಲ್ಲಿ ಇರುವ ಜಲಪಾತ ಸುಮಾರು 100 ಅಡಿ ಎತ್ತರ ಇರಬಹುದು. ಅದು ಮಳೆಗಾಲದಲ್ಲಿ ಕಾಣಸಿಗುವ ಜಲಪಾತ. ಬೇಸಿಗೆಗೆ ನೀರು ಕಮ್ಮಿಯಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರನ್ನು ಕಾಣಬಹುದು ಅಷ್ಟೇ. ನಾವು ಸ್ವಲ್ಪ ಕಾಲ ಅಲ್ಲೇ ಫೋಟೋ ವಿಡಿಯೋಗಳನ್ನು ತೆಗೆದು ವಿಶ್ರಮಿಸಿ ಅಲ್ಲಿಂದ ಹೊರಡಲು ಶುರು ಮಾಡಿದೆವು. ಅದು ಆಗಲೇ ಸಂಜೆ 4 ಗಂಟೆಯಾಗಿತ್ತು ಮಳೆಯು ಜೋರಾಗತೊಡಗಿತ್ತು. ನಾವು ತಡಮಾಡದೆ ಅಲ್ಲಿಂದ ಹೊರಟೆವು, ಸಂಜೆ 6.30ಕ್ಕೆ ನಾವು ಮತ್ತೆ ಶಾಂತಪ್ಪನ ಮನೆ ಸೇರಿದೆವು. ಸ್ವಲ್ಪ ಅರಿಶಿನ ಕೇಳಿ, ಜಿಗಣೆ ಕಚ್ಚಿದ ಜಾಗಕ್ಕೆ ಹಚ್ಚಿಕೊಂಡು ನಾವು ನಮ್ಮ ಮನೆಯತ್ತ ಹೊರಟೆವು. ಆ ಕಾಡಿನಲ್ಲಿ ರಾತ್ರಿ ಹೊತ್ತು ಹೋಗುವುದು ಮತ್ತೊಂದು ಸಾಹಸವೇ ಸರಿ. ರಾತ್ರಿ 11 ಗಂಟೆ ಗೆ ಮನೆ ತಲುಪಿ ಸ್ನಾನ ಮಾಡಿ ಮಲಗಿದೆವು. ಸುಸ್ತಿಗೆ ನಿದ್ರೆ ಬಂದದ್ದು ತಿಳಿಯಲೇ ಇಲ್ಲ, ಬೆಳಿಗ್ಗೆ ಶಾಂತಪ್ಪನಿಗೆ ಕಾಲ್ ಮಾಡಿ ಹುಷಾರಾಗಿ ತಲುಪಿದ ವಿಚಾರ ತಿಳಿಸಿ, ಸಹಾಯಕ್ಕೆ ಧನ್ಯವಾದ ತಿಳಿಸಿದೆವು. ಆದರೆ ಇಂದಿಗೂ ಆ ಜಲಪಾತದ ನೆನಪು ಮಾತ್ರ ನನ್ನ ನೆನಪಲ್ಲಿ ಹಚ್ಚ ಹಸಿರಾಗಿದೆ.
-ಶಿವರಾಮ ಕಿರಣ್, ಉಜಿರೆ